ಶಿವಮೊಗ್ಗ: “ಸದಾ ನೈತಿಕತೆಯ ಸುಳ್ಳು ಬುರುಡೆ ಬಿಡುತ್ತಾ, ಸಮಾಜಕ್ಕೆ ಉಪದೇಶ ನೀಡುವ ನಟ ಪ್ರಕಾಶ್ ರಾಜ್ ಅವರೇ, ಧರ್ಮಸ್ಥಳದಂತಹ ಪರಮ ಪವಿತ್ರ ಕ್ಷೇತ್ರ ಮತ್ತು ಸನಾತನ ಧರ್ಮದ ವಿರುದ್ಧ ನಡೆದಿರುವ ಬೃಹತ್ ಷಡ್ಯಂತ್ರದಲ್ಲಿ ನಿಮ್ಮ ಅಸಲಿ ಬಣ್ಣ ಈಗ ಜಗತ್ತಿಗೆ ಸಂಪೂರ್ಣವಾಗಿ ಬಯಲಾಗಿದೆ. ಧರ್ಮಸ್ಥಳ ಕ್ಷೇತ್ರದ ಗೌರವಕ್ಕೆ ಕಳಂಕ ತರಲು ರೂಪಿಸಲಾಗಿದ್ದ ಕುಖ್ಯಾತ ‘ಬುರುಡೆ ಗ್ಯಾಂಗ್’ ಜೊತೆ ನೀವು ಕೈಜೋಡಿಸಿರುವುದು ಈಗ ಜ್ವಲಂತ ಸಾಕ್ಷಿ ಸಮೇತ ಎದ್ದು ಕಾಣಿಸುತ್ತಿದೆ. ನಿಮ್ಮ ಈ ವ್ಯವಸ್ಥಿತ ದುಷ್ಕೃತ್ಯ ಮತ್ತು ಧಾರ್ಮಿಕ ದ್ವೇಷದ ರಾಜಕಾರಣಕ್ಕೆ ಕಾನೂನಿನಡಿಯಲ್ಲಿ ಶಿಕ್ಷೆಯಾಗಲೇಬೇಕು,” ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ಅತ್ಯಂತ ಆಕ್ರಮಣಕಾರಿಯಾಗಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ತೀಕ್ಷ್ಣವಾದ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ನಟ ಪ್ರಕಾಶ್ ರಾಜ್ ನೈತಿಕತೆ ಮಾರಿಕೊಂಡು ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದ ಭಾಗವಾಗಿರುವುದನ್ನು ಸಾಬೀತುಪಡಿಸುವ ಪ್ರಮುಖ ಅಂಶಗಳನ್ನು ಪಾಯಿಂಟ್ಗಳ ರೂಪದಲ್ಲಿ ಇಲ್ಲಿ ಮಂಡಿಸಿದ್ದಾರೆ:
ನಿಮಗೆ ಯಾವುದೇ ಪೂರ್ವ ಪರಿಚಯವಿಲ್ಲದಿದ್ದರೂ ಗಿರೀಶ್ ಮಟ್ಟಣ್ಣನವರ್ ನಿಮಗೆ ನೇರವಾಗಿ ಫೋನ್ ಮಾಡಿದ್ದು ಹೇಗೆ? ಸಾರ್ವಜನಿಕವಾಗಿ ಯಾರ ಫೋನ್ಗಳನ್ನೂ ಸ್ವೀಕರಿಸದ ನೀವು, ಧರ್ಮಸ್ಥಳ ವಿರೋಧಿ ಅಪರಿಚಿತರ ಜೊತೆ ಮಾತಾಡುವಷ್ಟು ಫ್ರೀ ಇದ್ದೀರಾ? ಈ ರಹಸ್ಯ ಸಂಪರ್ಕದ ಹಿಂದಿರುವ ಅಸಲಿ ಉದ್ದೇಶವೇನು?
ಧರ್ಮಸ್ಥಳದ ವಿರುದ್ಧದ ಬೃಹತ್ ಷಡ್ಯಂತ್ರದಲ್ಲಿ ಸಲಹೆ ಪಡೆಯಲು ಚಿನ್ನಯ್ಯ ಎಂಬಾತ ನಿಮಗೆ ಫೋನ್ ಮಾಡಿದ್ದೇಕೆ ಮತ್ತು ನೀವೇಕೆ ಆತನಿಗೆ ಕುತಂತ್ರದ ಆಲೋಚನೆಗಳ ಕುರಿತು ಸಲಹೆ ನೀಡಿದಿರಿ? ತಾವು ಅಷ್ಟೊಂದು ಸಾಚಾ ಆಗಿದ್ದರೆ, ಆ ಚೆನ್ನಯ್ಯನನ್ನು ತಬ್ಬಿಕೊಳ್ಳುವ ಮತ್ತು ಆತನಿಗೆ ಬೆಂಬಲ ನೀಡುವ ಆಶ್ವಾಸನೆ ನೀಡುವ ಅಗತ್ಯ ಏನಿತ್ತು?

ಈ ಗಂಭೀರ ಪ್ರಕರಣದಲ್ಲಿ ಪ್ರತಿಯೊಬ್ಬರ ವಿಚಾರಣೆಯನ್ನು ಕಟ್ಟುನಿಟ್ಟಾಗಿ ಮಾಡಬೇಕಾಗಿದ್ದ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿಯವರು ನಿಮ್ಮನ್ನು ಇಂದಿನವರೆಗೂ ಯಾಕೆ ಕರೆಯಿಸಿ ಪ್ರಶ್ನಿಸಿಲ್ಲ? ‘ಚಿನ್ನಯ್ಯನಿಂದ ತಕ್ಷಣ ಅಂತರ ಕಾಯ್ದುಕೊಳ್ಳಿ’ ಎಂದು ಹೇಳಿ ನಿಮ್ಮನ್ನು ಒಳಗೊಳಗೇ ಬಚಾವ್ ಮಾಡಿದ್ದು ಯಾಕೆ? ಇದರ ಹಿಂದೆ ಯಾವ ರಾಜಕೀಯ ಪ್ರಭಾವ ಅಡಗಿದೆ?
ಧರ್ಮಸ್ಥಳದ ಬುರುಡೆ ಪ್ರಕರಣಕ್ಕೂ ನಿಮಗೂ ಯಾವುದೇ ಸಂಬಂಧವೇ ಇಲ್ಲ ಎಂದಾದ ಮೇಲೆ, ಈ ಇಡೀ ಕುಕೃತ್ಯದ ಆರಂಭದ ದಿನಗಳಲ್ಲಿ ನೀವು ಸಾಮಾಜಿಕ ಜಾಲತಾಣಗಳಲ್ಲಿ ಬುರುಡೆ ಗ್ಯಾಂಗಿನ ಪರವಾಗಿ ನಿರಂತರವಾಗಿ ಪೋಸ್ಟ್ಗಳನ್ನು ಹಾಕುತ್ತಾ ಬೆಂಬಲಿಸುತ್ತಿದ್ದದ್ದು ಯಾಕೆ?
ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದರೆ ಧರ್ಮಸ್ಥಳದ ಈ ದೊಡ್ಡ ಷಡ್ಯಂತ್ರದಲ್ಲಿ ನಿಮ್ಮ ಪಾತ್ರವೂ ಅತ್ಯಂತ ಪ್ರಮುಖವಾದದ್ದು ಮತ್ತು ಆಳವಾದದ್ದು ಎಂದು ಕನ್ನಡಿಯಷ್ಟೇ ಸ್ಪಷ್ಟವಾಗಿ ಎತ್ತಿ ತೋರಿಸುತ್ತಿದೆ. ಸನಾತನ ಧರ್ಮದ ಶ್ರದ್ಧಾ ಕೇಂದ್ರಗಳ ಮೇಲೆ ಕಳಂಕ ತರುವುದನ್ನೇ ಕಾಯಕ ಮಾಡಿಕೊಂಡಿರುವ ಇಂತಹ ಕಿಡಿಗೇಡಿಗಳನ್ನು ಸುಮ್ಮನೆ ಬಿಡಬಾರದು.
ಆದ್ದರಿಂದ, ರಾಜ್ಯ ಸರ್ಕಾರವು ಯಾವುದೇ ಮುಲಾಜಿಗೆ ಒಳಗಾಗದೆ ಕೂಡಲೇ ನಟ ಪ್ರಕಾಶ್ ರಾಜ್ನನ್ನು ವಿಚಾರಣೆಗೆ ಒಳಪಡಿಸಬೇಕು ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಈತನನ್ನು ತಕ್ಷಣವೇ ಬಂಧಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇನೆ.