ಶಿವಮೊಗ್ಗ : ಪದವಿ ಎನ್ನುವುದು ಕೇವಲ ಪ್ರಮಾಣಪತ್ರವಲ್ಲ ಅದು ಸಮಾಜದ ಪರಿವರ್ತನೆಗಾಗಿ ಉಪಯೋಗಿಸುವ ಬಹುದೊಡ್ಡ ಶಕ್ತಿ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.
ಅವರು ಇಂದು ಸಹ್ಯಾದ್ರಿ ಕಲಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಪದವಿ ಪಡೆವ ಸಂಭ್ರಮ ಕಾರ್ಯಕ್ರಮವನ್ನು ಸಂವಿಧಾನ ಪೀಠಿಕೆಯನ್ನು ಓದುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಪದವಿ ಪಡೆದ ನಂತರ ಮುಂದೇನು ಎಂಬ ಆಲೋಚನೆ ನಮ್ಮ ಯುವಕರಲ್ಲಿ ಬರುವುದು ಸಹಜವೇ ಆಗಿದೆ. ಇದು ಅವರ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಪಡೆಯುವುದೇ ಇಂದು ಕಷ್ಟವಾಗುತ್ತಿದೆ. ಉದ್ಯೋಗವಿಲ್ಲದೆ ಯುವಕರು

ತಲ್ಲಣಗೊಳ್ಳುತ್ತಿದ್ದಾರೆ. ಊರಿನಲ್ಲೂ ಇರದೆ ಕೆಲಸವೂ ಇಲ್ಲದೆ ಇರುವ ಅವರ ಸ್ಥಿತಿ ಬಹಳ ಕಷ್ಟ. ಇಂತಹ ಸಂದರ್ಭದಲ್ಲಿ ನಮ್ಮ ಪದವಿ ಯುವಕರು ಸಂಕಲ್ಪ ತೊಡಬೇಕಾಗಿದೆ. ಸಾಧನೆ ಮಾಡಬೇಕಾಗಿದೆ. ವಿದ್ಯೆ ಯಾರ ಸ್ವತ್ತೂ ಅಲ್ಲ, ಸಂಪತ್ತೂ ಅಲ್ಲ ದೇವರು ನಮಗೆ ವರವನ್ನು ಕೊಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ. ಆದರೆ ಅವಕಾಶವನ್ನು ಕೊಡುತ್ತಾನೆ. ನಮ್ಮ ಮಕ್ಕಳು ಇದನ್ನೇ ಬಳಸಿಕೊಳ್ಳಬೇಕು ಎಂದರು.
ರಾಜ್ಯಶಾಸ್ತ್ರಕ್ಕೆ ನಮ್ಮ ವಿದ್ಯಾರ್ಥಿಗಳನ್ನು ಬದಲಾಯಿಸುವ ಶಕ್ತಿಯಿದೆ. ಭವಿಷ್ಯ ಕಟ್ಟಿಕೊಳ್ಳಲು ಸಹಾಯಕವಾಗುತ್ತದೆ. ಯುವ ಸಮುದಾಯ ಹಿಂಸೆ, ಕ್ರೌರ್ಯಕ್ಕೆ ಒಳಗಾಗದೆ ಬದುಕನ್ನು ರೂಪಿಸಿಕೊಳ್ಳಬೇಕಾಗಿದೆ. ಮೌಲ್ಯಗಳೇ ಕಳೆದು ಹೋಗುತ್ತಿರುವ ಇಂತಹ ಸಂದರ್ಭದಲ್ಲಿ ನಮ್ಮ ಯುವಕರು ಸಂಕಲ್ಪ ತೊಡಬೇಕಾಗಿದೆ. ತಾಳ್ಮೆಯಿದ್ದರೆ ಎಂತಹ ಪದವಿಯನ್ನಾದರೂ ಗೆಲ್ಲುವುದು ಸುಲಭ. ಆದರೆ ಪದವಿ ಪಡೆದ ಮೇಲೆ ಸಾಮಾಜಿಕ ಹೊಣೆಗಾರಿಕೆಯನ್ನು ಹೊರಬೇಕಾಗುತ್ತದೆ ಅದೇ ಸತ್ಯ ಎಂದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಹೆಚ್.ಪ್ರಹ್ಲಾದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಸಹ್ಯಾದ್ರಿ ಕಾಲೇಜಿಗೆ ತನ್ನದೇ ಆದ ಇತಿಹಾಸವಿದೆ. ಈಗ ಅದಕ್ಕೆ ೮೫ರ ಹರೆಯ. ಈ ವಿಶೇಷ ಕಾರ್ಯಕ್ರಮ ಪದವಿ ಪಡೆಯುವ ಸಂಭ್ರಮವಾಗಿದೆ. ಇನ್ನೇನು ನಮ್ಮ ಮಕ್ಕಳು ಅಂತಿಮವರ್ಷದ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳು ಅವರಿಗೆ ಚೈತನ್ಯ ನೀಡುತ್ತವೆ. ಪದವಿ ಪಡೆದ ಮೇಲೂ ಅವರ ಜವಾಬ್ದಾರಿ ಮತ್ತಷ್ಟು ಹೆಚ್ಚಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ.ಸಿರಾಜ್ ಅಹ್ಮದ್ ಮಾತನಾಡಿ, ಪದವಿ ಪಡೆಯುವುದು ವಿದ್ಯಾರ್ಥಿ ಜೀವನದ ಅತ್ಯಂತ ಪ್ರಮುಖ ಘಟ್ಟವೇ ಆಗಿದೆ. ಆದರೆ ಈ ಸಂಭ್ರಮ ಕೇವಲ ಸಂಭ್ರಮವಾಗಿ ಉಳಿಯಬಾರದು ವಿದ್ಯಾರ್ಥಿಗಳಲ್ಲಿ ಒಳ್ಳೆಯ ಗುಣ ಉದ್ಯಮಶೀಲತೆ, ಸಮಾಜಕ್ಕೆ ಕೊಡುಗೆ ನೀಡುವಂತಾಗಬೇಕು. ಪದವಿ ಪಡೆದ ಪ್ರತಿಯೊಬ್ಬರೂ ಜೀವನದ ಹೊಸ ಅಧ್ಯಾಯವನ್ನ ಆರಂಭಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಕೆ.ಎನ್.ಮಂಜುನಾಥ್, ಹಿರಿಯ ಪ್ರಾಧ್ಯಾಪಕ ಪ್ರೊ.ಪ್ರಸನ್ನಕುಮಾರ್ ಕೆ., ಐಕ್ಯೂಎಸಿ ಸಂಚಾಲಕ ಡಾ.ಮಂಜುನಾಥ್, ಪ್ರಾಧ್ಯಾಪಕರುಗಳಾದ ಡಾ.ಗಿರಿಜಮ್ಮ ಬೆಳಕೇರಿ, ಶ್ವೇತಶ್ರೀ ಎ., ಕೃಪಾಲಿನಿ, ಕುಮಾರೇಶ್ವರಿ, ಸಿಂಚನ, ಕೆ.ಎನ್. ಮಹಾದೇವಸ್ವಾಮಿ, ಶೈಲಜಾ ಸೇರಿದಂತೆ ಹಲವರಿದ್ದರು.
ಇದೇ ಸಂದರ್ಭದಲ್ಲಿ ಸಿ.ಎಸ್. ಷಡಾಕ್ಷರಿ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಾದ ಅಭಿಷೇಕ್, ಆಮಿಷ್, ಸಂಜಯ್, ಪ್ರೀತಿ, ಜೀವಿತ ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಜಾಹ್ನವಿ ನಿರೂಪಿಸಿದರೆ, ಯೋಗೇಶ್ವರಿ ಪ್ರಾರ್ಥಿಸಿ, ಪೃಥ್ವಿರಾಜ್ ವಂದಿಸಿದರು.