ಶಿವಮೊಗ್ಗ : ಪರಿಸರ ವಿರೋಧಿ, ಜನ ವಿರೋಧಿ, ಅವೈಜ್ಞಾನಿಕ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ವಿರೋಧಿಸಿ ಇಂದು ರಾಷ್ಟ್ರಭಕ್ತರ ಬಳಗ ಮತ್ತು ಪರಿಸರಕ್ಕಾಗಿ ನಾವು ಸಂಘಟನೆಗಳು ಸಂಯುಕ್ತವಾಗಿ ನಗರದ ಸೀನಪ್ಪಶೆಟ್ಟಿ ವೃತ್ತದಿಂದ ಜಿಲ್ಲಾಧಿಕಾರಿ ಕಛೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡರು.
ರಾಷ್ಟ್ರಭಕ್ತ ಬಳಗದ ಸಂಚಾಲಕ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಸರ್ಕಾರ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಲು ಬಿಡುವುದಿಲ್ಲ.
೧೦ಸಾವಿರ ೭೦೦ ಕೋಟಿ ರೂಪಾಯಿ ಲೂಟಿ ಮಾಡುವ ಸಂಚು ಈ ಯೋಜನೆಯಲ್ಲಿದ್ದಾಗಿದೆ. ಮುಂದಿನ ಪೀಳಿಗೆಗೆ ಸಮೃದ್ಧ ನೀರನ್ನು ಕೊಂಡೊಯ್ಯುವ ಉದ್ದೇಶ ಈ ಹೋರಾಟದ್ದಾಗಿದೆ. ಶತಾಯ-ಗತಾಯ ಈ ಯೋಜನೆಯನ್ನು ಸಾರ್ವಜನಿಕರ ಬೆಂಬಲದೊಂದಿಗೆ ನಿಲ್ಲಿಸುತ್ತೇವೆ ಎಂದು ಸರ್ಕಾರದ ವಿರುದ್ಧ ಗುಡುಗಿದರು.

ಪರಿಸರ ಹೋರಾಟಗಾರ ಪ್ರೊ.ಬಿ.ಎಂ. ಕುಮಾರಸ್ವಾಮಿ ಮಾತನಾಡಿ, ಕೇಂದ್ರ ಅರಣ್ಯ ಮತ್ತು ಪರಿಸರ ಮಂತ್ರಾಲಯದ ಅಧಿಕಾರಿ ಪ್ರಣೀತಾಪೌಲ್, ಅಳಿವಿನಂಚಿನಲ್ಲಿರುವ ಸಿಂಗಳೀಕ, ಮಂಗಟ್ಟೆ ಪಕ್ಷಿಗಳು ಪಶ್ವಿಮ ಘಟ್ಟದ ಈ ಸಂರಕ್ಷಣಾ ಅರಣ್ಯ ವಲಯ ದಲ್ಲಿದ್ದು, ಇಲ್ಲಿ ಯಾವುದೇ ಕಾರಣಕ್ಕೂ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೊಳಿಸ ಬಾರದು ಎಂದು ವರದಿ ನೀಡಿದ್ದರೂ ಅದನ್ನು ಮೆಟ್ಟಿ ರಾಜ್ಯ ಅರಣ್ಯ ಅಧಿಕಾರಿ ಸೆಂಥಿಲ್ಕುಮಾರ್ ಎನ್ನುವವರು ಒಂದೇ ಪುಟದ ವರದಿಯನ್ನು ನೀಡಿ, ಇಲ್ಲಿ ಯಾವುದೇ ಪ್ರಾಣಿ, ಪಕ್ಷಿಗಳಿಗೆ ಹಾನಿಯಾಗುವುದಿಲ್ಲ. ಈ ಯೋಜನೆಯನ್ನು ಜಾರಿ ಗೊಳಿಸಬಹುದು ಎಂದು ವರದಿ ನೀಡಿದ್ದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರಿಸರ ತಜ್ಞ ಡಾ.ಎಲ್.ಕೆ. ಶ್ರೀಪತಿ ಮಾತನಾಡಿ, ಜಲಚರ, ಕೃಷಿಭೂಮಿ, ಮತ್ಸೋದ್ಯಮ, ಸಸ್ಯ ಸಂಪತ್ತಿನ ಹಾನಿಗಳ ಬಗ್ಗೆ ಕೆಪಿಸಿಎಲ್ ನೀಡುವ ಪರಿಹಾರ ಏನು ಎಂಬುದರ ಬಗ್ಗೆ ಸ್ಪಷ್ಟೀಕರಣ ನೀಡಬೇಕೆಂದು ಕೆಪಿಸಿಎಲ್ಗೆ ಪತ್ರಬರೆದು ಆಗ್ರಹಿಸಿದರು. ಇಂದಿನವರೆಗೂ ಯಾವುದೇ ಲಿಖಿತ ಉತ್ತರ ಬಂದಿಲ್ಲ. ಇದು ಕೆಪಿಸಿಎಲ್ನ ಜನವಿರೋಧಿ, ಪರಿಸರ ವಿರೋಧಿ ಧೋರಣೆಯನ್ನು ತೋರಿಸುತ್ತದೆ ಎಂದು ಕಿರಿಕಾರಿದರು.
ಪ್ರತಿಭಟಯಲ್ಲಿ ಪ್ರಮುಖರಾದ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ಎ.ಎಸ್.ಪದ್ಮನಾಭ ಭಟ್, ಎಂ.ಶಂಕರ್, ಪರಶುರಾಮೇಗೌಡ, ರವಿ, ರಮೇಶ್ಬಾಬು, ಈ. ವಿಶ್ವಾಸ್, ಶ್ರೀಕಾಂತ್, ಡಾ.ಬಸವರಾಜು, ಮಹಾಲಿಂಗಯ್ ಶಾಸ್ತ್ರೀ, ಜಿ.ವಿಜಯಕುಮಾರ್, ಕವಿತಾ, ಡಾ.ಶೇಖರ್ ಗೌಳೇರ್, ಮೋಹನ್ ಜಾದವ್, ಜನಾರ್ಧನ್ ಪೈ, ಕ.ರ.ವೇ.ಸಿಂಹ ವೇದಿಕೆಯ ಮಧು, ರವಿ ಮೊದಲಾದವರಿದ್ದರು.
ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ತಮ್ಮ ಸರ್ಕಾರ ಇನ್ನೂ ಅನುಮತಿಯನ್ನೇ ನೀಡಿಲ್ಲ ಎಂದಿದ್ದಾರೆ. ಆದರೂ ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಈ ಮಾರಕ ಯೋಜನೆಗೆ ಇನ್ನಿಲ್ಲದ ಉತ್ಸಾಹ ತೋರುತ್ತಿದ್ದಾರೆ. ಅವರು ಶಿವಮೊಗ್ಗ ಕಡೆತಲೆ ಹಾಕಬಾರದು. ಜಿಲ್ಲೆಯಲ್ಲಿ ಅವರಿಗೆ ಕಾಲಿಡಲು ಬಿಡುವುದಿಲ್ಲ. ಯೋಜನೆ ಸ್ಥಗಿತಗೊಳಿಸುವ ವರೆಗೆ ಹೋರಾಟ ನಿಲ್ಲದು.
-ಕೆ.ಈ.ಕಾಂತೇಶ್, ರಾಷ್ಟ್ರಭಕ್ತರ ಬಳಗದ ಮುಖಂಡ
ಶರಾವತಿ ಕಣಿವೆಯಲ್ಲಿ ಈ ಯೋಜನೆ ೮ನೆಯದು. ೧೩೦ಅಡಿ ವ್ಯಾಸದ ಸುರಂಗವನ್ನು ಈ ಪರಿಸರ ಮಾರಕ ಯೋಜನೆಗೆ ಕೊರೆಯಲಾಗುವುದು. ೧೮,೫೦೦ ಟನ್ ಜಿಲೆಟಿನ್ ಸ್ಪೋಟಕ ಬಳಸಲಾಗುವುದು. ಪಟಾಕಿ ಹೊಡೆಲೇ ಅನುಮತಿ ನೀಡದ ಸರ್ಕಾರ ಜಿಲೆಟಿನ್ ನಂಥಹ ಸ್ಪೋಟಕಕ್ಕೆ ಹೇಗೆ ಅನುಮತಿ ನೀಡುತ್ತದೆ? ಬೇಕಾದರೆ ನಮ್ಮ ಜೇವ ತೆಗೆದು ಯೋಜನೆ ಜಾರಿಗೊಳಿಸಲಿ.
ಶ್ರೀ ಮಾರುತಿ ಗುರೂಜಿ, ಬಂಗಾರಮಕ್ಕಿ ಕ್ಷೇತ್ರ