ಶಿವಮೊಗ್ಗ: ಹೊಸನಗರ ತಾಲ್ಲೂಕಿನ ಮಾರುತೀಪುರ ಪ್ರೌಢಶಾಲೆಯಲ್ಲಿ ಶಾಲಾ ಮಕ್ಕಳಿಗೆ ವಿತರಿಸಲು ಸಂಗ್ರಹಿಸಿಟ್ಟಿದ್ದ ಸಮವಸ್ತ್ರ ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ.
ಸೋಮವಾರ ಶಾಲಾ ಕೊಠಡಿ ತೆರೆದಾಗ ಸಮವಸ್ತ್ರದ ರಾಶಿಗೆ ಬೆಂಕಿ ಬಿದ್ದಿದ್ದು ಸುಟ್ಟು ಕರಕಲಾಗಿದ್ದವು. ೨೦೨೦- ೨೧ನೇ ಸಾಲಿನ ಮಕ್ಕಳಿಗೆ ವಿತರಿಸಲು ಶಾಲಾಡಳಿತ ಕೊಠಡಿಯಲ್ಲಿ ಸಂಗ್ರಹಿಸಿಟ್ಟಿತ್ತು. ಶನಿವಾರ ಸಂಜೆಯವರೆಗೂ ಸುಸ್ಥಿತಿಯಲ್ಲಿದ್ದವು. ಕೊಠಡಿಯ ಒಂದು ಕಿಟಕಿಯ ಬಾಗಿಲು ಪೂರ್ಣವಾಗಿ ಮುಚ್ಚಲು ಬರುತ್ತಿರಲಿಲ್ಲ. ಇದನ್ನು ಬಳಸಿ ಕಿಡಿಗೇಡಿಗಳು ಹೊರಗಿನಿಂದ ಬಟ್ಟೆಗೆ ಬೆಂಕಿ ಹಚ್ಚಿದ್ದಾರೆ ಎಂದು ಶಾಲಾಡಳಿತ ಸಂಶಯ ವ್ಯಕ್ತಪಡಿಸಿದೆ.
ಶಾಸಕ ಎಚ್.ಹಾಲಪ್ಪ ಹರತಾಳು, ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ, ಖಂಡನೆ ವ್ಯಕ್ತವಾಗಿದೆ. ’ಶಾಲೆಯೊಂದು ದೇಗುಲ ಎಂದು ಪರಿಭಾವಿಸುವಲ್ಲಿ ಬೆಂಕಿ ಇಡುವಂತಹ ಮನಸ್ಥಿತಿ ಇರುವ ಆರೋಪಿಗಳನ್ನು ಹುಡುಕಿ ಅವರಿಗೆ ತಕ್ಕ ಶಿಕ್ಷೆ ನೀಡಬೇಕು’ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.