‘ನಾರಿ ಶಕ್ತಿ ವಂದನಾ ಕಾಯ್ದೆ ಜಾರಿ ಐತಿಹಾಸಿಕ; ಮಹಿಳಾ ಸಬಲೀಕರಣಕ್ಕೆ ಪ್ರಧಾನಿ ಮೋದಿ ಬದ್ಧತೆಯ ಪ್ರತೀಕ ಎಂದ ಸಂಸದ ರಾಘವೇಂದ್ರ
ನವದೆಹಲಿ, 17 ಏಪ್ರಿಲ್ 2026: ನಾರಿ ಶಕ್ತಿ ವಂದನಾ ಕಾಯ್ದೆಯ ಜಾರಿಗಾಗಿ ನಡೆಯುತ್ತಿರುವ ವಿಶೇಷ ಸಂಸತ್ ಅಧಿವೇಶನದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅವರು, ಕ್ಷೇತ್ರ ಪುನರ್ ವಿಂಗಡಣೆ ಹಾಗೂ ನಾರಿ ಶಕ್ತಿ ವಂದನಾ ಕಾಯ್ದೆಯ ಕುರಿತು ಪರಿಣಾಮಕಾರಿಯಾಗಿ ಮಾತನಾಡಿದ್ದಾರೆ. ಪ್ರಮುಖವಾಗಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕನ್ನು ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಗಿ ಪುನರ್ ಸ್ಥಾಪಿಸಬೇಕೆಂಬ ಅಲ್ಲಿನ ಜನರ ದಶಕಗಳ ಬೇಡಿಕೆ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ. ಈ ಭಾಗದ ಭೌಗೋಳಿಕ ವ್ಯಾಪ್ತಿ ಮತ್ತು ಸವಾಲುಗಳನ್ನು ಪರಿಗಣಿಸಿ, ಮುಂಬರುವ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ, ಈಶಾನ್ಯ ರಾಜ್ಯಗಳಿಗೆ ನೀಡಿರುವಂತೆ, ಪಶ್ಚಿಮ ಘಟ್ಟದ ಹೊಸನಗರಕ್ಕೂ ನ್ಯಾಯ ಒದಗಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಪ್ರತ್ಯೇಕ ವಿಧಾನಸಭಾ ಕ್ಷೇತ್ರಕ್ಕಾಗಿ ಆಗ್ರಹಿಸಿ, ಇತ್ತೀಚಿಗೆ ಹೊಸನಗರದಲ್ಲಿ ನಡೆದ ಬೃಹತ್ ಪಾದಯಾತ್ರೆಯನ್ನು ಉಲ್ಲೇಖಿಸಿದ ಸಂಸದ ರಾಘವೇಂದ್ರ, “ಸ್ವತಂತ್ರ ಅಸ್ತಿತ್ವ ಹೊಂದಿದ್ದ ಹೊಸನಗರ ವಿಧಾನಸಭಾ ಕ್ಷೇತ್ರವನ್ನು 2008ರಲ್ಲಿ ವಿಭಜಿಸಲಾಗಿದ್ದು, ಆ ಭಾಗದ ಜನರಿಗೆ ಪ್ರಾತಿನಿಧ್ಯದ ಕೊರತೆಯನ್ನುಂಟು ಮಾಡಿದೆ. ಶರಾವತಿ, ವಾರಾಹಿಯಂತಹ ನದಿಗಳ ಮೂಲವಾಗಿರುವ, ಮಲೆನಾಡಿನ ಕಠಿಣ ಭೂಪ್ರದೇಶ ಹೊಂದಿರುವ ಹೊಸನಗರಕ್ಕೆ ವಿಶೇಷ ಭೌಗೋಳಿಕ ಮಾನ್ಯತೆ ನೀಡಬೇಕು. ನಾಡಿನ ಅಭಿವೃದ್ಧಿಗಾಗಿ ಐದು ಜಲಾಶಯ ಯೋಜನೆಗಳಿಗೆ ಭೂಮಿ ನೀಡಿ ತ್ಯಾಗ ಮಾಡಿರುವ ಸಂತ್ರಸ್ತ ಕುಟುಂಬಗಳ ಹಿತದೃಷ್ಟಿಯಿಂದ ಹೊಸನಗರವನ್ನು ಮತ್ತೆ ಸ್ವತಂತ್ರ ಕ್ಷೇತ್ರವನ್ನಾಗಿ ಮಾಡುವುದು ಕೇವಲ ಆಡಳಿತಾತ್ಮಕ ನಿರ್ಧಾರವಲ್ಲ, ಅದು ಆ ಭಾಗದ ಜನರ ತ್ಯಾಗಕ್ಕೆ ನೀಡುವ ನ್ಯಾಯ ಮತ್ತು ಗೌರವ” ಎಂದು ಸಂಸತ್ತಿನಲ್ಲಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಕ್ಷೇತ್ರ ಪುನರ್ ವಿಂಗಡಣಾ ಪ್ರಕ್ರಿಯೆಯಲ್ಲಿ ಪಶ್ಚಿಮ ಘಟ್ಟದ ಮಲೆನಾಡಿನಂತಹ ವಿಶಾಲ ಅರಣ್ಯ, ಗಿರಿ-ಪರ್ವತಗಳ ಪ್ರದೇಶ ಹಾಗೂ ಕಡಿಮೆ ಜನಸಂಖ್ಯೆ ಹೊಂದಿರುವ ಭಾಗಗಳಿಗೆ, ಈಶಾನ್ಯ ರಾಜ್ಯಗಳ ಮಾದರಿಯಲ್ಲಿ ವಿಶೇಷ ಮಾನದಂಡಗಳನ್ನು ಅನುಸರಿಸಬೇಕು ಎಂದು ಬಿ.ವೈ.ರಾಘವೇಂದ್ರ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮಹಿಳಾ ಮೀಸಲಾತಿ ಕುರಿತಂತೆ ಮಾತನಾಡಿದ ಸಂಸದ ರಾಘವೇಂದ್ರ, ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ಬಸವಣ್ಣನವರಿಂದ ಸ್ಥಾಪಿತವಾದ ಪ್ರಜಾಪ್ರಭುತ್ವ ಮೌಲ್ಯಗಳ ಅನುಭವ ಮಂಟಪ ಹಾಗೂ ನಾವು ಐತಿಹಾಸಿಕ ವೀರವನಿತೆಯರನ್ನು ಸ್ಮರಿಸಿ, “ನಾನು ಬಸವಣ್ಣನವರು ಉದಯಿಸಿದ ನಾಡಿನಿಂದ ಬಂದವನು. 12ನೇ ಶತಮಾನದಲ್ಲೇ ಬಸವಣ್ಣನವರು ಲಿಂಗ ಸಮಾನತೆಯ ಸಂದೇಶ ಸಾರಿದ್ದರು. ಅಕ್ಕಮಹಾದೇವಿ ಅವರ ಆಧ್ಯಾತ್ಮಿಕ ಶಕ್ತಿ, ಕಿತ್ತೂರು ಚೆನ್ನಮ್ಮ ಮತ್ತು ಒನಕೆ ಓಬವ್ವ ಅವರ ಕೆಚ್ಚೆದೆಯ ಸಾಹಸ ನಮ್ಮ ನಾರಿ ಶಕ್ತಿಗೆ ಪ್ರೇರಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ತಂದಿರುವ ‘ನಾರಿ ಶಕ್ತಿ ವಂದನಾ ಕಾಯ್ದೆ’ಯು ಈ ಐತಿಹಾಸಿಕ ಪರಂಪರೆಗೆ ಗೌರವ ಸಲ್ಲಿಸುವ ಮೂಲಕ ಮಹಿಳೆಯರನ್ನು ದೇಶದ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲಿದೆ” ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಆಡಳಿತಾವಧಿಯಲ್ಲಿ, ಅಡುಗೆ ಮನೆಯಿಂದ ಸಂಸತ್ತಿನವರೆಗೆ ಮಹಿಳೆಯರ ಧ್ವನಿ ಬಲಗೊಳ್ಳುತ್ತಿದ್ದು, ವಿಕಸಿತ ಭಾರತದ ಸಾಕಾರದೆಡೆಗೆ ದೇಶದ ಪ್ರಗತಿಯು, ‘ಮಹಿಳಾ ಅಭಿವೃದ್ಧಿ’ಯಿಂದ ‘ಮಹಿಳಾ ನೇತೃತ್ವದ ಅಭಿವೃದ್ಧಿ’ಯೊಂದಿಗೆ ಮುನ್ನಡೆಯಲಿದೆ ಎಂದು ಅವರು ಹೇಳಿದ್ದಾರೆ.