ಶಿವಮೊಗ್ಗ : ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್ಐಆರ್) ಕುರಿತಂತೆ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲಾ ಕಾಂಗ್ರೆಸ್ವತಿಯಿಂದ ಜೂನ್ ೨೯ರಂದು ಬೆಳಿಗ್ಗೆ ೧೧ಗಂಟೆಗೆ ಶಿವಪ್ಪನಾಯಕ ಪ್ರತಿಮೆ ಹತ್ತಿರ ಬಹಿರಂಗ ಸಭೆಯನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಸ್ಐಆರ್ಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಇನ್ನೂ ಗೊಂದಲಗಳು ಇವೆ. ಮತದಾನದಿಂದ ಯಾರೂ ವಂಚಿತರಾಗಬಾರದು ಎಂಬುದು ನಮ್ಮ ಉದ್ದೇಶವಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಚುನಾವಣೆ ಆಯೋಗದ ಜೊತೆಗೂಡಿ ಮುಖ್ಯವಾಗಿ ಕಾಂಗ್ರೆಸ್ ಮತಗಳ ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಹುನ್ನಾರ ನಡೆಸುತ್ತಿದೆ. ಇದು ತಪ್ಪಬೇಕಾಗಿದೆ. ಈ ಹಿಂದೆ ತಮಿಳುನಾಡು, ಬಿಹಾರ್, ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳಲ್ಲಿ ಉದ್ದೇಶಪೂರ್ವಕವಾಗಿ ಮತಗಳನ್ನು ಕೈಬಿಡಲಾಗಿದೆ ಎಂಬ ಆರೋಪವಿತ್ತು. ಈ ಹಿನ್ನಲೆಯಲ್ಲಿ ಈ ಬಾರಿ ಜೂನ್ ೩೦ರಿಂದ ನಡೆಯುವ ವಿಶೇಷ ಮತದಾರರ ಪಟ್ಟಿಯ ಕಾರ್ಯದಲ್ಲಿ ಎನಿಮೇಷನ್

ಫಾರಂಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಆರಂಭವಾಗುತ್ತದೆ. ಹಾಗಾಗಿ ಆ ಅರ್ಜಿಯನ್ನು ಹೇಗೆ ತುಂಬುವುದು. ಯಾವ ಯಾವ ದಾಖಲೆಗಳನ್ನು ನೀಡಬೇಕು ಎಂಬ ಮಾಹಿತಿಯ ಅರಿವು ಪ್ರತಿಯೊಬ್ಬರಿಗೂ ಇರಬೇಕಾಗುತ್ತದೆ ಮತ್ತು ಪ್ರತಿಯೊಬ್ಬ ಮತದಾರನಿಗೂ ಹೊಸದಾಗಿ ಈ ಅರ್ಜಿಯನ್ನು ನೀಡುವುದರಿಂದ ಬಹಳ ಎಚ್ಚರಿಕೆಯಿಂದ ಇದನ್ನು ತುಂಬಬೇಕಾಗುತ್ತದೆ ಎಂದರು.
ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರತೀ ಬೂತಿಗೂ ಪಕ್ಷದ ಏಜೆಂಟರನ್ನಾಗಿ ಬಿಎಲ್ಎಗಳನ್ನು ನೇಮಕ ಮಾಡಲಾಗಿದೆ. ಇವರು ಪ್ರತಿ ಮನೆಗೂ ಭೇಟಿ ನೀಡುತ್ತಾರೆ. ಮತದಾರರ ಪಟ್ಟಿ ಪರಿಶೀಲನೆ, ಫಾರಂಭರ್ತಿ, ದಾಖಲೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಾರೆ. ಪಕ್ಷದ ವತಿಯಿಂದ ಜನಜಾಗೃತಿ ಅಭಿಯಾನದ ಹಿನ್ನಲೆಯಲ್ಲಿ ಪಕ್ಷವು ಈ ಮಹತ್ಕಾರ್ಯವನ್ನು ಹಮ್ಮಿಕೊಂಡಿದೆ ಎಂದರು.

ಜೂ.೨೯ರಂದು ನಡೆಯುವ ಈ ಜಾಗೃತಿ ಬಹಿರಂಗ ಸಭೆಗೆ ಮಾಜಿ ಸಚಿವ ಮಧುಬಂಗಾರಪ್ಪ, ಶಾಸಕರುಗಳಾದ ಗೋಪಾಲಕೃಷ್ಣ ಬೇಳೂರು, ಬಿ.ಕೆ.ಸಂಗಮೇಶ್, ಬಲ್ಕೀಶ್ಭಾನು, ಮುಖಂಡರುಗಳಾದ ಕಿಮ್ಮನೆ ರತ್ನಾಕರ್ ಸೇರಿದಂತೆ ನಿಗಮ ಮಂಡಳಿಗಳ ಅಧ್ಯಕ್ಷರು, ಜನಪ್ರತಿನಿಧಿಗಳು, ಪಕ್ಷದ ಮುಖಂಡರು ಉಪಸ್ಥಿತರಿರುತ್ತಾರೆ ಎಂದರು.

ನೀಟ್ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರ ನೀಟ್ ಹಗರಣ ನಡೆದರೂ ಕೂಡ ಇದೂವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಅನೇಕ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರೂ ಕೂಡ ಪ್ರಧಾನಿಯಾಗಲೀ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ರವರಾಗಲೀ ಒಂದು ವಿಷಾಧವನ್ನು ಕೂಡ ವ್ಯಕ್ತಪಡಿಸಲಿಲ್ಲ. ಈ ಬಗ್ಗೆಯೂ ಕೂಡ ಕಾಂಗ್ರೆಸ್ ತನ್ನ ಹೋರಾಟವನ್ನು ಮುಂದುವರಿಸುತ್ತದೆ. ಧರ್ಮೇಂದ್ರ ಪ್ರಧಾನ್ರವರನ್ನು ಸಂಪುಟದಿಂದ ಕೈಬಿಡಬೇಕು. ಹಾಗೆಯೇ ಸಿಇಟಿ ಮಾದರಿಯಲ್ಲಿಯೇ ಕರ್ನಾಟಕದಲ್ಲಿಯೇ ನೀಟ್ ಪರೀಕ್ಷೆ ನಡೆಯಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಜಿ.ಡಿ.ಮಂಜುನಾಥ್, ಕಾರ್ಯದರ್ಶಿ ಎಸ್.ಟಿ.ಹಾಲಪ್ಪ, ಪ್ರಮುಖರಾದ ಶಿವಣ್ಣ, ಯು. ಶಿವಾನಂದ್, ಶಿವಕುಮಾರ್ ಉಪಸ್ಥಿತರಿದ್ದರು.