ಶಿವಮೊಗ್ಗ : ಸಂಚಾರಿ ಪೊಲೀಸರು ಇಂದು ವಿಶೇಷ ಕಾರ್ಯಾಚರಣೆ ನಡೆಸಿ, ನಗರದಲ್ಲಿ ಸಂಚರಿಸುವ 92ಕ್ಕೂ ಹೆಚ್ಚು ಶಾಲಾ ಬಸ್ಸುಗಳ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನಾಲ್ಕು ಶಾಲಾ ಬಸ್ಸುಗಳ ಚಾಲಕರು, ಮಧ್ಯಪಾನ ಸೇವಿಸಿದ್ದು, ಅವರ ಮೇಲೆ ಕೇಸು ದಾಖಲಿಸಲಾಗಿದೆ.
ಐದು ಚಾಲಕರು ಯೂನಿಫಾರಂ ಧರಿಸಿರಲಿಲ್ಲ. ಐದು ಬಸ್ಸುಗಳು ಫಿಟ್ನೆಸ್ ಅವಧಿ ಮುಗಿದಿತ್ತು. ಚಾಲಕರ ಆರೋಗ್ಯ ಪ್ರಮಾಣಪತ್ರ ಹಾಗೂ ಬಸ್ಸುಗಳ ಸ್ವಚ್ಛತೆ ಮತ್ತು ದಾಖಲಾತಿಗಳನ್ನು ಪರಿಶೀಲಿಸಲಾಯಿತು. ಹಾಗೂ ಚಾಲಕರಿಗೆ ಮತ್ತು ಶಾಲಾ ಸಂಸ್ಥೆಗಳ ಮಾಲೀಕರಿಗೆ ಎಚ್ಚರಿಕೆಯನ್ನು ನೀಡಲಾಗಿದೆ. ಸಂಚಾರಿ ಪೊಲೀಸರ ಈ ಕ್ರಮ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಸಾವಿರಾರು ಮಕ್ಕಳು ಪ್ರತಿನಿತ್ಯ ಶಾಲಾ ಬಸ್ಸುಗಳಲ್ಲಿ ಸಂಚರಿಸುತ್ತಿದ್ದು, ಕೆಲವೊಂದು ಬಸ್ಸುಗಳ ಚಾಲಕರು ನಿಯಮ ಮೀರಿ ವರ್ತಿಸುವುದು, ಮದ್ಯಪಾನ ಮಾಡಿ ವಾಹನ ಚಲಾಯಿಸುವುದರ ಬಗ್ಗೆ ಪೋಷಕರು ಸಂಚಾರಿ ಪೊಲೀಸರ ಗಮನಕ್ಕೂ ತಂದಿದ್ದರು. ನಗರದ ಅನೇಕ ಶಾಲಾ ಬಸ್ಸುಗಳು ಫಿಟ್ನೆಸ್ ಅವಧಿ ಮುಗಿದಿದ್ದು, ಆಡಳಿತ ಮಂಡಳಿ ನಿರ್ಲಕ್ಷ್ಯಧೋರಣೆ ತಳಿದಿತ್ತು. ಈ ಬಗ್ಗೆ ಕೂಡ ಶಾಲಾ-ಕಾಲೇಜು ಆಡಳಿತ ಮಂಡಳಿಗೆ ಸಂಚಾರಿ ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಕಾರ್ಯಾಚರಣೆಯ ನೇತೃತ್ವವನ್ನು ಸಂಚಾರಿ ಪೊಲೀಸ್ ಇನ್ಸ್ಪೆಕ್ಟರ್ ದೇವರಾಜ್ ವಹಿಸಿದ್ದರು.

ಸಬ್ ಇನ್ಸ್ಪೆಕ್ಟರ್ ಸ್ವಪ್ನ, ಭಾರತೀ ಸುರೇಶ್ ಸೇರಿದಂತೆ ಸಂಚಾರಿ ಎಎಸ್ಐ ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.