ಶಿವಮೊಗ್ಗ : ಪರಿಸರ ಮಾರಕ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ತಡೆಹಿಡಿಯುವಂತೆ ರಾಜ್ಯ ಉಚ್ಛ ನ್ಯಾಯಾಯಲ ತಡೆಯಾಜ್ಞೆ ನೀಡಿದ್ದರೂ ಸ್ಥಳೀಯರಿಗೆ ಗೊತ್ತಾಗದ ರೀತಿಯಲ್ಲಿ ಕೇಂದ್ರ ಸರ್ಕಾರದ ಸೆಂಟ್ರಲ್ ಎಂಪವರ್ಡ್ (ಸಿಇಸಿ) ಕಮಿಟಿಯು ಯೋಜನಾ ಪ್ರದೇಶಕ್ಕೆ ಸಮೀಕ್ಷೆಗೆಂದು ಬರುತ್ತಿರುವುದು ತಿಳಿದು ಬಂದಿದೆ. ಇದನ್ನು ರಾಷ್ಟ್ರಭಕ್ತರ ಬಳಗ ಮತ್ತು ಪರಿಸರಕ್ಕಾಗಿ ನಾವು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತವೆ ಎಂದು ರಾಷ್ಟ್ರಭಕ್ತರ ಬಳಗದ ಮುಖ್ಯಸ್ಥ ಕೆ.ಎಸ್.ಈಶ್ವರಪ್ಪ ಗುಡುಗಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತಾವಿತ ಮಾರಕ ಯೋಜನೆಯ ವಿರುದ್ಧ ನಾವು ಈಗಾಗಲೇ ಹೋರಾಟವನ್ನು ಮಾಡುತ್ತಾ ಬಂದಿದ್ದೇವೆ. ಅಲ್ಲದೆ ಕೇಂದ್ರ ಸರ್ಕಾರದ ಪರಿಸರ ಮತ್ತು ಹವಾಮಾನ ಇಲಾಖೆಯ ಸಂಶೋಧನಾ ಮುಖ್ಯಸ್ಥರಾದ ಪ್ರಣೀತಾ ಕೌರ್ ಹಾಗೂ ಇನ್ನಿತರ ಕೇಂದ್ರ ಸರ್ಕಾರದ ಪರಿಸರ ಮಂತ್ರಾಲಯದ ಮುಖ್ಯಸ್ಥರೇ ಪಶ್ಚಿಮಘಟ್ಟದ ಸೆರಗಿನಲ್ಲಿರುವ ಶರಾವತಿ ಕಣಿವೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಾರದು ಎಂಬ ಸ್ಪಷ್ಟ ಅಭಿಪ್ರಾಯವನ್ನು ನೀಡಿದ್ದಾರೆ. ಅಲ್ಲದೆ ರಾಜ್ಯ ಉಚ್ಛ ನ್ಯಾಯಾಲಯವು ಕೂಡ ಈ ಯೋಜನೆಗೆ ತಡೆಯಾಜ್ಞೆ ನೀಡಿದೆ. ಆದಾಗ್ಯೂ ಸಿಇಸಿ ಕಮಿಟಿಯವರು ಯೋಜನಾ ಪ್ರದೇಶಕ್ಕೆ ಭೇಟಿನೀಡಿ ಇಲ್ಲಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆಪಿಸಿಎಲ್ ಅಧಿಕಾರಿಗಳು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಭೇಟಿಮಾಡಿ ಯೋಜನೆಯ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸುವುದು ಎಂದು ಮೇ೧೮ರಂದು ಹೊರಡಿಸಿದ ಕೇಂದ್ರ ಸರ್ಕಾರದ ಪರಿಸರ ಮಂತ್ರಾಲಯದ ಪತ್ರವೊಂದರಲ್ಲಿ ತಿಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದು ಉಚ್ಛ ನ್ಯಾಯಾಲಯದ ಸ್ಪಷ್ಟ ನಿಂದನೆಯಾಗಿದೆ ಎಂದು ಕಿಡಿಕಾರಿದರು.

ಒಂದು ಸಾಂವಿಧಾನಿಕ, ಸ್ವಯತ್ತ ಸಂಸ್ಥೆ ಸ್ಥಳೀಯ ಯೋಜನಾ ಪ್ರದೇಶಕ್ಕೆ ಬರುವ ಸಂದರ್ಭದಲ್ಲಿ ಯೋಜನೆಯ ವಿರುದ್ಧ ಜನಾಭಿಪ್ರಾಯ, ಉಗ್ರ ಹೋರಾಟ ಮಾಡುತ್ತಿರುವ ಸಂಘಟನೆಗಳನ್ನೇ ನಿರ್ಲಕ್ಷಿಸುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಈ ಸಮಿತಿಯ ಇಲ್ಲಿಗೆ ಬರುವಾಗ ಸಾರ್ವಜನಿಕರಿಗೆ ಮಾಹಿತಿ ಕೊಡದಿರಲು ಕಾರಣವೇನು, ಇದರ ಹಿಂದೆ ಯಾವುದೋ ಕಾಣದ ಕೈಗಳು ಷಡ್ಯಂತ್ರ ನಡೆಸುತ್ತಿವೆ ಎಂಬ ಅನುಮಾನ ಗಾಢವಾಗಿದೆ. ಅಲ್ಲದೆ ಮೂಕಾಂಬಿಕ ಸಂರಕ್ಷಿತ ಅರಣ್ಯ ಪ್ರದೇಶದ ೪೦೦೦ ಮೇಗಾವ್ಯಾಟ್ ಸಾಮರ್ಥ್ಯದ ವರಾಹಿ ಪಂಪ್ಡ್ ಸ್ಟೋರೇಜ್ ಯೋಜನೆಗೂ ತಾಂತ್ರಿಕ ಅನುಮೋದನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದ ಅವರು, ಈಗಾಗಲೇ ಶರಾವತಿ ಪಂಪ್ಡ್ ಸ್ಟೋರೇಜ್ ವಿರುದ್ಧ ೭೫ ಸಾವಿರಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಇಂತಹದ್ದರಲ್ಲಿ ಸಿಇಸಿ ಕಮಿಟಿಯು ಸೌಜನ್ಯಕ್ಕಾದರೂ ಇಲ್ಲಿಯ ಭೇಟಿಯ ಮಾಹಿತಿಯನ್ನು ನಮಗೆ ನೀಡಬೇಕಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಳೆ ಜೂನ್ ೨ರಂದು ಸಂಜೆ ೪ಗಂಟೆಗೆ ಸಿಇಸಿ ಸಮಿತಿಯು ಇಲ್ಲಿಯ ಶ್ರೀಗಂಧದ ಕೋಠಿಯಲ್ಲಿರುವ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿಗೆ ಭೇಟಿನೀಡಲಿದ್ದು, ಈ ಸಂದರ್ಭದಲ್ಲಿ ನಮ್ಮ ಸಮಿತಿಯ ಪದಾಧಿಕಾರಿಗಳು ಸಿಇಸಿ ಸಮಿತಿಯ ಮುಖ್ಯಸ್ಥರನ್ನು, ಸದಸ್ಯರನ್ನು ಭೇಟಿಮಾಡಿ ಯೋಜನೆಯ ವಿರುದ್ಧ ತಾವು ಹಮ್ಮಿಕೊಂಡ ಹೋರಾಟದ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ ಮತ್ತು ಅವರು ನ್ಯಾಯಾಲಯದ ಅನುಮತಿ ಇಲ್ಲದೆ ಪರಿಶೀಲನೆಗೆ ಬಂದಿರುವುದು ನ್ಯಾಯಾಲಯದ ನಿಂದನೆಯಾಗುತ್ತಿದ್ದು, ಈ ಬಗ್ಗೆ ಅವರಿಗೆ ರಾಷ್ಟ್ರಭಕ್ತರ ಬಳಗ ಪ್ರಶ್ನಿಸಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರಭಕ್ತ ಬಳಗದ ಪ್ರಮುಖರಾದ ಶ್ರೀಕಾಂತ್, ಮಹಾದೇವ ಸ್ವಾಮಿ, ಸುಬ್ಬಣ್ಣ, ದಿಲೀಪ್ ನಾಡಿಗ್, ವಿ.ರಾಜು, ಪರಿಸರ ರಮೇಶ್, ಎಸ್.ಬಿ. ಅಶೋಕ್ಕುಮಾರ್ ಮೊದಲಾದವರಿದ್ದರು.