ಶಿವಮೊಗ್ಗ : ತಮ್ಮ ರಾಷ್ಟ್ರೀಯ ನಾಯಕರ ಓಲೈಕೆ ಭರಾಟೆಯಲ್ಲಿ ಕಳೆದ ವಿಧಾನ ಮಂಡಲದ ಅಧಿವೇಶನದ ಸಂದರ್ಭದಲ್ಲಿ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ನ ಹಿರಿಯ ನಾಯಕರಾದ ಬಿ.ಕೆ. ಹರಿಪ್ರಸಾದ್ ಮತ್ತು ನಜೀರ್ ಅಹ್ಮದ್ ಅವರು ಅಸಂವಿಧಾನಿಕ ಪದ ಬಳಕೆ ಮಾಡುವುದರ ಮೂಲಕ ಇಡೀ ಅಧಿವೇಶನವನ್ನೇ ಆಪೋಷನ ಮಾಡಿದ್ದ ಕಾರಣಕ್ಕಾಗಿ ಅವರು ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಆಗ್ರಹಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಾಮಾನ್ಯವಾಗಿ ವಿಧಾನ ಮಂಡಲದ ಚಳಿಗಾಲದ ಅಧಿವೇಶನವನ್ನು ಫೆಬ್ರವರಿ ಮಾಹೆಯಲ್ಲಿ ಕರೆಯುವ ಸಂಪ್ರದಾಯವಿದೆ. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೇಂದ್ರದ ವಿಬಿಜಿ ರಾಮ್-ಜಿ ಕಾಯ್ದೆಯನ್ನು ವಿರೋಧಿಸಲೆಂದೇ ಸಂಪ್ರದಾಯ ಮುರಿದು ಜನವರಿ ಅಂತ್ಯದಲ್ಲಿಯೇ ಅಧಿವೇಶನವನ್ನು ಕರೆದಿದ್ದರು. ರಾಜ್ಯಪಾಲರು ಸರ್ಕಾರ ಬರೆದುಕೊಟ್ಟ ಭಾಷಣದಲ್ಲಿ ಮೊದಲನೇ ಪ್ಯಾರಾ ಮತ್ತು ಕೊನೆಯ ಪ್ಯಾರಾಗಳನ್ನು ಮಾತ್ರ ಓದಿ ತಮ್ಮ ಭಾಷಣವನ್ನು ಮುಗಿಸಿದ್ದರು. ತದನಂತರ ಸದನದಿಂದ ಹೊರನಡೆಯುವ ಸಂದರ್ಭದಲ್ಲಿ ಕಾಂಗ್ರೆಸ್ನ ಬಿ.ಕೆ. ಹರಿಪ್ರಸಾದ್, ಎಸ್. ರವಿ ಅವರು ರಾಜ್ಯಪಾಲರನ್ನು ಅಡ್ಡಗಟ್ಟಿ ಅಗೌರವ ತೋರಿಸಿದ್ದಲ್ಲದೆ ಅತ್ಯಂತ ಅಮಾನವೀಯ ರೀತಿಯಲ್ಲಿ ತಮ್ಮ ನಡವಳಿಕೆಗಳನ್ನು ಪ್ರದರ್ಶಿಸಿದ್ದು, ಸಂಪೂರ್ಣ ಸಂವಿಧಾನ ವಿರೋಧಿಯಾಗಿದೆ. ರಾಜ್ಯಪಾಲರಿಗೆ ಮತ್ತು ಸದನಕ್ಕೆ ತೋರಿದ ಅಗೌರವವಾಗಿದೆ. ಇದು ಯುವ ಪೀಳಿಗೆಗೆ ಯಾವ ರೀತಿಯಲ್ಲಿ ಕೊಂಡೊಯ್ಯಬೇಕು ಎನ್ನುವುದೇ ಪ್ರಶ್ನೆಯಾಗಿದೆ ಎಂದು ಟೀಕಿಸಿದರು.

ಸಭಾಪತಿ ಬಸವರಾಜ್ ಹೊರಟ್ಟಿ ಅವರು ಹರಿಪ್ರಸಾದ್ ಅವರ ಹಿರಿತನಕ್ಕೆ ಗೌರವಕೊಟ್ಟು ಅವರಿಗೆ ಮಾತನಾಡಲು ಎಲ್ಲಾ ಅವಕಾಶಗಳನ್ನು ನೀಡಿದ್ದರೂ ಹರಿಪ್ರಸಾದ್ ಅದಕ್ಕೆ ಯಾವುದೇ ಗೌರವ ನೀಡದೆ ಇಡೀ ಸದನವನ್ನು ಅವಮಾನಿಸಿದರು. ಅವರ ನಡವಳಿಕೆ ಬಗ್ಗೆ ಚರ್ಚೆಯಾಗಲೇ ಇಲ್ಲ. ಇದರಿಂದ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿಗಳು ನಡೆದು ಸಾರ್ವಜನಿಕರಲ್ಲಿ ಇವರ್ಯಾರೂ ಸರಿಯಿಲ್ಲ ಎಂಬ ಭಾವನೆ ಮೂಡುವಂತ್ತಾಗಿದ್ದು, ಅತ್ಯಂತ ಖೇದಕರ ಸಂಗತಿ. ಕೇವಲ ಗಲಾಟೆ ಮಾಡಬೇಕೆನ್ನುವ ಧೋರಣೆ ಅವರದ್ದಾಗಿತ್ತು ಎಂದ ಅವರು, ನಾವು ಅಧ್ಯಯನ ಮಾಡಿ ವಿವಿಧ ಕ್ಷೇತ್ರಗಳ ಅಭಿವೃದ್ಧಿ ಕುರಿತು ಕೇಳಲಾದ ಪ್ರಶ್ನೆಗಳಿಗೆ ಅಧಿವೇಶನದಲ್ಲಿ ಯಾವುದೇ ಚರ್ಚೆಯಾಗದೆ ಅಧಿವೇಶನ ಕೊನೆಗೊಂಡಿದ್ದು, ನೋವಿನ ಸಂಗತಿ ಎಂದರು.

ರಾಜ್ಯಪಾಲರು ತಮ್ಮ ಭಾಷಣ ಮುಗಿದ ಬಳಿಕ ಸದನದಿಂದ ಹೊರ ನಡೆಯುತ್ತಿರುವಾಗ ಕಾಂಗ್ರೆಸ್ ಸದಸ್ಯರಿಂದ ಗಲಾಟೆ ಆರಂಭವಾಗಿ, ರಾಷ್ಟ್ರಗೀತೆ ಹೇಳುವ ಸಂದರ್ಭ ಇದ್ದರೂ ಅದು ನಡೆಯಲಿಲ್ಲ. ಆದರೆ ಸಿದ್ದರಾಮಯ್ಯ ಮತ್ತು ಬಿ.ಕೆ. ಹರಿಪ್ರಸಾದ್ ಸೇರಿ ಸಚಿವ ಹೆಚ್.ಕೆ. ಪಾಟೀಲ್ ಅವರಿಂದ ರಾಷ್ಟ್ರಗೀತೆಗೆ ಬಿಜೆಪಿಯವರು ಅವಮಾನ ಮಾಡಿದ್ದಾರೆ ಎಂಬ ಸುಳ್ಳನ್ನೂ ಹೇಳಿಸಲಾಯಿತು ಎಂದು ಕಿಡಿಕಾರಿದರು.
ಇತ್ತೀಚೆಗೆ ಹೊನ್ನಾಳಿಯ ಗೋಪಗೊಂಡನಹಳ್ಳಿಯಲ್ಲಿ ಅಲ್ಲಿಯ ನೂತನ ಗ್ರಾ.ಪಂ. ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಗ್ರಾಮೀಣ ಅಭಿವೃದ್ಧಿ ಕುರಿತು ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು ಕೇಂದ್ರದ ವಿಬಿಜಿ ರಾಮ್-ಜಿ ಕಾಯ್ದೆಯನ್ನು ವಿರೋಧಿಸುವಂತೆ ಸಾರ್ವಜನಿಕರಿಗೆ ಕರೆಕೊಟ್ಟಿದ್ದು ಖಂಡನೀಯ. ಇದೇ ರೀತಿ ಕಾಂಗ್ರೆಸ್ನವರು ಮುಂದುವರೆದರೆ ರಾಜ್ಯದ ಎಲ್ಲಾ ಕಡೆ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳುವ ಎಚ್ಚರಿಕೆಯನ್ನು ಬಿಜೆಪಿ ಕೊಡುತ್ತಿದೆ ಎಂದರು.
ಮೆಟ್ರೋ ಟಿಕೆಟ್ ದರ ಏರಿಸಿದ್ದು ರಾಜ್ಯ ಸರ್ಕಾರ. ಇದು ಸರಿಯಲ್ಲ ಎಂದ ಅವರು, ಸಾಗರದ ಕ್ರಿಕೆಟ್ ಮೈದಾನದಲ್ಲಿ ಹೆಲಿ ಟೂರಿಸಂಗಾಗಿ ಹೆಲಿಪ್ಯಾಡ್ ಬಳಸಿದ್ದು ಕೂಡ ಸರಿಯಲ್ಲ. ಇದರಿಂದ ಕ್ರೀಡಾಂಗಣ ಹಾಳಾಗುತ್ತದೆ ಎಂದರು.