ಶಿವಮೊಗ್ಗ,ಫೆ.12:
ನಮ್ಮೂರ ಬಳಗ, ಶಿವಮೊಗ್ಗ ಇದರ ವತಿಯಿಂದ ಕೋಟೆ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಫೆ.೧೫ರಂದು ಅಲ್ಲಮಪ್ರಭು ಮೈದಾನ (ಫ್ರೀಡಂ ಪಾರ್ಕ್)ನಲ್ಲಿ ರಾಷ್ಟ್ರ ಮಟ್ಟದ ಭಾರೀ ಟಗರು ಕಾಳಗವನ್ನು ಆಯೋಜಿಸಲಾಗಿದೆ ಎಂದು ನಮ್ಮೂರ ಬಳಗದ ಪ್ರಧಾನ ಸಂಚಾಲಕ ಕೆ.ರಂಗನಾಥ್ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
೮ ಹಲ್ಲಿನ ಮರಿ ಕಾಳಗದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಟ್ರೋಫಿಗೆ ಪ್ರವೇಶ ಶುಲ್ಕ ೨.೫೦೦ರೂ. ಇದ್ದು ಪ್ರಥಮ ಬಹುಮಾನ ೧,೦೧,೦೦೧ರೂ ಹಾಗೂ ದ್ವಿತೀಯ ೪೪,೪೪೪ ರೂ. ಮತ್ತು ತೃತೀಯ ಬಹುಮಾನ ೨೨,೨೨೨ರೂ., ೬ ಹಲ್ಲಿನ ಮರಿ ಕಾಳಗಕ್ಕೆ ವೀರ ಶಿವಪ್ಪ ನಾಯಕ ಟ್ರೋಫಿಗೆ ಪ್ರವೇಶ ಶುಲ್ಕ ೨ ಸಾವಿರ ರೂ.ಇದ್ದು ಪ್ರಥಮ ಬಹುಮಾನ ೬೬,೬೬೬ರೂ. ದ್ವಿತೀಯ ೩೩,೩೩೩ರೂ. ಹಾಗೂ ತೃತೀಯ


೧೧,೧೧೧ರೂ., ೪ ಹಲ್ಲಿನ ಮರಿ ಕಾಳಗಕ್ಕೆ ಶ್ರೀ ಭಗೀರಥ ಟ್ರೋಫಿಗೆ ಪ್ರವೇಶ ಶುಲ್ಕ ೧,೫೦೦ ರೂ ಇದ್ದು ಪ್ರಥಮ ಬಹುಮಾನ ೪೪,೪೪೪ರೂ. ದ್ವಿತೀಯ ೨೨,೨೨೨ರೂ. ತೃತೀಯ ೯,೯೯೯ರೂ., ೨ ಹಲ್ಲಿನ ಮರಿ ಕಾಳಗಕ್ಕೆ ವೀರ ಸಿಂಧೂರ ಲಕ್ಷ್ಮಣ ಟ್ರೋಫಿಗೆ ಪ್ರವೇಶ ಶುಲ್ಕ ೧,೦೦೦ರೂ.ಇದ್ದು ಪ್ರಥಮ ಬಹುಮಾನ ೨೨,೨೨೨ರೂ. ದ್ವಿತೀಯ ೧೧,೧೧೧ರೂ. ಹಾಗೂ ತೃತೀಯ ೫,೫೦೦ರೂ ಜೊತೆಗೆ ಎಲ್ಲಾ ಬಹುಮಾನಗಳಿಗೆ ಆಕರ್ಷಕ ಟ್ರೋಫಿ ನೀಡಲಾಗುವುದು ಎಂದರು.
ಪಂದ್ಯಾವಳಿ ವೀಕ್ಷಿಸಲು ಸುಮಾರು 30ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದ್ದು, ಮಹಿಳೆಯರಿಗಾಗಿ ಪ್ರತ್ಯೇಕ ಪಿಂಕ್ ಕಲರ್ ಹಾಗೂ ಹಿರಿಯ ನಾಗರೀಕರಿಗಾಗಿ ಪತ್ಯೇಕ ಗ್ಯಾಲರಿ ವ್ಯವಸ್ಥೆಯಿದೆ. ಶಾಂತವೇರಿ ಗೋಪಾಲಗೌಡ ವೇದಿಕೆ ನಿರ್ಮಿಸಲಾಗುತ್ತಿದೆ. ಎರಡು ಅಂಕಣಗಳಲ್ಲಿ ಈ ಪಂದ್ಯಾವಳಿ ನಡೆಯುತ್ತದೆ ಎಂದರು.

ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಖ್ಯಾತ ಚಲನಚಿತ್ರ ನಟ ಶಿವರಾಜ್ಕುಮಾರ್, ಬಸವ ಕೇಂದ್ರದ ಸ್ವಾಮೀಜಿ, ಎಂ. ಶ್ರೀಕಾಂತ್, ಆರ್.ಎಂ. ಮಂಜುನಾಥ ಗೌಡ, ಕೆ.ಎಸ್. ಈಶ್ವರಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಸಂಚಾಲಕ ನಾಗರಾಜ್ ಕಂಕಾರಿ ಮಾತನಾಡಿ, ಈ ಪಂದ್ಯಾವಳಿ ವೀಕ್ಷಕರಿಗಾಗಿ ೧೦೦ ರೂ. ಬೆಲೆಯ ಲಕ್ಕಿ ಡ್ರಾ ಆಯೋಜಿಸಲಾಗಿದೆ. ಒಟ್ಟು ಮೂರು ೩೦ ಕೆ.ಜಿ.ಯ ತೂಕದ ಟಗರು ಬಹುಮಾನವಿದೆ ಎಂದರು.
ಇನ್ನೋರ್ವ ಸಂಚಾಲಕ ಐಡಿಯಲ್ ಗೋಪಿ ಮಾತನಾಡಿ, ವೀಕ್ಷಕರಿಗಾಗಿ ಐದುಸಾವಿರ ಜನರಿಗೆ ಮಜ್ಜಿಗೆ, ಕೋಸಂಬರಿ, ಪಾನಕ ವಿತರಿಸಲಾಗುವುದು. ತೆಲಂಗಾಣ, ಮಹಾರಾಷ್ಟ್ರ, ಜೋದ್ಪುರ್ ಸೇರಿದಂತೆ ದೇಶದ ವಿವಿಧೆಡೆಯಿಂದ ಕಾಳಗದಲ್ಲಿ ಟಗರುಗಳು ಭಾಗವಹಿಸುತ್ತಿವೆ ಎಂದರು.
ಸಂಚಾಲಕ ಹೆಚ್.ಪಾಲಾಕ್ಷಿ ಮಾತನಾಡಿ, ವೀಕ್ಷಕರು ಹಾಗೂ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವವರಿಗೆ ಬೆಳಿಗ್ಗೆ ೮-೩೦ರಿಂದ ತಡರಾತ್ರಿಯವರೆಗೆ ತಿಂಡಿ, ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಕಾರ್ಪೂರೇಟರ್ ಸಿ.ಎಸ್. ಮಾಲತೇಶ್, ಹೆಚ್.ಪಿ. ಗಿರೀಶ್, ಬಿ.ಲೋಕೇಶ್, ಎಂ.ರಾಕೇಶ್, ಯೋಗೇಶ್, ಎಸ್.ಬಸವರಾಜ್, ಚಂದ್ರು, ರಾಮುಪಾಟೀಲ್, ದಿನೇಶ್, ಸುಬ್ರಹ್ಮಣ್ಯ, ಮನ್ವಿತ್ ಹಾಗೂ ಇದ್ದರು.