ಶಿವಮೊಗ್ಗ : ಆರ್ಯವೈಶ್ಯ ಸ್ನೇಹಿತರ ಬಳಗ ಶಿವಮೊಗ್ಗ ಇದರ ವತಿಯಿಂದ ನೇತೃತ್ವದಲ್ಲಿ ಏ.೨ರಿಂದ ೫ರ ವರೆಗೆ ನಗರದ ಅಲ್ಲಮ ಪ್ರಭು ಮೈದಾನದಲ್ಲಿ ‘ಶೆಟ್ಟರ ಸಂತೆ’ ಕಾರ್ಯಕ್ರಮ ನಡೆಯಲಿದ್ದು, ಇದರ ಅಂಗವಾಗಿ ನಾಲ್ಕು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಡಿ.ಎಸ್. ಅರುಣ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ನಮ್ಮ ಮೂರನೇ ಪ್ರಯತ್ನ. ಈ ಹಿಂದೆ ಎರಡು ಭಾರಿ ಶೆಟ್ಟರ ಸಂತೆ ಮಲೆನಾಡಿನ ಮನೆಮಾತಾಗಿತ್ತು. ಏ.೨ರ ಸಂಜೆ ೬.೩೦ಕ್ಕೆ ಶಿವಮೊಗ್ಗದ ಹೆಸರಾಂತ ಕಲಾವಿದರಿಂದ ಹಳೆಯ ಕನ್ನಡ ಹಾಗೂ ಹಿಂದಿ ಚಿತ್ರಗೀತೆಗಳ ಸುಂದರ ಪುಷ್ಪಹಾರ-ಪಂಚಮವೇದ-ಪ್ರೇಮದ ನಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಹೆಸರಾಂತ ಕಲಾವಿದರಾದ ಸುರೇಖಾ ಹೆಗಡೆ, ಶಿವಮೊಗ್ಗ ವಿನಯ್, ಪ್ರಹ್ಲಾದ್ ದೀಕ್ಷಿತ್, ಪೃಥ್ವಿಗೌಡ, ಅನುಷಾ ಕಾನ್ಲೆ, ಸಹನಾ, ಸಂಗೀತ, ಲಕ್ಷ್ಮೀ ಮಹೇಶ್, ಪ್ರತಿಭಾ ನಾಗರಾಜ್ ಮೊದಲಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಏ.೩ರಂದು ಸಂಜೆ ೫ರಿಂದ ಶ್ರೀವಾರಿ ಫೌಂಡೇಷನ್ ಬೆಂಗಳೂರು ಅವರಿಂದ ಶ್ರೀ ಶ್ರೀನಿವಾಸ್ ಕಲ್ಯಾಣೋತ್ಸವ ನಡೆಯಲಿದೆ. ಸಾರ್ವಜನಿಕರು ಕೂಡ ಇದರಲ್ಲಿ ಸಂಕಲ್ಪಮಾಡಿ, ಸೇವೆಯಲ್ಲಿ ಭಾಗವಹಿಸಲಿ ಉಚಿತ ಅವಕಾಶವಿದೆ. ಈಗಾಗಲೇ ೨೦೦ ಜನ ನೋಂದಣಿ ಮಾಡಿದ್ದಾರೆ ಎಂದರು.
ಏ.೪ರ ಶನಿವಾರ ಸಂಜೆ ೬ರಿಂದ ಶಿವಮೊಗ್ಗದ ಗಾಂಧಿಬಜಾರ್ನ ವಾಸವಿ ಮಹಿಳಾ ಸಂಘದ ೫೦ನೇ ವರ್ಷದ ಸುವರ್ಣ ಮಹೋತ್ಸವ ಸಂಭ್ರಮದ ಅಂಗವಾಗಿ ವಿಶೇಷ ಕಾರ್ಯಕ್ರಮ ನಡೆಯಲಿದೆ.
ಏ.೫ರ ಭಾನುವಾರ ಸಂಜೆ ೬.೩೦ರಿಂದ ವಾಸುದೀಕ್ಷಿತ್ ತಂಡದವರಿಂದ ‘ಭಜನಾ ಜಾಮ್ಮಿಂಗ್’ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಶೆಟ್ಟರ ಸಂತೆಯಲ್ಲಿ ೧೨೫ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲು ಯೋಚಿಸಲಾಗಿದೆ. ಬುಕಿಂಗ್ ನಡೆಯುತ್ತಾ ಇದೆ. ಆಸಕ್ತರು ಮೊ. : ೮೯೭೧೫-೧೯೭೩೪, ೯೯೮೬೫-೬೫೮೮೮ ಈ ದೂರವಾಣಿಯನ್ನು ಸಂಪರ್ಕಿಸಬಹುದು. ಸಾರ್ವಜನಿಕರು ಮೂರನೇ ಬಾರಿ ನಡೆಯುತ್ತಿರುವ ಈ ‘ಶೆಟ್ಟರ ಸಂತೆ’ ಕಾರ್ಯಕ್ರಮಕ್ಕೆ ಸಹಕಾರ ನೀಡಿ, ಪ್ರೋತ್ಸಾಹಿಸುವಂತೆ ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಡಾ.ಭರತ್, ಅಶ್ವತ್, ಶ್ರೀನಾಗ್, ನಾಗರಾಜ್ ಶೆಟ್ಟರ್, ಶ್ರೀನಾಥ್, ವಿದ್ಯಾ ಮತ್ತಿತರರಿದ್ದರು.