ಶಿವಮೊಗ್ಗ : ಅನವರತ ಫೌಂಡೇಶನ್ ವತಿಯಿಂದ ನರ್ತನ ಸಂಭ್ರಮ ಎಂಬ ವಿಶೇಷ ಕಾರ್ಯಕ್ರಮವನ್ನು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಜ.೨೧ರ ಸಂಜೆ ೬ ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಗೌರವಾಧ್ಯಕ್ಷ ಹಾಗೂ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿನ ಯುವ ಸಮಾನ ಮನಸ್ಕರ ತಂಡವಾದ ‘ಅನವರತ ಫೌಂಡೇಶನ್’ ವತಿಯಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ರಾಷ್ಟ್ರಗಾಯನ ‘ವಂದೇ ಮಾತರಂ’ಗೆ ೧೫೦ನೇ ವರ್ಷದ ಸಂಭ್ರಮ ಹಾಗೂ ನಮ್ಮ ಹೆಮ್ಮೆಯ ನಾಡಗೀತೆಗೆ ೧೦೦ ವರ್ಷಗಳು ಸಂದಿರುವ ಸುಸಂದರ್ಭದಲ್ಲಿ ಈ ಐತಿಹಾಸಿಕ ಘಟ್ಟಗಳನ್ನು ಸಂಭ್ರಮದಿಂದ ಆಚರಿಸಲು ನಗರದ ಹೆಸರಾಂತ ನೃತ್ಯ ತಂಡಗಳಿಂದ ‘ನರ್ತನ ಸಂಭ್ರಮ’ ಎಂಬ ವೈಭವದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ನಗರದ ಖ್ಯಾತ ನೃತ್ಯ ಗುರುಗಳ ಮಾರ್ಗದರ್ಶನದಲ್ಲಿ ಬೆಳಗಿದ ಪ್ರತಿಭೆಗಳು ಒಂದೇ ವೇದಿಕೆಯಲ್ಲಿ ತಮ್ಮ ಕಲಾ ಚಾತುರ್ಯವನ್ನು ಪ್ರದರ್ಶಿಸಲಿದ್ದಾರೆ. ಇದರಲ್ಲಿ ಕಲಾರ್ಪಣ, ನಟನಂ ಬಾಲ ನಾಟ್ಯ ಕೇಂದ್ರ, ಪುಷ್ಪ ಪರ್ಫಾಮಿಂಗ್ ಆರ್ಟ್ಸ್, ಪೆರುಮಾಳ್ ನೃತ್ಯ ಕಲಾ ಕೇಂದ್ರ, ಮನು ಕಲಾ ಕೇಂದ್ರ, ಮಯೂರಿ ನೃತ್ಯ ಕಲಾ ಕೇಂದ್ರ, ಮಲ್ನಾಡ್ ಜನಪದ ಕಲಾತಂಡ, ಶ್ರೀ ನಟರಾಜ ನೃತ್ಯ ಕಲಾನಿಕೇತನ, ಸಹಚೇತನ ನಾಟ್ಯಾಲಯ ತಂಡಗಳು ಭಾಗವಹಿಸಲಿವೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡ ಚಿತ್ರರಂಗದ ಖ್ಯಾತ ನಟಿ ತಾರಾ ನೆರವೇರಿಸಲಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ್ ಹಾಗೂ ಬೆಳ್ಳಿ ಮಂಡಲ ಹಾಗೂ ಸಿನಿಮೊಗ ತಂಡದ ಸಂಚಾಲಕ ವೈದ್ಯನಾಥ್ ಹೆಚ್.ಯು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದ ಘನತೆಯನ್ನು ಹೆಚ್ಚಿಸುತ್ತಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಫೌಂಡೇಶನ್ನ ಗೌರವಾಧ್ಯಕ್ಷ ಹಾಗೂ ಶಾಸಕ ಎಸ್.ಎನ್.ಚನ್ನಬಸಪ್ಪ ವಹಿಸಲಿದ್ದಾರೆ ಎಂದು ಹೇಳಿದರು.

ಈ ಮೊದಲು ಜ.೨೧ರ ಬೆಳಿಗ್ಗೆ ೧೦ ಗಂಟೆಗೆ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ಈ ಕೆಳಗಿನ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ನಮ್ಮ ಮಣ್ಣಿನ ಸೊಗಡನ್ನು ಬಿಂಬಿಸುವ ಜನಪದ ಕಲೆಯ ಆದ್ಯತೆಗಾಗಿ, “ಜಾನಪದ ನೃತ್ಯ ಮತ್ತು ಗಾಯನ”, ಅಭಿನಯ ಮತ್ತು ಕಲೆಯ ಪ್ರಕಟೀಕರಣಕ್ಕಾಗಿ: ಏಕಪಾತ್ರಾಭಿನಯ ಹಾಗೂ ಚಿತ್ರಕಲಾ ಸ್ಪರ್ಧೆಗಳು ನಡೆಯಲಿವೆ ಎಂದರು.
ಆಧುನಿಕ ಸಂವಹನ ಮತ್ತು ಇಂದಿನ ಪೀಳಿಗೆಯ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು : ’ಛಾಯಾಗ್ರಹಣ’ ಮತ್ತು ’ರೀಲ್ಸ್’ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಗಳಲ್ಲಿನ ಆಸಕ್ತರು ಭಾಗವಹಿಸಲು ಆನ್ಲೈನ್ ಮೂಲಕ ನೊಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ತಂಡವು ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಿವಮೊಗ್ಗದ ಖ್ಯಾತ ಸಾಹಿತಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಾ. ಗಜಾನನ ಶರ್ಮ ನೆರವೇರಿಸಲಿದ್ದು, ಅವರೊಂದಿಗೆ ಸಾಮಾಜಿಕ ಕಾರ್ಯಕರ್ತರು, ಸಹ್ಯಾದ್ರಿ ವಾಣಿಜ್ಯ ಕಾಲೇಜ್ ಉಪನ್ಯಾಸಕ ಗಿರೀಶ್ ಕಾರಂತ್ ಉಪಸ್ಥಿತರಿರುತ್ತಾರೆ. ಅಧ್ಯಕ್ಷತೆಯನ್ನು ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ವಹಿಸಲಿದ್ದಾರೆ ಎಂದರು.
ನೃತ್ಯ ಗುರು ಗೀತಾ ದಾತರ್ ಮಾತನಾಡಿ, ಗೆಜ್ಜೆ ನಾದದ ಲಯಕ್ಕೆ ಸಾಕ್ಷಿಯಾಗಲಿರುವ ಈ ಅಪೂರ್ವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಶಿವಮೊಗ್ಗದ ಕಲಾಭಿಮಾನಿಗಳು ಹಾಗೂ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ‘ಅನವರತ ಫೌಂಡೇಶನ್’ ವಿನಂತಿಸಿದೆ. ಇದೊಂದು ಹೊಸ ಪ್ರಯೋಗವಾಗಿದೆ. ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರ ಹಾಗೂ ಜಿಲ್ಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎನ್.ಜೆ.ನಾಗರಾಜ್, ಜ್ಞಾನೇಶ್ವರ್, ದೀನದಯಾಳ್, ಕೇಶವಕುಮಾರ್ ಪಿಳ್ಳೈ, ಪೃಥ್ವಿಗೌಡ, ನವೀನ್, ಸುನೀಲ್, ಸಿಂಧು, ಸುಪ್ರೀಯಾ, ಶ್ವೇತಾ, ಉದಯಕುಮಾರಿ ಮೊದಲಾದವರಿದ್ದರು.