ಶಿವಮೊಗ್ಗ : ಆಡಳಿತ ವ್ಯವಸ್ಥೆಯೊಂದಿಗೆ ಕೈ ಜೋಡಿಸಿ ಕಲುಷಿತ ತುಂಗಭದ್ರೆಯನ್ನು ನಿರ್ಮಲಗೊಳಿಸುವ ಕೆಲಸವಾಗಲಿ ಎಂದು ನ್ಯಾ.ಮೂ. ಎಂ.ಎಸ್. ಸಂತೋಷ್ ಹೇಳಿದ್ದಾರೆ.
ಅವರು ಶನಿವಾರ ನಗರದ ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್ ಆವರಣದಲ್ಲಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ಪರ್ಯಾವರಣ ಟ್ರಸ್ಟ್ ಶಿವಮೊಗ್ಗ, ನಿರ್ಮಲ ತುಂಗಾ ಅಭಿಯಾನ ಕರ್ನಾಟಕ, ಶಿವಮೊಗ್ಗ ಮಹಾನಗರ ಪಾಲಿಕೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ನಿರ್ಮಲ ತುಂಗಭದ್ರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಕೆಲವರ ದುರಾಸೆ, ಅಜಾಗರೂಕತೆ, ಬೇಜವಾಬ್ದಾರಿತನಗಳಿಂದ ತುಂಗಭದ್ರೆ ಕಲುಷಿತವಾಗಿದೆ.ಸಂಕಟ ಬಂದಾಗ ವೆಂಕಟರಮಣ ಎನ್ನುವ ಮಾತಿನಂತೆ ನದಿ ನೀರು ಪೂರ್ಣ ಕಲುಷಿತವಾಗಿ ಬಳಸಲು ಯೋಗ್ಯವೇ ಇಲ್ಲ ಎನ್ನುವ ಸ್ಥಿತಿ ಬರುವ ಮೊದಲು ಜಾಗೃತರಾಗಿ ಅಮೃತ
ಪಾನವನ್ನು ರಕ್ಷಣೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಮತ್ತು ಪರ್ಯಾವರಣ ಟ್ರಸ್ಟ್ ವಿವಿಧ ಸಂಘ ಸಂಸ್ಥೆಗಳ ನೆರವಿನೊಂದಿಗೆ ಸರ್ಕಾರಗಳನ್ನು ಅವಹೇಳನ ಹೇಳಿಕೆ ನೀಡದೆ, ಅಧಿಕಾರಿಗಳನ್ನು ಟೀಕಿಸದೆ ಅವರಿಗೆ ನದಿ ನೀರು ಮಾಲಿನ್ಯ ಕಾರಣಗಳ ಮಾಹಿತಿ ನೀಡುತ್ತಾ ಅವರ ಸಹಕಾರ ಪಡೆದು ನಿರ್ಮಲ ತುಂಗಭದ್ರೆ ಯನ್ನಾಗಿಸುವ ದಿಕ್ಕಿನಲ್ಲಿ ಶ್ರದ್ಧಾಪೂರ್ವಕವಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.