ಶಿವಮೊಗ್ಗ : ಇತಿಹಾಸ ಮತ್ತು ಪುರಾಣ ಪ್ರಸಿದ್ಧ ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದ್ದು, ಈಗಾಗಲೇ ಎಲ್ಲಾ ಸಿದ್ಧತೆಗಳು ಪೂರ್ಣಹಂತ ತಲುಪಿದ್ದು, ಎಲ್ಲರೂ ಸೇರಿ ಒಟ್ಟಾಗಿ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸೋಣ ಎಂದು ಶ್ರೀ ಕೋಟೆ ಮಾರಿಕಾಂಬ ದೇವಸ್ಥಾನ ಸಮಿತಿಯ ಅಧ್ಯಕ್ಷ ಎಸ್.ಕೆ. ಮರಿಯಪ್ಪ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಅವರು ಇಂದು ದೇವಸ್ಥಾನ ಆವರಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶ್ರೀ ಕೋಟೆ ಮಾರಿಕಾಂಬ ದೇವಿಯ ಜಾತ್ರೆ ನಾಳೆಯಿಂದ ಆರಂಭಗೊಳ್ಳಲಿದೆ. ಇದಕ್ಕಾಗಿ ಸರ್ವಸಿದ್ಧತೆಗಳು ಪೂರ್ಣಹಂತ ತಲುಪಿವೆ. ಮಂಗಳವಾರ ಬೆಳಿಗ್ಗೆ 5ಗಂಟಗೆ ಗಾಂಧಿಬಜಾರಿನ ತವರು ಮನೆಯಲ್ಲಿ ಸಂಪ್ರದಾಯಕ ಪೂಜೆಗಳೊಂದಿಗೆ ಜಾತ್ರೆಗೆ ಚಾಲನೆ ನೀಡಲಾಗುವುದು. ಅಂದು ರಾತ್ರಿ ಮೆರವಣಿಗೆಯ ಮೂಲಕ ಮಾರಿ ಗದ್ದುಗೆಗೆ ಅಮ್ಮನವರನ್ನು ಪ್ರತಿಷ್ಠಾಪಿಸಲಾಗುವುದು. ಬುಧವಾರ ಬೆಳಿಗ್ಗೆ 5 ಗಂಟೆಯಿಂದಲೇ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಗಾಂಧಿಬಜಾರ್ ಮತ್ತು ಅಮ್ಮನ ಗದ್ದುಗೆ ಎರಡೂ ಸ್ಥಳಗಳಲ್ಲಿಯೂ ಅಮ್ಮನ ದರ್ಶನ ಪಡೆಯಲು ಲಕ್ಷಾಂತರ ಜನರು ಆಗಮಿಸುವುದರಿಂದ ಯಾವುದೇ ತೊಂದರೆಯಾಗದಂತೆ ಎಲ್ಲರಿಗೂ ಅಮ್ಮನ ದರ್ಶನ ಆಗುವಂತೆ ನೋಡಿಕೊಳ್ಳಲಾಗುವುದು. ವಿಶೇಷ ಚೇತನರಿಗೆ ಹಾಗೂ ವಿಐಪಿಗಳಿಗೆ ಪ್ರತ್ಯೇಕವಾಗಿ ಈ ಬಾರಿ ಎರಡು ಸಾಲುಗಳನ್ನು ನಿರ್ಮಿಸಲಾಗಿದೆ. ಬ್ಯಾರಿಕೇಡನ್ನು ಬಳಸಲಾಗುತ್ತದೆ. ವಿಶೇಷ ದರ್ಶನಕ್ಕೆ 200 ರೂ. ಮತ್ತು 500 ರೂ.ಗಳ ಟಿಕೇಟ್ ದರ ನಿಗಧಿಪಡಿಸಲಾಗಿದೆ. ಈ ಟಿಕೇಟುಗಳು ಗಾಂಧಿಬಜಾರಿನ ಪ್ರವೇಶ ದ್ವಾರದಲ್ಲಿ ನಿರ್ಮಿಸಿರುವ ಕಾಳಿಕಾ ದೇವಿಯ ಮೂರ್ತಿಯ ಮುಂಭಾಗದಲ್ಲಿ ದೊರೆಯಲಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಕೂಡ ಪಡೆಯಬಹುದಾಗಿದೆ ಎಂದರು.

ಜಾತ್ರೆ ನಡೆಯುವ ಗಾಂಧಿಬಜಾರಿನ ಕೋಟೆ ರಸ್ತೆ ಸುತ್ತಮುತ್ತಲ ವಾಹನ ಸಂಚಾರ ಮಾರ್ಗ ನಿಷೇಧಿಸಲಾಗಿದೆ. ಮತ್ತು ಮಾರ್ಗ ಬದಲಾವಣೆ ಮಾಡಲಾಗಿದ್ದು, ಸೈನ್ಸ್ ಮೈದಾನ, ಸೇಕ್ರೇಡ್ ಹಾರ್ಟ್ ಚರ್ಚ್, ಮಹಾನಗರ ಪಾಲಿಕೆ ಆವರಣಗಳಲ್ಲಿ ವಾಹನದ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಮತ್ತು ಬೇರೆ ಎಲ್ಲಿ ವಾಹನಗಳನ್ನು ನಿಲುಗಡೆ ಮಾಡಬಹುದು ಎಂಬುದರ ಬಗ್ಗೆಯೂ ಯೋಚಿಸಲಾಗುತ್ತಿದೆ. ಒಟ್ಟಾರೆ ಯಾವುದೇ ತೊಂದರೆಯಾಗದಂತೆ ದೇವಿಯ ದರ್ಶನ ಪಡೆಯಲು ಅನುಕೂಲ ಮಾಡಿಕೊಡಲಾಗುವುದು ಎಂದರು.
ವಾಸವಿ ಯುವಕ ಸಂಘದ ವತಿಯಿಂದ ಈ ಬಾರಿಯು ಕೂಡ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಅನೇಕ ಸಂಘ-ಸಂಸ್ಥೆಗಳು ಪಾನಕ, ಮಜ್ಜಿಗೆ ವ್ಯವಸ್ಥೆಯನ್ನು ಮಾಡಿದ್ದಾರೆ. ಜಾತ್ರೆಯ ಸುತ್ತಮುತ್ತ ಇರುವ ತ್ರಿಕೋನಾಕಾರದ ಜಾಗದಲ್ಲಿ ಯಾವುದೇ ಅಂಗಡಿಗಳನ್ನು ತೆರೆಯುವಂತಿಲ್ಲ. ಈ ಬಾರಿ ಇದನ್ನು ಬಹಳ ವಿಶೇಷವಾಗಿ ಪರಿಗಣಿಸಿ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಪ್ರಮುಕವಾಗಿ ಪ್ಲಾಸ್ಟಿಕ್ ಅನ್ನು ನಿಷೇಧ ಮಾಡಲಾಗಿದ್ದು, ಅದರ ಬದಲು ಸುಮಾರು 20 ಸಾವಿರ ಗೋಧಿಹಿಟ್ಟಿನ ಕೈಚೀಲದಿಂದ ಪ್ರಸಾದವನ್ನು ವಿತರಿಸಲಾಗುವುದು. ಅಂಗಡಿಗಳ ಮಾಲೀಕರುಗಳಿಗೂ ಪ್ಲಾಸ್ಟಿಕ್ ಬಳಸದಂತೆ ಸೂಚನೆ ನೀಡಲಾಗಿದೆ ಎಂದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಮಾತನಾಡಿ, ಈ ಬಾರಿ ಜಾತ್ರೆಗೆ ವಿಶೇಷ ಅಲಂಕಾರವನ್ನು ಇಡೀ ನಗರದ ತುಂಬಾ ಮಾಡಲಾಗಿದೆ. ಸಾರ್ವಜನಿಕರಿಂದ ಅಲಂಕಾರಕ್ಕೆ ಪ್ರಶಂಸೆ ವ್ಯಕ್ತವಾಗಿದ್ದು, ಇಡೀ ರಾಜ್ಯದಲ್ಲಿಯೇ ಇದು ಮಾದರಿಯಾಗಿದೆ. ಜೊತೆಗೆ ದೇವಸ್ಥಾನದಲ್ಲಿ ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ಅವರ ಸಹಕಾರದಲ್ಲಿ ಹೂವಿನ ಅಲಂಕಾರವನ್ನು ಮಾಡಲಾಗಿದೆ. ಇದಕ್ಕಾಗಿ ಸುಮಾರು 10 ಸಾವಿರ ಗುಲಾಬಿ ಹೂಗಳನ್ನು ಬಳಸಲಾಗಿದೆ. 15 ಸಮಿತಿಗಳನ್ನು ರಚಿಸಲಾಗಿದೆ.
ಒಟ್ಟಾರೆ ಈ ಬಾರಿ ಜಾತ್ರೆ ಅತ್ಯಂತ ವಿಜೃಂಭಣೆಯಿಂದ ನಡೆಯಲಿದ್ದು ಈ ವರ್ಷ ಅತೀ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ಗುಪ್ತಚರ ಇಲಾಖೆಯಿಂದಲೂ ತಿಳಿದು ಬಂದಿದೆ. ಶಾಂತಿ-ಸುವ್ಯವಸ್ಥೆ ಕಾಪಾಡಲು ಅಗತ್ಯಕ್ರಮ ಕೈಗೊಳ್ಳಲಾಗಿದೆ. ಸಿಸಿ ಕ್ಯಾಮೇರಾಗಳನ್ನು ಬಳಸಲಾಗಿದೆ. ಅಲ್ಲದೆ 8 ವಾಚ್ ಟವರ್ಸ್ಗಳನ್ನು ಸ್ಥಾಪಿಸಲಾಗಿದೆ. ವಿದ್ಯುತ್ಛಕ್ತಿ ನಿಲುಗಡೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಉಮಾಪತಿ, ಹನುಮಂತಪ್ಪ, ಎಸ್.ಸಿ.ಲೋಕೇಶ್, ಚಂದ್ರಶೇಖರ್ ಸೇರಿದಂತೆ ಹಲವರಿದ್ದರು.