ಶಿವಮೊಗ್ಗ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಭರ್ಜರಿ ಯಶಸ್ಸು ಸಾಧಿಸಿದ್ದು, ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ದಾಖಲಿಸಿರುವ ಅಭೂತಪೂರ್ವ ವಿಜಯವು ನನಗೆ ಅತ್ಯಂತ ಆತ್ಮತೃಪ್ತಿ ಮತ್ತು ಸಂತೋಷವನ್ನು ತಂದಿದೆ ಎಂದು ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಬಂಗಾಳವು ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರು ಭಾರತೀಯ ಜನಸಂಘವನ್ನು ಸ್ಥಾಪಿಸಿದ ಕರ್ಮಭೂಮಿ. ಜನಸಂಘ ನೆಲೆಕಂಡ ಅದೇ ಜಾಗದಲ್ಲಿ ಇಂದು ಭಾರತೀಯ ಜನತಾ ಪಕ್ಷ ದಿಗ್ವಿಜಯ ಸಾಧಿಸಿರುವುದು ಐತಿಹಾಸಿಕ ಕ್ಷಣವಾಗಿದೆ. ಶ್ಯಾಮಪ್ರಸಾದ್ ಮುಖರ್ಜಿ ಅವರಂತಹ ಮಹನೀಯರು ಅಂದು ಹಾಕಿಕೊಟ್ಟ ಭದ್ರ ಬುನಾದಿಯಿಂದಾಗಿಯೇ ಇಂದು ದೇಶದ 21 ರಾಜ್ಯಗಳಲ್ಲಿ ಎನ್.ಡಿ.ಎ ಆಡಳಿತ ನಡೆಸುತ್ತಿದೆ. ಭಾರತೀಯ ಜನತಾ ಪಕ್ಷವು ಅಂದು ದೇಶಕ್ಕೆ ನೀಡಿದ ಐದು ಪ್ರಮುಖ ಸಿದ್ಧಾಂತಗಳೇ ಇಂದಿನ ಈ ಐತಿಹಾಸಿಕ ಗೆಲುವಿಗೆ ಕಾರಣ ರಾಷ್ಟ್ರೀಯತೆ , ಪ್ರಜಾಪ್ರಭುತ್ವ , ಅಂತ್ಯೋದಯ, ಸಮಾನತೆ, ವಿಕೇಂದ್ರೀಕರಣ ಈ ಸಿದ್ಧಾಂತಗಳ ಫಲವಾಗಿಯೇ ಇಂದು ಪಶ್ಚಿಮ ಬಂಗಾಳದ ಜನತೆ ಬಿಜೆಪಿಗೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮಂತ್ರವನ್ನು ಒಪ್ಪಿ, ಅಲ್ಪಸಂಖ್ಯಾತರು ಕೂಡ ಇಂದು ಭಾರತೀಯ ಜನತಾ ಪಕ್ಷದೊಂದಿಗೆ ಕೈ ಜೋಡಿಸಿರುವುದು ಅತ್ಯಂತ ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದರು.
ಅಸ್ಸಾಂ, ಪುದುಚೇರಿ ಮತ್ತು ಕೇರಳದಲ್ಲಿಯೂ ಪಕ್ಷದ ಪರವಾದ ವಾತಾವರಣ ಮತ್ತು ಸಂಘಟನೆ ಗಣನೀಯವಾಗಿ ವೃದ್ಧಿಸಿದೆ. ತಮಿಳುನಾಡಿನಲ್ಲಿ ದಶಕಗಳಿಂದ ಕೇವಲ ಎರಡು ಪ್ರಾದೇಶಿಕ ಪಕ್ಷಗಳಿಗೆ ಸೀಮಿತವಾಗಿದ್ದ ರಾಜಕಾರಣಕ್ಕೆ, ಒಂದು ಪ್ರಬಲ ಪರ್ಯಾಯ ಪಕ್ಷದ ಅವಶ್ಯಕತೆಯಿತ್ತು. ಆ ಪರ್ಯಾಯ ಶಕ್ತಿಯಾಗಿ ಇವತ್ತು ತಮಿಳು ನಟ ವಿಜಯ್ ಅವರ ಪಕ್ಷ ಹೊರ ಹೊಮ್ಮಿದೆ. ಒಟ್ಟಾರೆ ಈ ಐದು ರಾಜ್ಯಗಳ ಚುನಾವಣಾ ಫಲಿತಾಂಶವನ್ನು ಗಮನಿಸಿದರೆ ದೇಶದಲ್ಲಿ ಕಾಂಗ್ರೆಸ್ ಪಕ್ಷದ ದುಸ್ಥಿತಿ ಎದ್ದು ಕಾಣುತ್ತಿದೆ. ಜನತೆ ಕಾಂಗ್ರೆಸ್ ಅನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ
ಈ ಪಂಚ ರಾಜ್ಯಗಳ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಒಟ್ಟಾರೆ ಮತಗಳಿಕೆ ಪ್ರಮಾಣವು ಗಣನೀಯವಾಗಿ ಜಾಸ್ತಿಯಾಗಿದೆ. ಕಳೆದ ಬಾರಿಗಿಂತ ಈ ಬಾರಿ ಪಕ್ಷದ ವೋಟ್ ಶೇರ್ ಶೇ. 8 ರಷ್ಟು (ಶೇ. 38 ರಿಂದ ಶೇ. 46 ಕ್ಕೆ) ರಷ್ಟು ಏರಿಕೆಯಾಗಿದ್ದು, ಇದು ಪಕ್ಷದ ಸೈದ್ಧಾಂತಿಕ ನೆಲೆ ಮತ್ತು ನಾಯಕತ್ವದ ಮೇಲಿನ ಜನರ ವಿಶ್ವಾಸವನ್ನು ತೋರಿಸುತ್ತದೆ” ಎಂದು ವಿಶ್ಲೇಷಿಸಿದರು.
ಇದೇ ವೇಳೆ ರಾಜ್ಯದ ಬಾಗಲಕೋಟೆ ಉಪಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಡಾ. ಧನಂಜಯ ಸರ್ಜಿ ಅವರು, “ಬಾಗಲಕೋಟೆ ಉಪಚುನಾವಣೆಯಲ್ಲಿ ಸಂಪೂರ್ಣವಾಗಿ ಸಿಂಪತಿಯ ಅಲೆ ಕೆಲಸ ಮಾಡಿದೆ. ಇದರ ಜೊತೆಗೆ, ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ‘ನೋಟಿನ ರಾಜಕಾರಣ’ ಮತ್ತು ಅಧಿಕಾರದ ದುರ್ಬಳಕೆಯು ಈ ಫಲಿತಾಂಶಕ್ಕೆ ಕಾರಣವಾಗಿದೆ ಹೊರತು, ಇದು ಸರ್ಕಾರದ ಸಾಧನೆಗೆ ಸಿಕ್ಕ ಜಯವಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಈ ಐತಿಹಾಸಿಕ ಗೆಲುವಿಗಾಗಿ ಶ್ರಮಿಸಿದ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರಿಗೆ ಹಾಗೂ ಪ್ರತಿಯೊಬ್ಬ ಕಾರ್ಯಕರ್ತರಿಗೂ ಡಾ. ಧನಂಜಯ ಸರ್ಜಿ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.