ಶಿವಮೊಗ್ಗ: ಎಸ್.ಕೆ.ಎನ್. ಚಾರಿಟಬಲ್ ಟ್ರಸ್ಟ್ನ ಸ್ವಾಮಿ ವಿವೇಕಾನಂದ ಇಂಟರ್ನ್ಯಾಷನಲ್ ಸಮೂಹ ಸಂಸ್ಥೆಗಳ ಶಾಲೆಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 9 ನೇ ಸ್ಥಾನ ಮತ್ತು 19ನೇ ಸ್ಥಾನ ಹಾಗೂ , 500ಕ್ಕೂ ಹೆಚ್ಚು ಅಂಕ ಪಡೆದು ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರತಿಭಾ ಸನ್ಮಾನ ಸಮಾರಂಭ ವಿನೋಬನಗರ ಶಾಲಾ ಆವರಣದಲ್ಲಿ ಭಾರೀ ಸಡಗರ-ಸಂಭ್ರಮದಿಂದ ನಡೆಯಿತು.
ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಅವರ ಪೋಷಕರನ್ನೂ ಸನ್ಮಾನಿಸಿದ್ದು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ತಮ್ಮ ಮಕ್ಕಳ ಜೊತೆಗೆ ತಾವೂ ಗೌರವಿಸಲ್ಪಟ್ಟ ಹಿನ್ನೆಲೆಯಲ್ಲಿ ಪೋಷಕರು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅನೂಪ್ ಎನ್. ಪಟೇಲ್ ಹಾಗೂ ಉಪಾಧ್ಯಕ್ಷೆ ರಾಗಿನಿ ಸಿಂಗ್ ಅವರ ನೇತೃತ್ವದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಅನಿತಾ ರವಿಶಂಕರ್, ಶ್ರೀರಾಮಪುರ ಹಾಲು ಒಕ್ಕೂಟದ ಅಧ್ಯಕ್ಷ ರವಿಶಂಕರ್, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಶಾಸಕ ಎಸ್.ಎನ್. ಚನ್ನಬಸಪ್ಪ, “ಈ ಶಾಲೆ ತನ್ನ ಹೆಸರಿಗೆ ತಕ್ಕಂತೆ ವಿದ್ಯಾರ್ಥಿಗಳಲ್ಲಿ ವಿವೇಕವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ. ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿ, ‘ಪ್ಲಾಸ್ಟಿಕ್ ಬೇಡ’ ಎಂಬ ಜಾಗೃತಿ ನಿಮ್ಮ ಶಾಲೆಯಿಂದಲೇ ಆರಂಭವಾಗಲಿ. ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳತ್ತಲೂ ಸಮಾನ ಗಮನ ಹರಿಸಬೇಕು,” ಎಂದು ಸಲಹೆ ನೀಡಿದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಅನಿತಾ ರವಿಶಂಕರ್ ಮಾತನಾಡಿ, “ಮಕ್ಕಳನ್ನು ಪ್ರೋತ್ಸಾಹಿಸುವುದು ಅವರಲ್ಲಿ ಸಾಧನೆಗೆ ಪ್ರೇರಣೆಯಾಗುತ್ತದೆ. ಪೋಷಕರು ಮಕ್ಕಳಿಗೆ ಮೊಬೈಲ್ ನೀಡುವಲ್ಲಿ ಎಚ್ಚರಿಕೆ ವಹಿಸಬೇಕು,” ಎಂದು ಹೇಳಿದರು.
ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರು, “ಈ ಶಾಲೆಯ 100% ಫಲಿತಾಂಶಕ್ಕೆ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳ ಸಮಗ್ರ ಪರಿಶ್ರಮವೇ ಕಾರಣ. ಸಂಸ್ಥೆ ಇನ್ನಷ್ಟು ಬೆಳೆಯಲಿ,” ಎಂದು ಹಾರೈಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ಉಪನಿರ್ದೇಶಕ ಮಂಜುನಾಥ್ ಹಾಗೂ ಇತರ ಗಣ್ಯರು ಶಾಲೆಯ ಸಾಧನೆಯನ್ನು ಮೆಚ್ಚಿದರು.
ಸಂಸ್ಥೆಯ ಅಧ್ಯಕ್ಷ ಅನೂಪ್ ಎನ್. ಪಟೇಲ್ ಅವರು ಶಾಲೆಯ ಬೆಳವಣಿಗೆ ಹಾಗೂ ಶೇಕಡಾ 100 ಫಲಿತಾಂಶಕ್ಕೆ ಕಾರಣರಾದ ಶಿಕ್ಷಕರನ್ನು ಪ್ರಶಂಸಿಸಿ, ಎಲ್ಲ ಶಿಕ್ಷಕರನ್ನೂ ಸನ್ಮಾನಿಸಿದರು.
ಈ ಸಂದರ್ಭದಲ್ಲಿ 9ನೇ ರ್ಯಾಂಕ್ ಪಡೆದ ರಾಣಿ ಆಚಾರ್ಯ, 19ನೇ ಸ್ಥಾನ ಪಡೆದ ಚಿರಸ್ತ್ಯ ಸೇರಿದಂತೆ ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ರಾಗಿನಿ ಸಿಂಗ್, ಮುಖ್ಯೋಪಾಧ್ಯಾಯರಾದ ರೂಪಶ್ರೀ, ಚಂದನಾ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಶಿಕ್ಷಕಿ ಚೈತ್ರಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೋಭಾ ಸ್ವಾಗತಿಸಿದರು.