ಶಿವಮೊಗ್ಗ : ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಅಧಿಕಾರದ ದಾಹದಲ್ಲಿ ಅಭಿವೃದ್ಧಿಯನ್ನೇ ಮರೆತಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಕಚ್ಚಾಟ ನಡೆಯುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಜೀವಂತವಾಗಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಟೀಕಿಸಿದರು.

ಮುಖ್ಯಮಂತ್ರಿ ಸ್ಥಾನಕ್ಕಾಗಿ ಹಲವರ ಪೈಪೋಟಿ ಇದ್ದರೂ ಕೂಡ ಡಿ.ಕೆ. ಶಿವಕುಮಾರ್ ಮತ್ತು ಹಾಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪರಸ್ಪರ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದೇ ಹಳೆಯ ಸ್ಲೋಗನ್ ಅನ್ನು ಇಬ್ಬರೂ ಹೇಳುತ್ತಿದ್ದಾರೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು. ಆದರೆ, ಹೈಕಮಾಂಡ್ ಸುಮ್ಮನಿದೆ. ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೂ ಕಿಮ್ಮತ್ ಇಲ್ಲವಾಗಿದೆ. ಎಷ್ಟು ದಿನ ಎಂದು ಈ ಇಬ್ಬರೂ ಶೀತಲ ಜಗಳ ಮಾಡುತ್ತಾರೆ. ಇದನ್ನು ಬಿಟ್ಟು ರಾಜ್ಯದ ಜನರ ಒಳಿತಿಗಾಗಿ ವಿಧಾನಸೌಧದ ಮಹಾತ್ಮ ಗಾಂಧೀಜಿ ಪ್ರತಿಮೆ ಎದುರು ಇಬ್ಬರೂ ಧರಣಿ ಕುಳಿತುಕೊಳ್ಳಲಿ. ಹೈಕಮಾಂಡ್ ನಿಂದ ಸ್ಪಷ್ಟತೆಗೆ ಆಗ್ರಹಿಸಲಿ. ಆಗಲಾದರೂ ಹೈಕಮಾಂಡ್ ಇತ್ತ ಕಡೆ ದೃಷ್ಟಿ ಬೀರಬಹುದೆನೋ ಎಂದು ವ್ಯಂಗ್ಯವಾಡಿದರು.
ಇದಲ್ಲದೇ ಮಂತ್ರಿ ಸ್ಥಾನಕ್ಕಾಗಿಯೂ ಕಚ್ಚಾಟ ನಡೆಯುತ್ತಿದೆ. ಅಹಿಂದ ವತಿಯಿಂದ ಮುತ್ತಳ್ಳಿ ಶಿವಣ್ಣ ೨೫ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಹರಿಪ್ರಸಾದ್ ಅವರನ್ನು ಗೃಹ ಮಂತ್ರಿ ಮಾಡಬೇಕು ಎಂದು ಹೈಕಮಾಂಡ್ ಗೇ ಎಚ್ಚರಿಕೆ ಕೊಟ್ಟಿದ್ದಾರೆ. ವಿಧಾನ ಪರಿಷತ್ ಸದಸ್ಯರೂ ರಗಳೆ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಹೊಸ ಶಾಸಕರೂ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಒಟ್ಟಾರೆ, ಇಡೀ ಕಾಂಗ್ರೆಸ್ ಪಕ್ಷದಲ್ಲಿ ರಗಳೆ ನಡೆಯುತ್ತಿದ್ದು, ಅಧಿಕಾರದ ಪಿತ್ತ ನೆತ್ತಿಗೇರಿ ಅಭಿವೃದ್ಧಿಯನ್ನೇ ಮರೆತುಬಿಟ್ಟಿದೆ ಎಂದು ಟೀಕಿಸಿದರು.
ಹಿಂದೂಗಳ ಕೊಲೆಗಳ ತಾಂಡವ : ಗಾಂಜಾ ಹಾವಳಿ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದೂಗಳ ಮೇಲಿನ ದಾಳಿ ಹೆಚ್ಚಾಗುತ್ತಿದೆ. ನೆಲಮಂಗಲ, ಬಾಗಲಕೋಟೆ, ಶಿವಮೊಗ್ಗ ಹೀಗೆ ಎಲ್ಲಾ ಕಡೆ ಹಿಂದೂಗಳ ಮೇಲೆ ದಾಳಿ ನಡೆಯುತ್ತಿದೆ. ರಾಜ್ಯ ಸರ್ಕಾರ ಮುಸ್ಲಿಮರನ್ನು ರಕ್ಷಣೆ ಮಾಡುತ್ತಿದೆ ಎಂಬ ಕಾರಣಕ್ಕಾಗಿ ಈ ಅವಾಂತರಗಳೆಲ್ಲಾ ನಡೆಯುತ್ತಿವೆ. ಜೊತೆಗೆ ರಾಷ್ಟ್ರದ್ರೋಹಿ ಚಟುವಟಿಕೆಗಳು ಹೆಚ್ಚುತ್ತಿವೆ. ಕೊಲೆ, ಸುಲಿಗೆಗಳು ಮಿತಿಮೀರಿವೆ. ಗಾಂಜಾ ಹಾವಳಿಯಂತೂ ಇಡೀ ರಾಜ್ಯವನ್ನೇ ಆವರಿಸಿಕೊಂಡಿದೆ. ಇಡೀ ರಾಜ್ಯ ಒಂದು ರೀತಿ ಡ್ರಗ್ಸ್ ಫ್ಯಾಕ್ಟರಿಯಂತಾಗಿದೆ ಎಂದು ಕೆ.ಎಸ್. ಈಶ್ವರಪ್ಪ ಆರೋಪಿಸಿದರು.
ಎರಡು ದಿನ ನಿದ್ದೆ ಮಾಡಿಲ್ಲ
ಶಿವಮೊಗ್ಗದ ಸೂಳೆಬೈಲ್ ಘಟನೆಯನ್ನು ನೆನೆಸಿಕೊಂಡರೆ ಕಣ್ಣೀರು ಬರುತ್ತದೆ. ಅಪ್ರಾಪ್ತ ಹಿಂದೂ ಬಾಲಕನನ್ನು ಕೆಲವು ಮುಸ್ಲಿಂ ಅಪ್ರಾಪ್ತ ಬಾಲಕರು ಕೊಂದು ಹಾಕಿದ್ದಾರೆ. ಮಗನನ್ನು ಕಳೆದುಕೊಂಡ ಆ ತಾಯಿಯ ದುಃಖವನ್ನು ನಮ್ಮಿಂದ ನೋಡಲಾಗುವುದಿಲ್ಲ. ನಾನು ಎರಡು ದಿನ ನಿದ್ದೆ ಮಾಡಿಲ್ಲ. ಇಂತಹ ಘಟನೆಗಳಿಗೆಲ್ಲ ಈ ರಾಜ್ಯ ಸರ್ಕಾರದ ಅವಾಂತರಗಳೇ ಕಾರಣ. ಮುಸ್ಲಿಂ ಗೂಂಡಾಗಳು ಹೆಚ್ಚಾಗುತ್ತಲೇ ಇದ್ದಾರೆ. ಈ ಹೊಸ ಟ್ರೆಂಡ್ ಹೇಡಿಗಳು ಮಕ್ಕಳನ್ನು ಬಿಟ್ಟು ಕೊಲೆ ಮಾಡಿಸುವತ್ತ ಯೋಚಿಸುತ್ತಿದ್ದಾರೆ. ಈ ಸರ್ಕಾರಕ್ಕೆ ಬುದ್ಧಿ ಬೇಡವೇ? ಯಾರ ಬಳಿ ಹೇಳುವುದು? ಸತ್ತ ಸರ್ಕಾರವನ್ನು ಎಚ್ಚರಿಸುವುದಾದರೂ ಹೇಗೆ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ.ಇ. ಕಾಂತೇಶ್, ಎಂ. ಶಂಕರ್, ಶ್ರೀ ಕೃಷ್ಣಾನಂದ, ಶ್ರೀಕಾಂತ್, ಶಿವಾಜಿ, ಚೇತನ್, ವಿನಯ್ ಇದ್ದರು.