ಶಿವಮೊಗ್ಗ : ವಚನ ಕೇವಲ ಸಾಹಿತ್ಯವಲ್ಲ, ಸಾಹಿತ್ಯವನ್ನು ಮೀರಿದ ಅನುಭಾವ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಅವರು ಇಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪಾಲಿಕೆ ಘಟಕ ಹಾಗೂ ಮಾಧ್ಯಮ ಘಟಕದ ಆಶ್ರಯದಲ್ಲಿ ಬಸವ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ವಚನ ಗಾಯನ ಸ್ಪರ್ಧೆಯನ್ನು ವಚನ ಗ್ರಂಥಿಕೆಗೆ ಪುಷ್ಪಗಳ ಅರ್ಪಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ವಚನಗಳು ನಮ್ಮನ್ನು ಜೀವನದುದ್ದಕ್ಕೂ ಕೈ ಹಿಡಿದು ನಡೆಸುವ ಶಕ್ತಿ ಹೊಂದಿವೆ. ವಚನಗಳು ಸರ್ವ ಕಾಲಕ್ಕೂ ಅಗತ್ಯವಾದವು, ಜೀವನಕ್ಕೆ ಸ್ಪೂರ್ತಿ. ಅವುಗಳಿಗೆ ಎಂದಿಗೂ ನಾಶವಿಲ್ಲ ಎಂದರು.

ಶಿವ ಶರಣರ ವಚನಗಳನ್ನು ಯುವ ಪೀಳಿಗೆಗೆ ಕಲಿಸಬೇಕು, ಇದರಿಂದ ಅವರಲ್ಲಿ ಆತ್ಮ ವಿಶ್ವಾಸ ಹೆಚ್ಚುವುದು, ಅಲ್ಲದೆ ವಿಭೂತಿ ಧರಿಸುವುದು ಸೇರಿದಂತೆ ನಮ್ಮ ಸಂಪ್ರದಾಯ ವನ್ನು ಮೈಗೂಡಿಸಿಕೊಳ್ಳುವಂತೆ ಮಕ್ಕಳಿಗೆ ಪ್ರೇರೇಪಣೆ ಮಾಡುವಂತೆ ಕರೆ ನೀಡಿದರು. ಶೀಘ್ರದಲ್ಲೇ ವಿದ್ಯಾನಗರದಲ್ಲಿ ಎಫ್.ಎಂ. ರೇಡಿಯೋ ಕಾರ್ಯಾರಂಭ ಮಾಡಲಿದ್ದು, ಇದರಲ್ಲಿ ಪ್ರತಿದಿನ ವಚನ ಗಾಯನ, ಶರಣರ ತತ್ವಗಳು ಹಾಗೂ ಧಾರ್ಮಿಕ ಚಿಂತನೆಗೆ ಅವಕಾಶ ನೀಡುವ ಮೂಲಕ ಯುವ ಪೀಳಿಗೆಯು ಜೀವನದ ಪ್ರತಿ ಹಂತವನ್ನು ಕೀಳರಿಮೆಯಿಲ್ಲದೇ ಆತ್ಮ ವಿಶ್ವಾಸದಿಂದ ಎದುರಿಸಲು ಪೂರಕ ವಾತವರಣ ರೂಪಿಸಲು ಪ್ರಯತ್ನಿಸಲಾಗುವುದು ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ರುದ್ರೇಗೌಡ ಮಾತನಾಡಿ, ವಚನ ಸಹಿತ್ಯ ಅತ್ಯಂತ ಶ್ರೀಮಂತವಾದುದು, ಯುವ ಪೀಳಿಗೆ ಇದನ್ನು ಅರ್ಥ ಮಾಡಿಕೊಂಡರೆ ಸಂಸಾರ ಹಾಗೂ ಸಮಾಜದಲ್ಲಿ ಶಾಂತಿ ಇರುವುದಾಗಿ ಹೇಳಿದರು. ಮಹಾಸಭಾ ಪಾಲಿಕೆ ಘಟಕ ಆಧ್ಯಕ್ಷ ರಾಜಶೇಖರ ಅಧ್ಯಕ್ಷತೆ ವಹಿಸಿದ್ದರು. ಮಹಾಸಭಾ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್, ಪ್ರಧಾನ ಕಾರ್ಯದರ್ಶಿ ಬಳ್ಳಕೆರೆ ಸಂತೋಷ್, ಪಾಲಿಕೆ ವಿಪಕ್ಷ ನಾಯಕ ಹೆಚ್.ಸಿ. ಯೋಗೀಶ್, ಗಾಯಕ ಹುಮಾಯೂನ್ ಹರ್ಲಾಪುರ್, ಮಹಾಸಭಾ ಪಾಲಿಕೆ ಘಟಕ ಉಪಾಧ್ಯಕ್ಷ ಅರುಣ್ ವಿ.ಟಿ, ಪ್ರಧಾನ ಕಾರ್ಯದರ್ಶಿ ಕತ್ತಿಗೆ ಉಮೇಶ್, ಮಾಧ್ಯಮ ಘಟಕ ಅಧ್ಯಕ್ಷ ಕೆ.ಆರ್. ಸೋಮನಾಥ್, ಶಿವಮೊಗ್ಗ ಯೋಗರಾಜ್, ಸತೀಶ್ ಮಂಚಿಮನೆ, ಯುವರಾಜ್, ಉಪಸ್ಥಿತರಿದ್ದರು.
ಉಮಾ ಪಾಟೀಲ್ ಸ್ವಾಗತಿಸಿದರು, ವೇದಾವತಿ ವಂದಿಸಿದರು, ಚೈತ್ರ ಸಜ್ಜನ್ ಕಾರ್ಯಕ್ರಮ ನಿರೂಪಿಸಿದರು. ೨೫ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.