ಶಿವಮೊಗ್ಗ : ನಗರದ ನಂಜಪ್ಪ ಆಸ್ಪತ್ರೆಗೆ ತಡರಾತ್ರಿ ಲಯನ್ ಸಫಾರಿಯ ಚಿರತೆಯೊಂದನ್ನು ಎಂಆರ್ಐ ಸ್ಕ್ಯಾನಿಂಗ್ಗೆ ತಂದ ಅಪರೂಪದ ಘಟನೆ ನಡೆದಿದೆ.
ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ವನ್ಯಜೀವಿ ವಿಭಾಗದ ಡಿಎಫ್ಒ ಡಾ|| ಅಮರಾಕ್ಷರ್ ಮಾತನಾಡಿ, ಲಯನ್ ಸಫಾರಿಯಲ್ಲಿ ಭದ್ರಾ ಎನ್ನುವ ೧೪ ವರ್ಷದ ಚಿರತೆ ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಕುಂಟುತ್ತಾ ನಡೆಯುತ್ತಿತ್ತು. ಮೊನ್ನೆಯಿಂದ ಎದ್ದು ನಿಲ್ಲದ ಸ್ಥಿತಿಯಲ್ಲಿತ್ತು. ತಕ್ಷಣ ನಾವು ಅದನ್ನು ಉಳಿಸುವ ನಿಟ್ಟಿನಲ್ಲಿ ಎಂಆರ್ಐ ಸ್ಕ್ಯಾನಿಂಗ್ ಮೂಲಕ ಅದರ ಆರೋಗ್ಯದ ಮಾಹಿತಿ ತಿಳಿಯಲು ನಿನ್ನೆ ನಗರದ ನಂಜಪ್ಪ ಆಸ್ಪತ್ರೆಗೆ ಕರೆದುಕೊಂಡು ಬಂದು ಎಂಆರ್ಐ ಮಾಡಿಸಿದ್ದೇವೆ. ಈ ಸಂದರ್ಭದಲ್ಲಿ ವನ್ಯಜೀವಿ ವಿಭಾಗದ ನುರಿತ ವೈದ್ಯರು ಮತ್ತು ನಂಜಪ್ಪ ಆಸ್ಪತ್ರೆಯ ವೈದ್ಯರು ಇದ್ದು, ಪರಿಶೀಲನೆ ನಡೆಸಿ ಮುಂದಿನ ಚಿಕಿತ್ಸೆಯನ್ನು ತಿಳಿಸಿದ್ದಾರೆ. ಸಾಮಾನ್ಯವಾಗಿ ಚಿರತೆಗಳು ಕಾಡಲ್ಲಿ ೮ ರಿಂದ ೧೨ ವರ್ಷ ಬದುಕುತ್ತವೆ. ಆದರೆ ಪ್ರಾಣಿ ಸಂಗ್ರಹಾಲಯದಲ್ಲಿ ಕಾಲ ಕಾಲಕ್ಕೆ ಅದಕ್ಕೆ ಎಲ್ಲಾ ರೀತಿಯ ಚಿಕಿತ್ಸೆ ಮತ್ತು ಆಹಾರ

ದೊರೆಯುವುದರಿಂದ ೧೫ವರ್ಷದ ವರೆಗೆ ಬದುಕುತ್ತದೆ. ಈ ಚಿರತೆಗೆ ಇತ್ತೀಚೆಗೆ ಮೆಲೇಳಲು ಕಷ್ಟವಾಗುತ್ತಿತ್ತು. ಶಿವಮೊಗ್ಗದಲ್ಲಿ ಪಶು ವೈದ್ಯಕೀಯ ಕಾಲೇಜಿನಲ್ಲಿ ಎಂಆರ್ಐ ಸ್ಕ್ಯಾನಿಂಗ್ ಸೌಲಭ್ಯ ಇಲ್ಲದ ಕಾರಣ ಅನಿವಾರ್ಯವಾಗಿ ನಾವು ಇಲ್ಲಿಗೆ ಕರೆದುಕೊಂಡು ಬಂದಿದ್ದೇವೆ. ಎಂಆರ್ಐ ಸ್ಕ್ಯಾನಿಂಗ್ ಬಹುದುಬಾರಿಯಾಗಿದ್ದು, ಪಶುವೈದ್ಯಕೀಯ ಕಾಲೇಜಿನಲ್ಲಿ ಆ ಸೌಲಭ್ಯ ಇರಲಿಲ್ಲ. ಸಾಮಾನ್ಯವಾಗಿ ಮನುಷ್ಯರ ಮತ್ತು ಪ್ರಾಣಿಗಳ ದೇಹರಚನೆ ಒಂದೇ ರೀತಿ ಇದ್ದು ಪಶುವೈದ್ಯರ ನೆರವಿನೊಂದಿಗೆ ಅವರ ಸಮ್ಮುಖದಲ್ಲೇ ಈ ಸ್ಕ್ಯಾನಿಂಗ್ನ್ನು ಮಾಡಲಾಗಿದೆ ಎಂದರು.
ಪ್ರಸ್ತುತ ಲಯನ್ ಸಫಾರಿಯಲ್ಲಿ ೬ ಗಂಡು, ೫ ಹೆಣ್ಣು ಚಿರತೆಗಳಿವೆ. ಸ್ಕ್ಯಾನಿಂಗ್ ರಿಪೋರ್ಟ್ ಆಧರಿಸಿ ಉತ್ತಮ ಚಿಕಿತ್ಸೆ ನೀಡಲಾಗುವುದು ಎಂದರು. ಖಾಸಗೀ ಆಸ್ಪತ್ರೆಯಲ್ಲಿ ಚಿರತೆಯೊಂದು ಚಿಕಿತ್ಸೆಗೆ ಬಂದಿದೆ ಎಂಬ ಸುದ್ದಿ ಹರಡಿ ವೈರಲ್ ಆಗಿದ್ದರಿಂದ ಎಲ್ಲರಲ್ಲೂ ಈ ಬಗ್ಗೆ ಆಸಕ್ತಿ ಮೂಡಿತ್ತು. ಅಧಿಕಾರಿಗಳು ಕೂಡ ಇದು ನನ್ನ ಮೊದಲ ಅನುಭವ ಎಂದು ಹೇಳಿದ್ದಾರೆ. ಶಿವಮೊಗ್ಗ ಪಶುವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇನ್ನು ಮುಂದಾದರೂ ಪ್ರಾಣಿಗಳಿಗೆ ಅಗತ್ಯ ಎಲ್ಲಾ ಸೌಲಭ್ಯಗಳು ಸಿಗಲಿ ಎಂದು ನಾಗರೀಕರು ತಮ್ಮ ಸಲಹೆ ನೀಡಿದ್ದಾರೆ.