ಶಿವಮೊಗ್ಗ, ಮೇ.18:
ಇತ್ತೀಚೆಗಷ್ಟೇ ಭದ್ರಾವತಿ ತಾಲೂಕಿನ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮೈದೊಳಲು, ಆನವೇರಿ, ಮಲ್ಲಾಪುರ, ಹನುಮಂತಪುರ, ನಿಂಬೆಗೊಂದಿ ಸೇರಿದಂತೆ ಬಹಳಷ್ಟು ಹಳ್ಳಿಗಳಲ್ಲಿ ಸುರಿದ ಭಾರಿ ಮಳೆಗೆ, ಅಬ್ಬರದ ಗಾಳಿಗೆ ಸಾಕಷ್ಟು ಅಡಿಕೆ ಮರಗಳನ್ನು ಕಳೆದುಕೊಂಡಿದ್ದ ಬೆಳೆಗಾರ ಮತ್ತೆ ನಿನ್ನೆ ಸಂಜೆ ಇದೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ದುಮ್ಮಳ್ಳಿ, ಸೋಗಾನೆ, ರೆಡ್ಡಿ ಕ್ಯಾಂಪ್, ವಡ್ಡಿನಕೊಪ್ಪ, ಸೋಗಾನೆ, ಬೇಡರಹೊಸಳ್ಳಿ, ಸೂಗೂರು, ಬುಳ್ಳಾಪುರ ಸೇರಿದಂತೆ ಹಲವೆಡೆ ಅಪಾರ ಅಡಿಕೆ ಮರಗಳು ಬಿದ್ದಿವೆ.

ಹಳೆಯ ಕಹಿ ನೆನಪು ಮಾಸುವ ಮುನ್ನವೇ ಮತ್ತೆ ಹೀಗೆ ಸಾಲು ಸಾಲಾಗಿ ಕನಿಷ್ಠ 15ರಿಂದ 20 ವರ್ಷಗಳ ಹಿಂದಿನಿಂದ ಕಷ್ಟಪಟ್ಟು ಸಾಕಿದ್ದ ಅಡಿಕೆ ಮರಗಳು ನೆಲಕ್ಕುರುಳಿರುವುದು ಅಡಿಕೆ ಬೆಳೆಗಾರರನ್ನು, ರೈತರನ್ನು ನಿಜಕ್ಕೂ ಆತಂಕಕ್ಕೆ ದೂಡಿದೆ.
ದುಮ್ಮಳ್ಳಿ , ಶಿವಪುರ ತಾಂಡ, ಸೊಗಾನೆ , ಹೊಸೂರು, ರೆಡ್ಡಿಕ್ಯಾಂಪ್ , ಬೋಜಪ್ಪನ ಕ್ಯಾಂಪ್, ಓತಿಗಟ್ಟ್ಲ ,ಅರೆಕಟ್ಟೆ, ಇತ್ಯಾದಿ ಕಡೆ ನಿನ್ನೆ ಸುಮಾರು 10000 ಅಡಿಕೆ ಮರಗಳು ಹಾಗೂ ಸುಮಾರು 1500 ತೆಂಗಿನಮರ ನೆಲಸಮವಾಗಿವೆ.
ಸುಮಾರು ಒಂದು ಮರ 50ರಿಂದ 60 ಕೆಜಿ ಎಷ್ಟು ಅಡಿಕೆ ನೀಡುತ್ತಿದ್ದ ಮರಗಳು ಬುಡ ಸಮೇತವಾಗಿ ಉರುಳಿರುವುದು ನಿಜಕ್ಕೂ ಬೆಳೆಗಾರನ ನೋವಿಗೆ ಕಾರಣವಾಗಿದೆ. ಸರ್ಕಾರ ಈಗಲಾದರೂ ಈ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಿ ಕೂಡಲೇ ಸೂಕ್ತ ಬಗೆಯ ಪರಿಹಾರ ನೀಡುವ ಮೂಲಕ ಅಡಿಕೆ ಬೆಳೆಗಾರನ ನೋವಿಗೆ ಸ್ಪಂದಿಸಬೇಕೆಂದು ಒತ್ತಾಯಿಸಿದ್ದಾರೆ.