ಸಾಗರ : ಒಂಬತ್ತು ದಿನಗಳ ಮಾರಿಕಾಂಬಾ ಜಾತ್ರೆ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಬುಧವಾರ ರಾತ್ರಿ ಅಮ್ಮನವರನ್ನು ವನಕ್ಕೆ ಬಿಡುವ ಶಾಸ್ತ್ರದ ಜಾತ್ರೆ ಸಂಪನ್ನಗೊಂಡಿದೆ. ಮಾರಿಕಾಂಬಾ ಜಾತ್ರೆಯ ಒಂಬತ್ತು ದಿನಗಳು ಅಪಾರ ಜನಸ್ತೋಮ ದೇವಿಯ ದರ್ಶನ ಮಾಡಿದ್ದು ಒಂದು ಅಂದಾಜಿನ ಪ್ರಕಾರ ೨೫ಲಕ್ಷಕ್ಕೂ ಹೆಚ್ಚಿನ ಜನರು ದೇವಿ ದರ್ಶನ ಪಡೆದಿದ್ದಾರೆ ಎನ್ನಲಾಗುತ್ತಿದೆ.
ಜಾತ್ರೆ ಪ್ರಾರಂಭವಾಗಿ ಮೊದಲ ದಿನ ಅಮ್ಮನವರನ್ನು ತವರು ಮನೆಯಲ್ಲಿ ಪ್ರತಿಷ್ಟಾಪನೆ ಮಾಡಿದ ಸಂದರ್ಭದಲ್ಲಿ ಒಂದಷ್ಟು ಗೊಂದಲ ಉಂಟಾಗಿತ್ತು. ಪೊಲೀಸರು ಭಕ್ತರನ್ನು ಜೊತೆಗೆ ಸಮಿತಿಯವರನ್ನು, ಅಧಿಕಾರಿಗಳನ್ನು, ಪತ್ರಕರ್ತರನ್ನು ಸಹ ದೇವಿ ದರ್ಶನಕ್ಕೆ ಬಿಡದೆ ಅಡ್ಡಿಪಡಿಸಿದ ಘಟನೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಅಮ್ಮನವರನ್ನು ಗಂಡನ ಮನೆಯಲ್ಲಿ ಪ್ರತಿಷ್ಟಾಪನೆ ಮಾಡಿದ ನಂತರವೂ ಒಂದೆರಡು ದಿನ ಇದೇ ಪರಿಸ್ಥಿತಿ ಇತ್ತಾದರೂ ಶಾಸಕರ ಮುತುವರ್ಜಿ, ಅಧಿಕಾರಿಗಳ ಪಾಲ್ಗೊಳ್ಳುವಿಕೆಯಿಂದ ಸರದಿ ಸಾಲಿನಲ್ಲಿ ಹೋಗಲು ಭಕ್ತರಿಗೆ ಸೂಕ್ತ ಬ್ಯಾರಿಕೇಡ್ ವ್ಯವಸ್ಥೆ ಮಾಡಿದ್ದರಿಂದ ಗೊಂದಲ ಆಗಲಿಲ್ಲ. ಆದರೂ ಸಮಿತಿಯು ಅಮ್ಮನವರ ದರ್ಶನಕ್ಕೆ ಭಕ್ತಾದಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿರಲಿಲ್ಲ ಎನ್ನುವ ದೂರು ಕೇಳಿ ಬಂದಿದೆ.

ಅದ್ದೂರಿ ಜಾತ್ರೆ : ಒಂಬತ್ತು ದಿನಗಳ ಮಾರಿಕಾಂಬಾ ದೇವಿ ಜಾತ್ರೆಯನ್ನು ಅತ್ಯಂತ ಯಶಸ್ವಿಯಾಗಿ, ಶಾಂತಿಯುತವಾಗಿ ನಡೆಯಲು ಅವಕಾಶ ಕಲ್ಪಿಸಿದ ಎಲ್ಲರಿಗೂ ಶಾಸಕ ಗೋಪಾಲಕೃಷ್ಣ ಬೇಳೂರು ಧನ್ಯವಾದ ತಿಳಿಸಿದರು. ಅಮ್ಮನವರನ್ನು ವನಕ್ಕೆ ಬಿಡುವ ಶಾಸ್ತ್ರದಲ್ಲಿ ಬುಧವಾರ ಪಾಲ್ಗೊಂಡು ಮಾತನಾಡಿದ ಅವರು ಒಂಬತ್ತು ದಿನಗಳ ಕಾಲ ಲಕ್ಷಾಂತರ ಭಕ್ತರು ಅಮ್ಮನವರ ದರ್ಶನ ಪಡೆದಿದ್ದಾರೆ. ಕ್ಷೇತ್ರದ ಶಾಸಕನಾಗಿ ಅಮ್ಮನವರ ಸೇವೆ ಮಾಡಲು ನನಗೆ ಅವಕಾಶ ಕಲ್ಪಿಸಿದ ಸಾಗರ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಗಮನ ಸೆಳೆದ ಕುಸ್ತಿ ಪಂದ್ಯಾವಳಿ : ೯ ದಿನಗಳ ಮಾರಿಕಾಂಬಾ ದೇವಿ ಜಾತ್ರೆಯಲ್ಲಿ ಅತ್ಯಂತ ಪ್ರಮುಖ ಆಕರ್ಷಣೆ ಎಂದೆ ಗುರುತಿಸಿಕೊಳ್ಳುವುದು ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ, ಈ ಬಾರಿ ೧೫೦ಕ್ಕೂ ಹೆಚ್ಚು ಕುಸ್ತಿ ಪಟುಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸುಮಾರು ೧೫ಲಕ್ಷ ರೂ.ಗೂ ಅಧಿಕ ನಗದು ಬಹುಮಾನ, ಬೆಳ್ಳಿಗದೆಯನ್ನು ವಿಜೇತ ಕುಸ್ತಿಪಟುಗಳಿಗೆ ನೀಡಲಾಗಿತ್ತು. ಮೂರುದಿನಗಳ ಕಾಲ ನಡೆದ ಕುಸ್ತಿ ಪಂದ್ಯಾವಳಿಯನ್ನು ಸಾವಿರಾರು ಜನರು ವೀಕ್ಷಣೆ ಮಾಡಿದರು.

ನೀರಸ ಸಾಂಸ್ಕೃತಿಕ ಕಾರ್ಯಕ್ರಮ : ನಗರಸಭೆ ಆವರಣದ ಗಾಂಧಿ ಮೈದಾನದಲ್ಲಿ ಎಂಟು ದಿನಗಳ ಕಾಲ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಜನರನ್ನು ಅಕರ್ಷಣೆ ಮಾಡುವಲ್ಲಿ ವಿಫಲವಾಗಿದೆ. ಸ್ಥಳೀಯರು ಮತ್ತು ಆಹ್ವಾನಿತ ತಂಡಗಳಿಗೆ ಕಲಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತಾದರೂ ಕಲಾಸಕ್ತರು ಹೆಚ್ಚು ಪಾಲ್ಗೊಳ್ಳಲಿಲ್ಲ. ಸಮಿತಿಯು ಅತ್ಯಂತ ಕಷ್ಟಪಟ್ಟು ಕಾರ್ಯಕ್ರಮ ಜೋಡಿಸಿತ್ತು. ಉದ್ಘಾಟನಾ ಸಮಾರಂಭದಲ್ಲಿ ಶಿವರಾಜ ಕುಮಾರ್ ಬಂದ ದಿನ ಜನ ಸೇರಿದ್ದು ಬಿಟ್ಟರೆ ಉಳಿದ ದಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳದೆ ನಿರಾಶೆ ಮೂಡಿಸಿದ್ದು ಕಂಡು ಬಂದಿತು.
ಅಚ್ಚುಕಟ್ಟು ವ್ಯವಸ್ಥೆ : ಸಮಿತಿಯು ಜಾತ್ರೆಯನ್ನು ಅಚ್ಚುಕಟ್ಟಾಗಿ ನಡೆಸಲು ಸಕಲ ವ್ಯವಸ್ಥೆ ಮಾಡಿಕೊಂಡು ಯಶಸ್ವಿಯಾಗಿದೆ. ಸಮಿತಿ ಸದಸ್ಯರಿಗೆ ಪೂಜಾ ಪಾಸ್, ವಿಐಪಿ, ವಿವಿಐಪಿಗಳಿಗೆ ಪಾಸ್ ನೀಡಿ ಬೆಳಿಗ್ಗೆ ೯-೩೦ರ ನಂತರ ದರ್ಶನಕ್ಕೆ ಅವಕಾಶ ಕಲ್ಪಿಸಿತ್ತು. ಜೊತೆಗೆ ಪ್ರಸಾದಕ್ಕಾಗಿ ಪ್ರತ್ಯೇಕ ಕೌಂಟರ್ ತೆರೆದಿತ್ತು. ದೇವಿಯ ಎದುರು ತುಲಾಭಾರಕ್ಕೆ ವ್ಯವಸ್ತೆ ಕಲ್ಪಿಸಿತ್ತು. ದೇವಿಯ ದರ್ಶನಕ್ಕೆ ಬರುವ ವಿವಿಐಪಿಗಳಿಗೂ ತೊಂದರೆ ಆಗದಂತೆ ಗಮನ ಹರಿಸಿತ್ತು. ಜಾತ್ರೆಯಲ್ಲಿ ವಿಶೇಷ ಗಮನ ಸೆಳೆದದ್ದು ಸಮಿತಿ ವತಿಯಿಂದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಅನ್ನ ಸಂತರ್ಪಣೆ. ಪ್ರತಿದಿನ ೧೦ಸಾವಿರಕ್ಕೂ ಹೆಚ್ಚು ಜನರು ಊಟ ಮಾಡಿದ್ದಾರೆ. ಪ್ರತಿದಿನ ಹಬ್ಬದ ಊಟದ ಮಾದರಿಯಲ್ಲಿ ಊಟ ನೀಡಿ ಪ್ರಶಂಸೆ ಗಳಿಸಿದೆ.
ಶಾಸಕರಿಗೆ ಮೆಚ್ಚುಗೆ : ಜಾತ್ರೆ ಅರಂಭವಾಗುವುದಕ್ಕಿಂತ ಮೊದಲಿನಿಂದಲೂ ಶಾಸಕರಾಗಿ, ಸಮಿತಿ ಗೌರವಾಧ್ಯಕ್ಷರಾಗಿ ಗೋಪಾಲಕೃಷ್ಣ ಬೇಳೂರು ಅತ್ಯಂತ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಎಲ್ಲಾ ಸಮಿತಿಗಳಿಗೆ ಒಬ್ಬೊಬ್ಬ ಅಧಿಕಾರಿ ನೇಮಕ ಮಾಡಿ ಯಶಸ್ವಿ ಜಾತ್ರೆಗೆ ಮುನ್ನುಡಿ ಬರೆದಿದ್ದಾರೆ. ಜಾತ್ರೆ ಆರಂಭದ ಮೊದಲ ದಿನ ಅಮ್ಮನವರ ಎದುರು ನಿಂತು ಜನದಟ್ಟಣೆ ಆಗದಂತೆ ನೋಡಿಕೊಳ್ಳುವ ಜೊತೆಗೆ ಬುಧವಾರ ರಾತ್ರಿ ಅಮ್ಮನವರನ್ನು ವನಕ್ಕೆ ಬಿಡುವ ಸಂದರ್ಭದಲ್ಲಿ ಅಮ್ಮನವರ ಪಕ್ಕ ನಿಂತು ಮೈಕ್ ಹಿಡಿದು ಜನರು ಸರಾಗವಾಗಿ ಚಲಿಸುವಂತೆ ಸೂಚನೆ ನೀಡಿ ಜನರ ಗಮನ ಸೆಳೆದಿದ್ದಾರೆ.
ಒಟ್ಟಾರೆ ೯ ದಿನಗಳ ಸಾಗರ ಮಾರಿಕಾಂಬಾ ದೇವಿ ಜಾತ್ರೆಯು ಯಾವುದೇ ಗೊಂದಲ ಇಲ್ಲದೆ ಮುಗಿದಿದೆ. ಶಾಸಕರು, ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ಎಎಸ್ಪಿ ಡಾ. ಬೆನಕಪ್ರಸಾದ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಜಾತ್ರೆ ಯಶಸ್ಸಿನಲ್ಲಿ ಪ್ರಮುಖಪಾತ್ರ ವಹಿಸಿದರು. ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಟಾನದ ಅಧ್ಯಕ್ಷ ನಾಗೇಂದ್ರ ಕೆ.ಎನ್., ಉಪಾಧ್ಯಕ್ಷ ಸುಂದರ ಸಿಂಗ್, ಕಾರ್ಯದರ್ಶಿ ಗಿರಿಧರ ರಾವ್, ಸಹ ಕಾರ್ಯದರ್ಶಿ ಎಸ್.ವಿ.ಕೃಷ್ಣಮೂರ್ತಿ, ಕೋಶಾಧ್ಯಕ್ಷ ನಾಗೇಂದ್ರ ಕುಮಟಾ ಹಾಗೂ ಎಲ್ಲಾ ಸಮಿತಿ ಸಂಚಾಲಕರು ಜಾತ್ರೆ ಯಶಸ್ಸಿಗೆ ಸಹಕಾರ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.