ಶಿವಮೊಗ್ಗ : ಲೋಕಸಭೆಯಲ್ಲಿ ಮಂಡನೆಯಾದ ಮಹಿಳಾ ಮಸೂದೆಯ ಮೇಲೆ ದೇಶದ ಮಹಿಳೆಯರು ಆಶಾಭಾವನೆಯನ್ನು ಹೊಂದಿದ್ದರು. ಆದರೆ ಕಾಂಗ್ರೆಸ್ ಅದಕ್ಕೆ ಬೆಂಬಲ ನೀಡದೆ ಮಹಿಳೆಯರಿಗೆ ನಿರಾಶೆ ಮಾಡಿದೆ ಎಂದು ಶಾಸಕಿ ಶಾರದಾಪೂರ್ಯಾನಾಯ್ಕ ಟೀಕಿಸಿದರು.
ಅವರು ಇಂದು ನಗರದ ಶಿವಪ್ಪನಾಯಕ ವೃತ್ತದಲ್ಲಿ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಮಹಿಳಾ ವಿಭಾಗ ಹಮ್ಮಿಕೊಂಡ ಬೃಹತ್ ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡುತ್ತಿದ್ದರು. ದೇಶದ ರಾಜಕೀಯದಲ್ಲಿ ಮಹಿಳೆಯರು ಶೇ.೩೩ರಷ್ಟು ಮೀಸಲಾತಿಯನ್ನು ಪಡೆದು ಕಾರ್ಯನಿರ್ವಹಿಸುವ ಅವಕಾಶವಿತ್ತು. ಆದರೆ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ಅದಕ್ಕೆ ಕಲ್ಲುಹಾಕಿದವು ಎಂದು ಕಿಡಿಕಾರಿದರು.


ಜೆಡಿಎಸ್ ರಾಜ್ಯ ಉಪಾಧ್ಯಕ್ಷ, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, ದೇವೇಗೌಡರು ಪ್ರಧಾನಿಯಾಗಿದ್ದಾಗ, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವಂತೆ ನೋಡಿಕೊಂಡಿದ್ದರು. ಅನೇಕ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರೇ ಮೇಯರ್ ಉಪಮೇಯರ್ ಆಗಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ೧೯೭೧ರಲ್ಲೇ ಕ್ಷೇತ್ರ ಮರುವಿಂಗಡನೆ ಮಸೂದೆ ಅಂಗೀಕಾರವಾಗಿತ್ತು. ಈಗ ಮತ್ತೆ ಪ್ರಧಾನಿ ಮೋದಿಯವರು ಮಹಿಳೆ ಮಸೂದೆ ಮಂಡಿಸುವುದರ ಮೂಲಕ ಅವರಿಗೆ ಶಕ್ತಿ ತುಂಬುವ ಕೆಲಸವನ್ನು ಮುಂದುವರಿಸಿದ್ದಾರೆ. ಈಗ ಮಸೂದೆಗೆ ಸೋಲಾಗಿರಬಹುದು. ಆದರೆ ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಅಧಿಕಾರ ಹಾಗೂ ಶಕ್ತಿ ನೀಡುವ ಕೆಲಸ ಮೋದಿಯವರಿಂದ ಆಗಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ರಾಮಕೃಷ್ಣ, ನಗರಾಧ್ಯಕ್ಷ ದೀಪಕ್ಸಿಂಗ್, ನರಸಿಂಹ ಗಂಧದಮನೆ ಸೇರಿದಂತೆ ಹಲವರಿದ್ದರು.