ಶಿವಮೊಗ್ಗ : ತೋಟಗಾರಿಕೆ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಮತ್ತು ದರ ಒದಗಿಸಿಕೊಡುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ ನಿ., (ಹಾಪ್ ಕಾಮ್ಸ್)ನಿಂದ ಜೂನ್ ೫,೬,೭ರಂದು ಮೂರು ದಿನಗಳ ಕಾಲ ಎಪಿಎಂಸಿ ಪ್ರಾಂಗಣ ವಿನೋಬನಗರದ ೧೦೦ ಅಡಿ ರಸ್ತೆಗೆ ಅಭಿಮುಖವಾಗಿ ವಿವಿಧ ಬಗೆಯ ಮಾವು ಮತ್ತು ಹಲಸಿನ ಮೇಳವನ್ನು ಆಯೋಜಿಸಲಾಗಿದೆ. ಜೂನ್ ೫ರಂದು ಬೆಳಿಗ್ಗೆ ೧೦.೩೦ಕ್ಕೆ ಮೇಳದ ಉದ್ಘಾಟನೆ ನಡೆಯಲಿದೆ ಎಂದು ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಆರ್.ವಿಜಯಕುಮಾರ್ (ದನಿ) ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಹಾಪ್ಕಾಮ್ಸ್ ತೋಟಗಾರಿಕೆ ಇಲಾಖೆಯ ಅಂಗಸಂಸ್ಥೆಯಾಗಿದ್ದು, ‘ಬೆಳೆಗಾರರಿಂದ ಬಳಕೆದಾರರಿಗೆ’ ಕಾರ್ಯಕ್ರಮದಡಿ ಕಾರ್ಯನಿರ್ವಹಿಸುತ್ತಿದೆ. ಸದಸ್ಯರ ತೋಟಗಾರಿಕಾ ಉತ್ಪನ್ನಗಳನ್ನು ಲಾಭದಾಯಕ ಬೆಲೆಗೆ ಮಾರಾಟ ಮಾಡಲು ಉತ್ಪನ್ನಗಳ ಸಂಗ್ರಹಣೆ ಮಾಡುವುದಲ್ಲದೆ ಗ್ರಾಹಕರಿಗೆ ನೇರ ಮಾರಾಟ ಮಾಡುವುದರ ಉದ್ದೇಶದೊಂದಿಗೆ ಜಿಲ್ಲೆಯ ಮತ್ತು ಅಂತರ್ ಜಿಲ್ಲೆಯ ರೈತರಿಗೆ ಋತುಮಾನಕ್ಕನುಗುಣವಾಗಿ ಬೆಳೆಯುವ ತೋಟಗಾರಿಕೆ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಮತ್ತು ದರ ಒದಗಿಸಿಕೊಡುವ ಕಾರ್ಯಕ್ರಮದ ಅಡಿಯಲ್ಲಿ ಈ ಮಾವು, ಹಲಸು ಮೇಳವನ್ನು ಆಯೋಜಿಸಲಾಗಿದೆ ಎಂದರು.

ಈ ಮೇಳಕ್ಕೆ ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕಾ ಮಾರಾಟ ಮಹಾಮಂಡಳ ನಿ., ಮತ್ತು ಮಾವು-ಹಲಸಿನ ಬೆಳೆಗಾರರ ಸಹಕಾರ ಸಂಘ ರಾಮನಗರ ಇವರ ಸಹಯೋಗವಿದೆ. ಈ ಮೇಳದಲ್ಲಿ ಅಲ್ಪಾನ್ಸೋ, ಮಲಗೋವಾ, ಮಲ್ಲಿಕಾ, ಕೇಸರ್, ಸಕ್ರೇಗುತ್ತಿ, ಕಾಲಪೋಡು, ರಸಪುರಿ, ಸಿಂಧೂರ ಮೊದಲಾದ ಪ್ರಮುಖ ತಳಿಗಳ ಹಣ್ಣುಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗುವುದು. ಇದರ ಸದುಪಯೋಗವನ್ನು ಹಣ್ಣು ಬೆಳೆಗಾರರು, ರೈತ ಬಾಂಧವರು, ಮತ್ತು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಕೋರಿದರು.
ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆ ಮತ್ತು ಸಿಮ್ಸ್ಗಳನ್ನು ಹಾಪ್ಕಾಮ್ಸ್ದಿಂದಲೇ ಹಣ್ಣು ಪೂರೈಕೆ ಮಾಡಬೇಕೆಂದಿದ್ದರೂ ರಾಜ್ಯಮಟ್ಟದಲ್ಲಿಯೇ ಈ ಕುರಿತು ಟೆಂಡರ್ ಪ್ರಕ್ರಿಯೆ ನಡೆಯುವುದರಿಂದ ನಮಗೆ ಅವಕಾಶ ಸಿಗುತ್ತಿಲ್ಲ. ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಅಲ್ಲದೆ, ರಾಜ್ಯಾದ್ಯಂತ ಹಾಪ್ಕಾಮ್ಸ್ ಮೂಲಕವೇ ಹಣ್ಣುಗಳ ಸರಬರಾಜು ಮಾಡಲು ಅವಕಾಶ ನೀಡಬೇಕು ಎಂದು ಸರ್ಕಾರವನ್ನು ಕೇಳಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರಾದ ಶರತ್ ಮರಿಯಪ್ಪ, ಉಂಬ್ಳೆಬೈಲು ಮೋಹನ್, ಕಾಂತ್ರಾಜ್, ಸಿದ್ದರಾಜು, ನಾರಾಯಣಪ್ಪ, ಅಧಿಕಾರಿಗಳಾದ ಕಾಟ್ರಾಜ್, ಅಕ್ಷಯ್ ಇದ್ದರು.