ಶಿವಮೊಗ್ಗ
ವೈಯುಕ್ತಿಕ ಮತ್ತು ಜಿಲ್ಲೆಯ ಆರ್ಥಿಕ ಸದೃಢತೆ ದೃಷ್ಟಿಯಿಂದ ಚಿಕ್ಕಪುಟ್ಟ ಉದ್ದಿಮೆದಾರು, ಕೈಗಾರಿಕೆಗಳ ಸೇರಿದಂತೆ ಉದ್ಯೋಗದಾತರಿಗೆ ಬ್ಯಾಂಕುಗಳು ನೆರವಿಗೆ ಮುಂದಾಗಬೇಕು ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್. ಎಸ್. ಸುಂದರೇಶ್ ಹೇಳಿದರು.
ನಗರದ ಸಹ್ಯಾದ್ರಿ ಬಡಾವಣೆಯಲ್ಲಿ ಕರ್ಣಾಟಕ ಬ್ಯಾಂಕ್ ಆರಂಭಿಸಿದ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ದೃಷ್ಟಿಯಿಂದ ಬ್ಯಾಂಕುಗಳು ಉದಾರತೆಯಿಂದ ವರ್ತಿಸಬೇಕು. ಹಾಗೆಂದು ಕಾನೂನು, ನಿಯಮ ಮೀರಿ ಸಾಲ ನೀಡಬೇಕಾಗಿಲ್ಲ. ನಿಯಮಕ್ಕೆ ಒಳಪಟ್ಟೆ ಸಾಲ ನೀಡಬೇಕು ಎಂದರು.

ಶಿವಮೊಗ್ಗ ಬದಲಾಗುತ್ತಿದೆ. ಅಭಿವೃದ್ಧಿ ಕಾರ್ಯ ನಾಗಾಲೋಟದಲ್ಲಿದೆ. ಈ ಅಭಿವೃದ್ಧಿಯಲ್ಲಿ ಎಲ್ಲರೂ ಕೈಜೋಡಿಸಬೇಕೆಂದರು.
ಉದ್ಯಮಿ ಕಿಮ್ಮನೆ ಜಯರಾಮ್ ಮಾತನಾಡಿ ಬ್ಯಾಂಕುಗಳು ಸೇರಿದಂತೆ ಪ್ರತಿಯೊಬ್ಬರಲ್ಲಿಯೂ ಧನಾತ್ಮಕ ದೃಷ್ಟಿಕೋನವಿರಬೇಕು. ಇದಾದರೆ ಮಾತ್ರ ಸಾಧನೆ ಸಾಧ್ಯ ಎಂದರಲ್ಲದೆ, ದೇಶದಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾದ ಶಿವಮೊಗ್ಗಕ್ಕೆ ದೊಡ್ಡ ಭವಿಷ್ಯವಿದೆ ಎಂದು ಹೇಳಿದರು.
ನನ್ನ ಅನುಭವದಲ್ಲಿ ಕರ್ಣಾಟಕ ಬ್ಯಾಂಕ್ ಸಿಬ್ಬಂದಿಗಳ ಕಾರ್ಯ ತತ್ಪರತೆ ಶ್ರೇಷ್ಠತೆಯಿಂದ ಕೂಡಿದೆ. ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಬ್ಯಾಂಕಿನ ಯಶಸ್ವಿನ ಗುಟ್ಟು. ನೂತನವಾಗಿ ಜವಾಬ್ದಾರಿ ಹೊತ್ತಿರುವ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದ ರಾಘವೇಂದ್ರ ಭಟ್ ಅವರು ಕೂಡ ಇದೇ ಹಾದಿಯಲ್ಲಿ ಬಂದಿದ್ದು, ಇವರ ಕಾಲದಲ್ಲಿ ಬ್ಯಾಂಕ್ ದೊಡ್ಡ ಯಶಸ್ಸನ್ನು ಸಾಧಿಸುತ್ತದೆ ಎಂದು ಆಶಿಸಿದರು.

ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಿಇಓ ಆದ ರಾಘವೇಂದ್ರ ಭಟ್ ಅವರು ಮಾತನಾಡಿ ಬ್ಯಾಂಕುಗಳು ಬದಲಾಗುತ್ತಿವೆ. ಹೆಚ್ಚು ಹೆಚ್ಚು ಗ್ರಾಹಕ ಸ್ನೇಹಿಯೂ ಆಗುತ್ತಿದೆ. ಆಧುನಿಕ ತಂತ್ರಜ್ಞಾನ ಬ್ಯಾಂಕ್ ಮೂಲಕ ನಮ್ಮ ಕೈ ಸೇರುವ ಹೊತ್ತಿನಲ್ಲಿ ವಂಚನೆಯ ಪ್ರಕರಣಗಳೂ ಹೆಚ್ಚುತ್ತಿದೆ ಎಂದು ಎಚ್ಚರಿಸಿದರು.
ಈ ದೃಷ್ಟಿಯಿಂದ ಗ್ರಾಹಕರು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ನಮ್ಮ ಗ್ರಾಹಕರಿಗೆ ಈ ಕುರಿತು ಅರಿವು ಮೂಡಿಸುವ ದೃಷ್ಟಿಯಿಂದ ವಿಶೇಷ ಕಾರ್ಯಕ್ರಮ ರೂಪಿಸುತ್ತಿದ್ದೇ ವೆ ಎಂದರು.
ಬ್ಕಾಂಕ್ ವ್ಯವಹಾರಕ್ಕೆ ಪ್ರತ್ಯೇಕ ಫೋನ್ ಇಟ್ಟುಕೊಳ್ಳುವುದು ಒಳ್ಳೆಯದು. ಅಪರಿಚಿತರ ಜೊತೆ ವ್ಯವಹಾರ ಮಾಡಬಾರದು. ಒಟಿಪಿ ಮತ್ತು ಆಧಾರ್ ಸಂಖ್ಯೆಯನ್ನು ಹಂಚಿಕೊಳ್ಳಬಾರದು. ಗ್ರಾಹಕರ ಹಣ ಕಾಪಾಡುವುದು ಬ್ಯಾಂಕಿನ ಪ್ರಮುಖ ಗುರಿ ಕೂಡ ಆಗಿದ್ದು, ಇದೇ ಕಾರಣಕ್ಕೆ ಕೋಟಿಗಟ್ಟಲೆ ಹಣವನ್ನು ಬ್ಯಾಂಕ್ ಕಡೆಯಿಂದ ವೆಚ್ಚ ಮಾಡಲಾಗುತ್ತಿದೆ ಎಂದು ಮಾಹಿತಿ ಹಂಚಿಕೊಂಡರು.
ಕರ್ಣಾಟಕ ಬ್ಯಾಂಕ್ ಮುಂದಿನ ಆರ್ಥಿಕ ವರ್ಷದಲ್ಲಿ 1 ಲಕ್ಷ ಕೋಟಿ ರು. ಮುಂಗಡ ಸಾಲ ನೀಡುವ ಗುರಿ ಹೊಂದಿದೆ. ಇದೇ ಹೊತ್ತಿಗೆ 1 ಸಾವಿರ ಮೀರಿ ಸಂಖ್ಯೆಯ ಶಾಖೆಗಳನ್ನು ತೆರೆಯಲಾಗುವುದು ಎಂದರು.
ಬ್ಯಾಂಕಿನ ಶಿವಮೊಗ್ಗ ವಿಭಾಗದ ಎಜಿಎಂ ಸಂಜೀವ್ ಕುಮಾರ್ ಅತಿಥಿಗಳನ್ನು ಪರಿಚಿಯಿಸಿ ಸ್ವಾಗತಿಸಿದರು. ನೂತನ ಶಾಖೆಯ ಪ್ರಬಂಧಕ ಅರವಿಂದ ಸ್ವಾಗತಿಸಿದರು.
ಶಿವಮೊಗ್ಗ ನಗರದ ಸೋಮಿನಕೊಪ್ಪ-ಸಹ್ಯಾದ್ರಿ ಬಡಾವಣೆಯಲ್ಲಿ ಕರ್ನಾಟಕ ಬ್ಯಾಂಕಿನ ನೂತನ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್. ಎಸ್. ಸುಂದರೇಶ್, ಉದ್ಯಮಿ ಕಿಮ್ಮನೆ ಜಯರಾಮ್, ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಭಟ್, ಶಿವಮೊಗ್ಗ ವಿಭಾಗದ ಎಜಿಎಂ ಸಂಜೀವ್ ಕುಮಾರ್ ಪಾಲ್ಗೊಂಡಿದ್ದರು.