ಹಿಮಾಲಯದ ಶಿಖರದಿಂದ ಭಾರತದ ಪ್ರತಿ ಮನೆ ಮನೆ ಗಳಲ್ಲಿ ಸಂಸ್ಕೃತ ವಾಣಿ ಮೊಳಗಬೇಕು ಎಂದು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಶ್ರೀನಿವಾಸ ವರಖೇಡಿಯವರು ತಿಳಿಸಿದರು.
ಅವರು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ನವದೆಹಲಿ, ಸಂಸ್ಕೃತ ಭಾರತಿ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಶಿವಮೊಗ್ಗ, ಯೂಥ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕ ಶಿವಮೊಗ್ಗ, ಗಿರ್ವಾಣಭಾರತಿ ಘಟಕ ಶ್ರೀ ಆದಿಚುಂಚನಗಿರಿ ಕ್ಷೇತ್ರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹಿಮಾಲಯದ ಕುಲು ತಪ್ಪಲಿನಲ್ಲಿರುವ ರೋಲಿ ಖೋಲಿ ಹಿಮಾಲಯ ಪರ್ವತದಲ್ಲಿ 31.05.2026 ರ ಭಾನುವಾರ ಬೆಳಿಗ್ಗೆ 10.30 ಕ್ಕೆ ನಡೆದ ಸಂಸ್ಕೃತ ಧ್ವಜಾರೋಹಣ ಸಂದರ್ಭದಲ್ಲಿ ಆಶಯ ನುಡಿಯಲ್ಲಿ ಇಂದು ಕುಲುಮನಾಲಿ ನಗರದ ಸಮೀಪದಲ್ಲಿರುವ ಸುಂದರವಾದ ರೋಲಿ–ಖೋಲಿ ಹಿಮಾಲಯ ಪರ್ವತದಲ್ಲಿ ಆರನೇ ಬಾರಿಗೆ ಸಂಸ್ಕೃತ ಧ್ವಜಾರೋಹಣ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿರುವುದು ನನಗೆ ಅತ್ಯಂತ ಸಂತೋಷದ ವಿಷಯವಾಗಿದೆ.
ಈ ಕಾರ್ಯಕ್ರಮದ ಎಲ್ಲಾ ಆಯೋಜಕರು, ಭಾಗವಹಿಸಿದವರು ಹಾಗೂ ಸಹಕರಿಸಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳು ಮತ್ತು ಅಭಿನಂದನೆಗಳು.
ಸಂಸ್ಕೃತ ಭಾಷೆ ಕೇವಲ ಪ್ರಾಚೀನ ಭಾಷೆಯಲ್ಲ; ಅದು ಅತ್ಯಂತ ವೈಜ್ಞಾನಿಕವಾಗಿ ವ್ಯವಸ್ಥಿತಗೊಂಡ ಭಾಷೆಯಾಗಿದೆ. ಈ ಭಾಷೆಯ ಅಧ್ಯಯನವು ಬಾಲ್ಯಾವಸ್ಥೆಯಲ್ಲಿಯೇ ಆರಂಭವಾಗಬೇಕು. ಏಕೆಂದರೆ ಸಂಸ್ಕೃತ ಅಧ್ಯಯನದಿಂದ ಭಾಷಾ ಜ್ಞಾನ, ತಾರ್ಕಿಕ ಚಿಂತನೆ, ಸಾಂಸ್ಕೃತಿಕ ಅರಿವು ಹಾಗೂ ನೈತಿಕ ಮೌಲ್ಯಗಳು ವೃದ್ಧಿಯಾಗುತ್ತವೆ. ಸಂಸ್ಕೃತದ ಅಮೂಲ್ಯ ಜ್ಞಾನಭಂಡಾರವನ್ನು ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ತಲುಪಿಸುವ ಉದ್ದೇಶದಿಂದಲೇ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪಿತವಾಗಿದೆ. ವಿಶ್ವವಿದ್ಯಾಲಯವು ದೇಶದ ವಿವಿಧ ಆವರಣಗಳಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾ, ಸಂಸ್ಕೃತದ ಪ್ರಚಾರ ಮತ್ತು ಪ್ರಸಾರ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ.
ಈ ಹಿಮಾಲಯ ಚಾರಣದಲ್ಲಿ ವಿಶ್ವವಿದ್ಯಾಲಯದ ಹನ್ನೆರಡು–ಹದಿಮೂರು ಆವರಣಗಳಿಂದ ಐವತ್ತೊಂದು (50) ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಇಂತಹ ಚಾರಣ ಕಾರ್ಯಕ್ರಮಗಳು ವಿದ್ಯಾರ್ಥಿಗಳ ದೈಹಿಕ ಆರೋಗ್ಯ ವೃದ್ಧಿಗೆ, ಸಾಹಸ ಮನೋಭಾವದ ಬೆಳವಣಿಗೆಗೆ, ಆತ್ಮವಿಶ್ವಾಸದ ವೃದ್ಧಿಗೆ ಹಾಗೂ ನಾಯಕತ್ವ ಗುಣಗಳ ಅಭಿವೃದ್ಧಿಗೆ ಅತ್ಯಂತ ಉಪಯುಕ್ತವಾಗಿವೆ.
ಹಿಮಾಲಯದ ದಿವ್ಯ ವಾತಾವರಣದಲ್ಲಿ ಸಂಸ್ಕೃತ ಧ್ವಜವನ್ನು ಹಾರಿಸುವುದು ಭಾರತೀಯ ಸಂಸ್ಕೃತಿಯ ವೈಭವ ಮತ್ತು ಗೌರವದ ಸಂಕೇತವಾಗಿದೆ.
ನಾವು ಸಂಸ್ಕೃತ ಭಾಷೆಯನ್ನು ಕೇವಲ ಪಠ್ಯಕ್ರಮಗಳಿಗೆ ಮಾತ್ರ ಸೀಮಿತಗೊಳಿಸದೆ, ದೈನಂದಿನ ಜೀವನದಲ್ಲಿಯೂ ಬಳಸಬೇಕು. ಪ್ರತಿಯೊಂದು ಮನೆಯಲ್ಲಿ ಸಂಸ್ಕೃತ ಭಾಷೆಯ ಮಧುರ ಧ್ವನಿ ಮೊಳಗಬೇಕು; ಪ್ರತಿಯೊಬ್ಬ ಬಾಲಕ–ಬಾಲಕಿಯೂ ಸಂಸ್ಕೃತವನ್ನು ಓದಬೇಕು, ಮಾತನಾಡಬೇಕು ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದು ನನ್ನ ದೃಢವಾದ ಆಶಯವಾಗಿದೆ.
ಸಂಸ್ಕೃತದ ಪ್ರಚಾರ, ಸಂಸ್ಕಾರಗಳ ಸಂರಕ್ಷಣೆ ಹಾಗೂ ರಾಷ್ಟ್ರದ ಸಾಂಸ್ಕೃತಿಕ ವೈಭವದ ಸಂವರ್ಧನೆ — ಇವು ನಮ್ಮೆಲ್ಲರ ಸಾಮೂಹಿಕ ಕರ್ತವ್ಯಗಳಾಗಿವೆ. ನಾವು ಎಲ್ಲರೂ ಒಗ್ಗಟ್ಟಿನಿಂದ ಸಂಸ್ಕೃತ ಭಾಷೆಯ ಉಜ್ವಲ ಭವಿಷ್ಯ ನಿರ್ಮಾಣಕ್ಕಾಗಿ ಶ್ರಮಿಸೋಣ ಎಂದರು.
ಈ ಸಂದರ್ಭದಲ್ಲಿ ಕೇಂದ್ರೀಯ ಸಂಸ್ಕೃತ ವಿಶ್ವ ವಿಶ್ವವಿದ್ಯಾಲಯದ ಜೈಪುರ ಪರಿಸರದ ಸಹಾಯಕ ನಿರ್ದೇಶಕ ಡಾ.ರಾಜೇಂದ್ರ ಕುಮಾರ ಶರ್ಮ, ಸಂಸ್ಕೃತ ಭಾರತಿ ಹಾಗೂ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಪ್ರಮುಖ ಹಾಗೂ ಚಾರಣದ ಸಂಯೋಜಕ ಅ.ನಾ.ವಿಜಯೇಂದ್ರ ರಾವ್, ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಚಾರಣದ ರೂವಾರಿ, ನವೀನ ಚಂದ್ರ ತಿವಾರಿ, ಹಾಗೂ ತಂಡದ ನಾಯಕಿ ವೈ.ಹೆಚ್.ಏ.ಐ. ಸಾಗರ ಘಟಕದ ಎಮ್.ಕೆ.ಜ್ಯೋತಿ, ರೋಲಿಖೋಲಿ ಶಿಬಿರ ನಾಯಕ ಆದಿತ್ಯ, ಉಪಸ್ಥಿತರಿದ್ದರು.