ರಿಪ್ಪನಪೇಟೆ : ಹೊಸನಗರ ವಲಯ ವ್ಯಾಪ್ತಿಯ ನಂದಿಗಾ ಗ್ರಾಮದ ಸರ್ವೆ ನಂ.15ರ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಡಿದು ಮಣ್ಣಿನಲ್ಲಿ ಮುಚ್ಚಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಬೀಟೆ ಮರದ ತುಂಡುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಹೊಸನಗರ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ಎಸ್.ಎ.ಇ ನೇತೃತ್ವದ ತಂಡ, ಕೃಷಿ ಜಮೀನಿನ ಪಕ್ಕದಲ್ಲಿದ್ದ ಮಣ್ಣಿನಡಿ ಅಡಗಿಸಿಟ್ಟಿದ್ದ 14 ಬೀಟೆ ಜಾತಿಯ ಮರದ ತುಂಡುಗಳನ್ನು ಪತ್ತೆಹಚ್ಚಿದೆ.“ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ನಿವಾಸಿ ಎಂ.ಗಣೇಶ್ ಬಿನ್ ಬಾಬುಶೆಟ್ಟಿ (40) ವಿರುದ್ಧ ಅರಣ್ಯ ಕಾಯ್ದೆಯಡಿ ಹೊಸನಗರ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ಎಸ್., ಉಪ ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್, ಪ್ರಶಾಂತ್ ಜಿ. ಪುಟ್ಟಸ್ವಾಮಿ, ಗಿರೀಶ್ ಸೇರಿದಂತೆ ಅರಣ್ಯ ಪಾಲಕರು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.