



ಶಿವಮೊಗ್ಗ, ಮೇ.5:
“ಐದು ರಾಜ್ಯಗಳ ಚುನಾವಣಾ ಫಲಿತಾಂಶ ದೇಶದಲ್ಲಿ ಕೇವಲ ‘ಆಡಳಿತದ ರಿಪೋರ್ಟ್ ಕಾರ್ಡ್’ಗೆ ಮಾತ್ರ ಮಾನ್ಯತೆ ಇದೆ ಎನ್ನುವುದನ್ನು ಸಾಬೀತುಪಡಿಸಿವೆ. ಇದು ಕೇವಲ ಬಿಜೆಪಿ ಮತ್ತು ಎನ್.ಡಿ.ಎ ಮೈತ್ರಿಕೂಟದ ಗೆಲುವು ಮಾತ್ರವಲ್ಲ, ದೇಶಾದ್ಯಂತ ಪ್ರತಿ ಹಳ್ಳಿಯಲ್ಲಿ, ಪ್ರತಿ ಮನೆಯಲ್ಲಿ ಮನೆಮಾತಾಗಿರುವ ‘ಮೋದಿ ಜೀ ಗ್ಯಾರಂಟಿ’ಗೆ ಸಂದ ಐತಿಹಾಸಿಕ ಗೆಲುವು. ಪಶ್ಚಿಮ ಬಂಗಾಳದಲ್ಲಿ ಭಯದ ಮತ್ತು ಅರಾಜಕತೆಯ ರಾಜಕಾರಣ ಅಂತ್ಯಗೊಂಡು ಜನವಿಶ್ವಾಸದ ಹೊಂಬೆಳಕು ಮೂಡಿದ್ದರೆ, ಅಸ್ಸಾಂನಲ್ಲಿ ಅಭಿವೃದ್ಧಿಯ ‘ಡಬಲ್ ಎಂಜಿನ್’ ಸರ್ಕಾರಕ್ಕೆ ಜನ ಹ್ಯಾಟ್ರಿಕ್ ಗೌರವ ನೀಡಿದ್ದಾರೆ. ದಕ್ಷಿಣದ ತಮಿಳುನಾಡಿನಲ್ಲಿ ಭ್ರಷ್ಟ ಆಡಳಿತವನ್ನು ತಿರಸ್ಕರಿಸಿರುವ ಜನರು, ಕೇರಳದಲ್ಲಿ ರಾಷ್ಟ್ರೀಯತೆಯ ಮುಖ್ಯವಾಹಿನಿಗೆ ಅವಕಾಶ ನೀಡಿದ್ದಾರೆ. ಈ ಗೆಲುವು ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜೀಯವರ ‘ವಿಕಸಿತ ಭಾರತ’ದ ಸಂಕಲ್ಪಕ್ಕೆ ಜನಸಾಮಾನ್ಯರು ನೀಡಿದ ಅಭೂತಪೂರ್ವ ಜಯಘೋಷವಾಗಿದೆ ಎಂದು ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ.ರಾಘವೇಂದ್ರ ಅವರು ತಿಳಿಸಿದ್ದಾರೆ.


“ವಿಶೇಷವಾಗಿ ಕರ್ನಾಟಕದ ಉಪಚುನಾವಣೆಗಳಲ್ಲಿ ನಾವು ಗೆಲುವಿನ ಗೆರೆ ದಾಟುವಲ್ಲಿ ಸ್ವಲ್ಪ ಹಿನ್ನಡೆ ಕಂಡಿದ್ದರೂ, ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ತುಷ್ಟೀಕರಣ ಮತ್ತು ಆಡಳಿತ ವೈಫಲ್ಯದ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ. ದಾವಣಗೆರೆ ದಕ್ಷಿಣದಲ್ಲಿ ಗೆಲುವಿನ ಸಣ್ಣ ಅಂತರ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿದೆ. ಪಂಚ ರಾಜ್ಯಗಳ ಫಲಿತಾಂಶದಲ್ಲಿ ವಿಶೇಷವಾಗಿ ನಮ್ಮ ತಾಯಂದಿರು ಮತ್ತು ಸೋದರಿಯರು ಪ್ರಧಾನಿ ಮೋದಿಜೀಯವರ ಸುರಕ್ಷಿತ ಆಡಳಿತ ಹಾಗೂ ಘನತೆಯ ಬದುಕಿನ ಗ್ಯಾರಂಟಿ ಮೇಲೆ ಇಟ್ಟಿರುವ ಅಚಲ ವಿಶ್ವಾಸವೇ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬಿನ್ ಜಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಜಿ ಅವರ ಮಾರ್ಗದರ್ಶನ ಹಾಗೂ ನಮ್ಮ ಬೂತ್ ಮಟ್ಟದ ಎಲ್ಲ ಸಮರ್ಪಿತ ಕೆಚ್ಚೆದೆಯ ಕಾರ್ಯಕರ್ತರ ಪರಿಶ್ರಮದ ಫಲವಾಗಿ, ಬಿಜೆಪಿಗೆ ಅಭೂತಪೂರ್ವ ಜನಾದೇಶ ದೊರಕಿದೆ. ಈ ಜನಾದೇಶ ಪರಿವರ್ತನೆ, ಅಭಿವೃದ್ಧಿ ರಾಜಕಾರಣ ಮತ್ತು ದಿಟ್ಟ ನಾಯಕತ್ವಕ್ಕೆ ಸಿಕ್ಕ ಜನಬೆಂಬಲವಾಗಿದೆ ಎಂದಿದ್ದಾರೆ.
