ಶಿವಮೊಗ್ಗ : ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಮಾ.೨ರಂದು ಸಂಜೆ ೬ ಗಂಟೆಗೆ ರಂಗಭೂಮಿ ಕೊಡಗು ಹಾಗೂ ಶಿವಮೊಗ್ಗ ತಂಡದ ವತಿಯಿಂದ ’ನಿಜ ಮಹಾತ್ಮ ಬಾಬಾ ಸಾಹೇಬ’ ಎಂಬ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಖಜಾಂಚಿ ಕೆ.ಇ. ಕಾಂತೇಶ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರತ ರತ್ನ ಬಿ.ಆರ್. ಅಂಬೇಡ್ಕರ್ ಅವರ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಈ ನಾಟಕವನ್ನು ಸಿದ್ಧಪಡಿಸಲಾಗಿದೆ. ಅವರ ಹೋರಾಟ, ಸಿದ್ಧಾಂತ ಮತ್ತು ರಾಷ್ಟ್ರಪ್ರೇಮದ ವಿವಿಧ ಮಜಲುಗಳನ್ನು ನಾಟಕ ಅನಾವರಣಗೊಳಿಸುತ್ತದೆ. ಖ್ಯಾತ ರಂಗಕರ್ಮಿ ಅಡ್ಡಾಂಡ ಕಾರ್ಯಪ್ಪ ಈ ನಾಟಕದ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಕೊಡಗಿನ ಪ್ರತಿಭಾನ್ವಿತ ಕಲಾವಿದರು ಅಭಿನಯಿಸುವರು. ಅಂಬೇಡ್ಕರ್ ಅವರ ಹೊಸ ಆಯಾಮಗಳನ್ನು ಪ್ರೇಕ್ಷಕರಿಗೆ ತಲುಪಿಸುವುದು ಇದರ ಉದ್ದೇಶವಾಗಿದೆ ಎಂದರು.
ಈ ನಾಟಕ ಪ್ರದರ್ಶನದ ಉದ್ಘಾಟನೆಯನ್ನು ಚಿತ್ರದುರ್ಗ ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ನೆರವೇರಿಸುವರು. ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಈ ನಾಟಕಕ್ಕೆ ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿದೆ. ಆದರೆ, ಗೌರವ ಪ್ರವೇಶ ಪತ್ರವನ್ನು ನೀಡಲಾಗುವುದು. ಆದ್ದರಿಂದ ರಂಗ ಪ್ರೇಮಿಗಳು ಗೌರವ ಪ್ರವೇಶ ಪಡೆದು ಪ್ರದರ್ಶನಕ್ಕೆ ೧೦ ನಿಮಿಷ ಮುಂಚೆಯೇ ಆಗಮಿಸಬೇಕು ಎಂದು ಮನವಿ ಮಾಡಿದರು.
ಹೆಚ್ಚಿನ ವಿವರ ಮತ್ತು ಉಚಿತ ಗೌರವ ಪ್ರವೇಶ ಪತ್ರಕ್ಕಾಗಿ ಮೊ.ನಂ. ೯೮೮೬೧ ೭೭೩೧೧, ೯೯೮೦೩ ೧೭೩೮೨ ಅನ್ನು ಸಂಪರ್ಕಿಸಬಹುದಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ಪ್ರಮುಖರಾದ ಎಂ. ಶಂಕರ್, ಶ್ರೀ ಕೃಷ್ಣಾನಂದ, ಶ್ರೀಕಾಂತ್, ಶಿವಾಜಿ, ಚೇತನ್, ವಿನಯ್ ಇದ್ದರು.