ಶಿವಮೊಗ್ಗ : ಪ್ರತಿನಿತ್ಯ ಚಳಿ, ಮಳೆ, ಗಾಳಿ ಬಿಸಿಲು ಎನ್ನದೇ ಮನೆ ಮನೆಗೆ ಪತ್ರಿಕೆಗಳನ್ನು ತಲುಪಿಸುವ ಕಾರ್ಯದಲ್ಲಿ ನಿರತರಾಗಿರುವ  ಪತ್ರಿಕಾ ವಿತರಕರಿಗೆ ಪರಿಹಾರದ ಪ್ಯಾಕೇಜ್ ಘೋಷಿಸಬೇಕೆಂದು ಜಿಲ್ಲಾ ದಿನಪತ್ರಿಕೆ ವಿತರಕರ ಸಂಘದ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈಗಾಗಲೇ ತಾವುಗಳು ಸಮಾಜದಲ್ಲಿನ ಅನೇಕ ಸಮುದಾಯಗಳಿಗೆ ಪ್ಯಾಕೇಜ್ ಘೋಷಣೆ ಮಾಡಿದ್ದೀರಿ. ಲಾಕ್‌ಡೌನ್‌ನಿಂದಾಗಿ ನಮ್ಮ ಪತ್ರಿಕಾ ವಿತರಣೆಯಲ್ಲಿ ವರಮಾನ ಕಡಿಮೆಯಾಗಿದ್ದು, ಇದರಿಂದ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಆದ್ದರಿಂದ ನಮ್ಮನ್ನು ಸಹ ಕೊರೋನಾ ವಾರಿಯರ‍್ಸ್‌ಗಳೆಂದು ತಾವುಗಳು ಪರಿಗಣಿಸಬೇಕು. ಈ ಸಂಕಷ್ಟದ ಸಂದರ್ಭದಲ್ಲಿ ನಮಗೂ ಸಹ ಪ್ಯಾಕೇಜ್‌ನ್ನು ಘೋಷಿಸುವ ಮೂಲಕ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಲಾಕ್‌ಡೌನ್ ಇದ್ದರೂ ಸಹ ಓದುಗರಿಗೆ ತೊಂದರೆಯಾಗಬಾರದೆಂದು ಜೀವದ ಹಂಗು ತೊರೆದು ಪತ್ರಿಕೆಗಳನ್ನು ವಿತರಣೆ ಮಾಡುತ್ತಿದ್ದೇವೆ. ನಮಗೆ ಯಾವುದೇ ಸುರಕ್ಷತಾ ಪರಿಕರಗಳು ಕೂಡಾ ಇರುವುದಿಲ್ಲ. ಆದರೂ ಸಹ ನಮ್ಮ ಕಾಯಕದಲ್ಲಿ ನಾವುಗಳು ಹಿಂದೆ ಬಿಂದಿಲ್ಲ. ರಾಜ್ಯದಲ್ಲಿ ಸುಮಾರು ೬೦ ಸಾವಿರ ವಿತರಕರಿದ್ದಾರೆ. ಇದರಲ್ಲಿ ಬಹುತೇಕ ವಿತರಕರು ಬಡತನ ರೇಖೆಗಿಂತ ಕೆಳಗಿರುವವರೇ ಆಗಿದ್ದಾರೆ. ನಮ್ಮನ್ನು ನಂಬಿಕೊಂಡು ೨ ಲಕ್ಷ ಕುಟುಂಬಗಳು ಜೀವನ ನಿರ್ವಹಣೆ ಮಾಡುತ್ತಿವೆ.
ಲಾಕ್‌ಡೌನ್ ಪರಿಣಾಮವಾಗಿ ಗ್ರಾಹಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದರಿಂದ ನಮಗೆ ಆದಾಯ ಕೂಡಾ ಕಡಿಮೆಯಾಗಿ ಬಾರಿ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದೇವೆ. ಇದರ ನಡುವೆ ನಮಗೆ ಪದೇ ಪದೇ ಸಣ್ಣ ಪುಟ್ಟ ಕಾಯಿಲೆಗಳು ಕೂಡಾ ಆಗಾಗ ಕಾಡುತ್ತಿರುತ್ತವೆ.
ಆದರೂ ಸಹ ನಾವುಗಳು ಪ್ರತಿನಿತ್ಯ ಸರ್ಕಾರದ ಸುದ್ದಿಯನ್ನು ಹೊತ್ತಿರುವ ಪತ್ರಿಕೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದೇವೆ. ಇಂತಹ ಶ್ರಮಿಕ ವರ್ಗಕ್ಕೆ ಪ್ಯಾಕೇಜ್ ಘೋಷಿಸುತ್ತೀರ ಎಂಬ ನಂಬಿಕೆ ನಮಗಿದೆ. ನಮ್ಮ ಸಮುದಾಯವನ್ನು ಅಸಂಘಟಿತ ಕಾರ್ಮಿಕರ ವಲಯಕ್ಕೆ ಸೇರ್ಪಡೆಗೊಳಿಸಿ ಅವರಿಗೆ ಶಾಸನಬದ್ದ ನೆರವನ್ನು ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಹೆಚ್.ವಿ. ಸತ್ಯನಾರಾಯಣ, ಉಪಾಧ್ಯಕ್ಷ ಉಮೇಶ್, ಕಾರ್ಯದರ್ಶಿ ಧನಂಜಯ ಹೆಚ್., ಭಾನುಪ್ರಕಾಶ್, ಮಂಜುನಾಥ್ ಬಿ., ಮನೋಜ್ ಸೇರಿದಂತೆ ಇನ್ನು ಮುಂತಾದವರಿದ್ದರು
.

By admin

ನಿಮ್ಮದೊಂದು ಉತ್ತರ

You missed

error: Content is protected !!