ಶಿವಮೊಗ್ಗ : 1995ರ ನಂತರ ಆರಂಭಿಸಲಾದ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳಿಗೆ ಬೇರೆ ಗ್ಯಾರಂಟಿ ಯೋಜನೆಗಳ ಜೊತೆ ವೇನಾನುದಾನ ಗ್ಯಾರಂಟಿಯನ್ನೂ ನೀಡುವಂತೆ ಆಗ್ರಹಿಸಿ ಜೂನ್ 5ರಂದು ಶಾಲಾ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪನವರ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ಅನುದಾನರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಲೀಗಳ ಮತ್ತು ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಟಿ.ಸಿ.ಶಿವಪ್ಪ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಅವರು ಇಂದು ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಸೇರಿದಂÉ್ಪಲ್ಲ ಸಚಿವ, ಶಾಸಕರು ಕನ್ನಡ ಭಾಷೆ ಉಳಿವಿನ ಬಗ್ಗೆ ಮಾತನಾಡುತ್ತಾರೆ. ಆದರೆ ಅದು ಕೇವಲೆ ಮಾಧ್ಯಮಗಳ ಮುಂದಿನ ಹೇಳಿಕೆಯಾಗಿದೆ ವಿನ: ವಾಸ್ತವ ರೂಪದಲ್ಲಿ ಕನ್ನಡ ಉಳಿಸುವ ಇಚ್ಛಾಶಕ್ತಿ ಅವರಿಗಿಲ್ಲ. ಸರ್ಕಾರಕ್ಕೆ ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ಕಾಳಜಿ ಇಲ್ಲ. 1995ರ ನಮತರ ಪ್ರಾರಂಭವಾದ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳ ಈಗಿನ ದುಸ್ಥಿತಿ ಇದಕ್ಕೆ ಜ್ವಲಂತ ಉದಾಹರಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಾಲಿನ ಬಜೆಟ್ ನಲ್ಲಿ ನಮಗೆ ಅನುದಾನಕ ಕೊಡಿಸುವ ಭರವಸೆಯನ್ನು ಶಾಲಾ ಶಿಕ್ಷಣ ಸಚಿವರು ನೀಡಿದ್ದರು. ಆದರೆ ಅದು ಇನ್ನೂ ಮರೀಚಿಕೆಯಾಗೇ ಉಳಿದಿದೆ. ಮಾತೆತ್ತಿದರೆ ಸಚಿವರು ನನ್ನ ರಕ್ತದಲ್ಲೇ ಕನ್ನಡ ಇದೆ ಎನ್ನುವವರು ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿಯೂ ನಮಗೆ ಅನುದಾನ ಕೊಡುವ ಹೇಳಿಕೆ ನೀಡಿದ್ದರೂ ಅದು ಕೇವಲ ಮಾಧ್ಯಮಗಳಿಗೆ ಮಾತ್ರ ಸೀಮಿತವಾಯಿತು ಎಂದು ಕಿಡಿ ಕಾರಿದ ಅವರು ಯಾವಾಗ ಸಚಿವರನ್ನೂ ಭೇಟಿಯಾದರೂ ಒಂದೊಂದು ಸುಳ್ಳು ನೆಪ ಹೇಳಿ ಅನುದಾನ ಕೊಡುವ ವಿಷಯದಿಂದ ನುಣುಚಿಕೊಳ್ಳುತ್ತಿದ್ದಾರೆ. ಈಗ ಸಾಹಿತಿಗಳಾದ ಬರಗೂರು, ದೇವನೂರು, ಬಿಳಿಮಲೆ ಮೊದಲಾದವರ ಮೊರೆ ಹೋಗಲು ಹೇಳುತ್ತಿದ್ದಾರೆ. ಅನುದಾನಕ್ಕೂ ಸಾಹಿತಿಗಳಿಗೂ ಏನು ಸಂಬಂಧ ಎಂದು ಪ್ರಶ್ನಿಸಿದರಲ್ಲದೆ ಇಂಗ್ಲಿಷ್ ಮಾಧ್ಯಮ ಕೆ.ಪಿ.ಎಸ್.ಶಾಲೆ ತೆರೆಯುತ್ತಿರುವ ಸಚಿವರು ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡಲು ಸಾಧ್ಯವಿಲ್ಲ ಎಂದು ಹೇಳಿಬಿಡಲಿ ಎಂದು ಒತ್ತಾಯಿಸಿದರು.
ಸರ್ಕಾರ ಒಂದೊಂದು ಸಾರಿ ಒಂದೊಂದು ಅಂಕಿ ಅಂಶ ಕೊಟ್ಟು ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದೆ ಎಂದ ಅವರು, ಎಸ್.ಸುರೇಶ್ ಕುಮಾರ್ ಅವರು 2021ರಲ್ಲಿ ಶಾಲಾ ಶಿಕ್ಷಣ ಸಚಿವರಿದ್ದಾಗ 1995-2000ವರೆಗಿನ ಅವಧಿಯಲ್ಲಿ 685 ಪ್ರಾಥಮಿಕ ಮತ್ತು 211 ಪ್ರೌಢಶಾಲೆಗಳಿದ್ದು ಅವುಗಳನ್ನು ವೇತನಾನುದಾನಕ್ಕೊಳಪಡಿಸಿದರೆ 150 ಕೋಟಿ ರೂ.ಗಳ ಅಂದಾಜು ವೆಚ್ಚ ತಗಲಬಹುದು. ಬಜೆಟ್ ನಲ್ಲಿ ಇದರ ಘೋಷಣೆ ಮಾಡಿ ಎಂದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಕೋರಿಕೊಂಡಿದ್ದರು. 2023ರ ಡಿಸೆಂಬರ್ ನಲ್ಲಿ ಶಾಸಕ ಮರಿತಿಬ್ಬೇಗೌಡ ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ್ದ ಸಚಿವ ಎಸ್.ಮಧು ಬಂಗಾರಪ್ಪ 1995-2000 ವರೆಗೆ 133 ಪ್ರಾಥಮಿಕ ಶಾಲೆಗಳಿದ್ದು ಕಿ.ಪ್ರಾ.ಶಾ.ಶಿಕ್ಷಕರು 487, ಹಿ.ಪ್ರಾ.ಶಾ.ಶಿಕ್ಷಕರು 206 ಇದ್ದಾರೆ. 324 ಪ್ರೌಢಶಾಲೆಗಳಿವೆ. 2592 ಶಿಕ್ಷಕರಿಗೆ ವೇನ ನೀಡಬೇಕಾಗಿದೆ. ಇದರ ಒಟ್ಟೂ ವಾರ್ಷಿಕ ವೆಚ್ಚ 147,52,93,824 ರೂ.ಗಳಾಗುತ್ತವೆ ಎಂದಿದ್ದರು. ಆದರೆ ಇದನ್ನು ಅನುಷ್ಠಾನಗೊಳಿಸಲು ಯಾರೂ ಆಸಕ್ತಿ ತೋರಿಸಿಲ್ಲ ಎಂದು ಹರಿಯಾಯ್ದರು.
ಪತ್ರಿಕಾಗೋಷ್ಠಿಯಲ್ಲಿ ಐ.ಎಸ್. ಹೊರಗಿನಮಠ, ಸದಾನಂದ, ಸಂತೋಷ್, ನಂಜುಂಡಸ್ವಾಮಿ, ಧನಂಜಯ್, ಪ್ರದೀಪ್ ಇದ್ದರು.