ಶಿವಮೊಗ್ಗ: ನರೇಂದ್ರ ಮೋದಿ ಅವರಂತಹ ಪ್ರಧಾನಿಯನ್ನು ಪಡೆದಿರುವುದು ಈ ದೇಶದ ಪುಣ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಬಣ್ಣಿಸಿದರು.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮೋದಿಯವರಿಗೆ ಬುದ್ದಿಯಿಲ್ಲ ಎಂದು ಹೇಳುತ್ತಾರೆ. ಆದರೆ ನಿಜವಾಗಿಯೂ ಬುದ್ಧಿ ಇಲ್ಲದವರು ಈ ಕಾಂಗ್ರೆಸ್ ನಾಯಕರು ತಮ್ಮ ಇರುವಿಕೆಯನ್ನು ತೋರ್ಪಡಿಸಲು ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಪ್ರಧಾನಿಯವರನ್ನು ಟೀಕಿಸದೇ ಇದ್ದರೆ ಇವರಿಗೆ ಸಮಾಧಾನವಾಗುವುದಿಲ್ಲ ಎಂದರು.
ಪ್ರಧಾನಿ ಮೋದಿಯವರು ದೇಶಾದ್ಯಂತ ಉಚಿತ ಲಸಿಕೆ ನೀಡುವ ಮೂಲಕ ವಿಶ್ವದಲ್ಲಿಯೇ ಅತ್ಯುತ್ತಮ ಪ್ರಧಾನಿ ಎನಿಸಿದ್ದಾರೆ. ಅಲ್ಲದೆ ಮುಂದುವರೆದು ಇಡೀ ದೇಶದ ಜನಕ್ಕೆ ಉಚಿತವಾಗಿ ಲಸಿಕೆ ನೀಡುವುದಾಗಿ ಘೋಷಿಸಿದ ಮೊದಲ ಪ್ರಧಾನಿಯು ಇವರೆ. ಇದಲ್ಲದೆ ನವೆಂಬರ್ ತಿಂಗಳ ವರೆಗೂ ಉಚಿತವಾಗಿ ಪಡಿತರ ನೀಡುವುದಾಗಿಯೂ ಹೇಳಿದ್ದಾರೆ. ಇಂತಹ ಅಪರೂಪದ ಪ್ರಧಾನಿಯನ್ನು ಪಡೆದ ನಾವೇ ಭಾಗ್ಯಶಾಲಿಗಳು. ದೇಶದ ಜನ ಮೆಚ್ಚುವಂತಹ ಕೆಲಸ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ನಾಯಕರು ಲಸಿಕೆಗೆ ಸಂಬಂಧಿಸಿದಂತೆ ಅರ್ಥವಿಲ್ಲದ ಹೇಳಿಕೆ ನೀಡುತ್ತಿದ್ದಾರೆ. ಮೊದಲು ಲಸಿಕೆ ಬಂದಾಗ ಇದೇ ಕಾಂಗ್ರೆಸ್ ನಾಯಕರು ಲಸಿಕೆ ಹಾಕಿಸಿಕೊಳ್ಳಬೇಡಿ ಅದು ಬಿಜೆಪಿ ಲಸಿಕೆ, ಮೋದಿ ಲಸಿಕೆ ಎಂದೆಲ್ಲ ಟೀಕೆ ಮಾಡಿದ್ದರು. ಈಗ ಇದೇ ನಾಯಕರು ಲಸಿಕೆ ಬೇಕು ಎನ್ನುತ್ತಿದ್ದಾರೆ. ಟೀಕಿಸುವುದರಲ್ಲಿಯೂ ಇವರು ವಿಫಲರಾಗಿದ್ದಾರೆ. ವಿರೋಧ ಪಕ್ಷವಾಗಿ ಕಾಂಗ್ರೆಸ್ ವಿಫಲವಾಗಿತ್ತು. ಈಗ ಟೀಕಿಸುವುದು ಕೂಡ ಅವರಿಗೆ ಬರುತ್ತಿಲ್ಲ ಎಂದರು.
ತೈಲ ಬೆಲೆ ವಿರೋಧಿಸಿ ಪೆಟ್ರೋಲ್ ಬಂಕ್‌ಗಳ ಬಳಿ ಕಾಂಗ್ರೆಸ್ ಇಂದು ಪ್ರತಿಭಟನೆ ಮಾಡುತ್ತಿದೆ ಎಂಬ ಪರ್ತಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಪಾಪ ಮಾಡಲಿ ಬಿಡಿ ತಾವು ಇನ್ನು ಜೀವಂತವಾಗಿದ್ದೇವೆ ಎಂದು ತಿಳಿಸಲು ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.
ಲಾಕ್‌ಡೌನ್ ವಿಸ್ತರಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ನಿಧಾನವಾಗಿ ಕಡಿಮೆಯಾಗುತ್ತಿದೆ. ಹಳ್ಳಿಗಳಲ್ಲೂ ಕೂಡ ಈ ಬಗ್ಗೆ ಜಾಗೃತಿ ಮೂಡುತ್ತಿದೆ. ಇನ್ನು ಎರೆಡು ಮೂರು ದಿನಗಳಲ್ಲಿ ಅನ್‌ಲಾಕ್ ಮಾಡುವ ಬಗ್ಗೆ ಚಿಂತಿಸಲಾಗುವುದು. ಅದಕ್ಕೂ ಮೊದಲು ಸಂಘ ಸಂಸ್ಥೆಗಳು, ವರ್ತಕರು, ಅಧಿಕಾರಿಗಳು ಹೀಗೆ ಎಲ್ಲರ ಜೊತೆ ಸಭೆ ನಡೆಸಿ ನಂತರ ಕ್ರಮಕೈಗೊಳ್ಳಲಾಗುವುದು ಎಂದರು.