ಇಂದಿನ ತುಂಗಾತರಂಗ ಜನರ ಮುಖವಾಣಿ ವರದಿ ಗಮನಿಸಿ
ಶಿವಮೊಗ್ಗ, ಮೇ 29:
ನಿಮ್ಮ ಶಿವಮೊಗ್ಗ ಜಿಲ್ಲೆಯ ಜನದ್ವನಿಯಾಗಿ ಸಾರ್ವಜನಿಕರ ಅಳಲಿಗೆ ಪೂರಕವಾದ ವಿಷಯಗಳನ್ನು ಬಿಂಬಿಸುತ್ತಿರುವ ತುಂಗಾತರಂಗ ದಿನಪತ್ರಿಕೆಯ ಇಂದಿನ ಜನಮುಖಿ ವರದಿಗೆ ತಕ್ಷಣ ಪ್ರತಿಕ್ರಿಯೆ ದೊರೆತಿದೆ.
ಶಿವಮೊಗ್ಗ ಜಿಲ್ಲೆ ಅದರಲ್ಲೂ ನಗರದಲ್ಲಿ ಹಿಂದಿನ ಜನತಾ ಕರ್ಪ್ಯೂ ಹಾಗೂ ಇಂದಿನ ಲಾಕ್ ಡೌನ್ ಸಂಪೂರ್ಣ “ಠುಸ್ ಪಟಾಕಿ” ಎಂಬ ವರದಿ ನೀಡಿದ್ದ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಡಳಿತದೊಂದಿಗೆ ಇಂದು ಸಂಜೆ ಸಭೆ ಸೇರಿ ಬರುವ ಸೋಮವಾರದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಸಂಪೂರ್ಣ ಕಠಿಣ ಲಾಕ್ ಡೌನ್ ಘೋಷಿಸಲಾಗಿದೆ.
ಜಿಲ್ಲೆಯಲ್ಲಿ ಮೇ 31ರಿಂದ ಒಂದು ವಾರ ಕಠಿಣ ಲಾಕ್‍ಡೌನ್ ಜಾರಿ: ಸಚಿವ ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ ಜಿಲ್ಲೆಯಾದ್ಯಂತ ಮೇ 31ರಿಂದ ಜೂನ್ 7ರವರೆಗೆ ಕಠಿಣ ಲಾಕ್‍ಡೌನ್ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.
ಅವರು ಇಂದು ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಪ್ರಮಾಣ ನಿರಂತರವಾಗಿ ಕಡಿಮೆಯಾಗುತ್ತಿದ್ದರೂ, ನಿರೀಕ್ಷಿತ ವೇಗದಲ್ಲಿ ಕಡಿಮೆಯಾಗುತ್ತಿಲ್ಲ. ಲಾಕ್‍ಡೌನ್ ಜಾರಿಯಲ್ಲಿದ್ದರೂ, ಜನರು ಅನಗತ್ಯವಾಗಿ ಓಡಾಡುತ್ತಿರುವ ಪ್ರಕರಣಗಳು ಕಂಡು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಸೋಮವಾರ 10ಗಂಟೆಯಿಂದ ಒಂದು ವಾರ ಕಾಲ ಕಟ್ಟುನಿಟ್ಟಿನಿಂದ ಲಾಕ್‍ಡೌನ್ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದರು.
ಈ ಅವಧಿಯಲ್ಲಿ ಔಷಧಿ ಅಂಗಡಿಗಳು, ನೆರೆಹೊರೆಯಲ್ಲಿರುವ ತರಕಾರಿ, ಹಾಲು, ದಿನಸಿ ಅಂಗಡಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಸಗಟು ದಿನಸಿ ಮಳಿಗೆಗಳು, ಎಪಿಎಂಸಿಯಲ್ಲಿ ಮಾರಾಟಕ್ಕೆ ಅವಕಾಶ ಇರುವುದಿಲ್ಲ. ಆದರೆ ಚಿಲ್ಲರೆ ಅಂಗಡಿಗಳಿಗೆ ಅವರು ಸರಕುಗಳನ್ನು ನೇರವಾಗಿ ಪೂರೈಕೆ ಮಾಡಬಹುದಾಗಿದೆ. ತಳ್ಳುಗಾಡಿಗಳಲ್ಲಿ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ನಿಗದಿಪಡಿಸಲಾಗಿರುವ ಪ್ರದೇಶ ವ್ಯಾಪ್ತಿಯಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಅವಶ್ಯಕ ಸೇವೆಗಳಿಗೆ ಗುರುತಿಸಲಾಗಿರುವ ಸರ್ಕಾರಿ ಕಚೇರಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕಚೇರಿಗಳು ಇರುವುದಿಲ್ಲ. ಕನಿಷ್ಟ ಮಟ್ಟದಲ್ಲಿ ಬ್ಯಾಂಕ್ ಸೇವೆ ಇರುವುದು ಎಂದು ಹೇಳಿದರು.
ಹೊಟೇಲ್‍ನಲ್ಲಿ ಪಾರ್ಸೆಲ್ ಸೇವೆಗೆ ಅವಕಾಶವಿದೆ. ಮಾರ್ಗಸೂಚಿ ಪ್ರಕಾರ ಮದುವೆಗೆ ಅವಕಾಶವಿದೆ. ಆದರೆ ಮದುವೆಗೆ ಸಂಬಂಧಿಸಿದ ಸಮಾರಂಭಗಳು, ಗೃಹಪ್ರವೇಶ ಇತ್ಯಾದಿಗಳಿಗೆ ಅನುಮತಿ ಇರುವುದಿಲ್ಲ. ಇದನ್ನು ಉಲ್ಲಂಘಿಸಿ ಸಮಾರಂಭಗಳನ್ನು ಆಯೋಜಿಸುವವರ ವಿರುದ್ಞ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈಗಾಗಲೇ ಜಿಲ್ಲಾಡಳಿತದಿಂದ ಅನುಮತಿ ನೀಡಲಾಗಿರುವ ಅಗತ್ಯ ಕೈಗಾರಿಕಾ ಚಟುವಟಿಕೆಗಳಿಗೆ ಮಾತ್ರ ಅವಕಾಶವಿರುವುದು. ಅಗತ್ಯ ಸರ್ಕಾರಿ ಕಾಮಗಾರಿಗಳು ಹಾಗೂ ಮಾನ್ಸೂನ್ ಪೂರ್ವ ಕಾಮಗಾರಿಗಳನ್ನು ಬಿಟ್ಟು ಬೇರೆ ಎಲ್ಲಾ ನಿರ್ಮಾಣ ಕಾಮಗಾರಿಗಳಿಗೆ ಅನುಮತಿ ಇರುವುದಿಲ್ಲ. ಲಾಕ್‍ಡೌನ್ ಅವಧಿಯಲ್ಲಿ ಅನಗತ್ಯವಾಗಿ ರಸ್ತೆಗೆ ಬರುವ ವಾಹನಗಳನ್ನು ಜಪ್ತಿ ಮಾಡುವುದು ಮಾತ್ರವಲ್ಲದೆ, ಸವಾರರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಮಾತನಾಡಿ, ಕಳೆದ 7ದಿನಗಳಿಂದ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿವೆ. ನಿರೀಕ್ಷಿತ ಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳನ್ನು ತಗ್ಗಿಸುವ ಉದ್ದೇಶದಿಂದ ಒಂದು ವಾರ ಕಾಲ ಕಠಿಣ ಲಾಕ್‍ಡೌನ್ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಒಟ್ಟು 26 ಸಕ್ರಿಯ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ನೀರನ್ನು ಸರಿಯಾಗಿ ಕುದಿಸಿ ಆರಿಸಿ ಕುಡಿಯುವುದು ಸೇರಿದಂತೆ ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ಜನರು ಅನುಸರಿಸಬೇಕು ಎಂದು ಸಚಿವರು ತಿಳಿಸಿದರು.
ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮೀ ಪ್ರಸಾದ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಒಟ್ಟಾರೆ, ಶಿವಮೊಗ್ಗ ಜಿಲ್ಲೆ ಅದರಲ್ಲೂ ನಗರದ ಪುಕ್ಸಟ್ಟೆ ತಿರುಗಾಟ ಶೂರರಿಗೆ ಬೆಂಕಿಬಿದ್ದಿದೆ. ಪದೇ ಪದೇ ಪೊಲೀಸರ ಬಳಿ ಸುಳ್ಳು ಹೇಳುತ್ತಾ ತಿರುಗಾಡುತ್ತಿದ್ದವರಿಗೆ ಹೆಡೆಮುರಿ ಕಟ್ಟುವ ಕಾನೂನು ಜಾರಿಯಾಗಬೇಕೆಂಬ ಜನದ್ವನಿಯನ್ನು ಇಂದು ತುಂಗಾತರಂಗ ಬಿಂಬಿಸಿತ್ತು.
ಶಿವಮೊಗ್ಗ ಮಹಾನಗರ ಪಾಲಿಕೆ ಪ್ರಕಟಣೆ
- ಕೊರೋನಾ ಮಹಾಮಾರಿ ರಾಜ್ಯಾದ್ಯಂತ ವ್ಯಾಪಿಸುತ್ತಿದೆ.
ಕೋವಿಡ್ ಮಾರ್ಗಸೂಚಿ ತಪ್ಪದೇ ಪಾಲಿಸಿ, ಆರೋಗ್ಯದಿಂದಿರಿ. ರಾಜ್ಯ ಸರ್ಕಾರದಿಂದ ಮೇ. 10 ರಿಂದ ಮೇ.24 ರ ಬೆಳಿಗ್ಗೆ 6 ರವರೆಗೆ ಲಾಕ್ ಡೌನ್ ವಿಧಿಸಲಾಗಿರುತ್ತದೆ.
” ಯಾವುದೇ ಮದುವೆಗೆ ಗರಿಷ್ಟ 40 ಜನರಿಗೆ ಮಾತ್ರ ಅವಕಾಶ. ಪಾಸ್ ಕಡ್ಡಾಯ.
” ನಿಧನ-ಶವಸಂಸ್ಕಾರ ಐವರಿಗೆ ಮಾತ್ರ ಅವಕಾಶ. - ಪ್ರತಿದಿನ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ, ಮನೆಗೆ ಬೇಕಾದ ಅವಶ್ಯಕ ಸಾಮಾಗ್ರಿಗಳು, ಆಹಾರ, ದಿನಸಿ, ಹಣ್ಣು, ತರಕಾರಿ, ಮೀನು, ಮಾಂಸ ಹಾಗೂ ಮದ್ಯ , ಡೈರಿ ಮತ್ತು ಹಾಲಿನ ಬೂತ್ ಗಳು ಹೋಟೆಲ್ ಗಳಲ್ಲಿ ಪಾರ್ಸೆಲ್ ವ್ಯವಸ್ಥೆ ಕಾರ್ಯ ನಿರ್ವಹಿಸಲಿವೆ.
ಶಿವಮೊಗ್ಗ ನಗರದ ಆರು ಭಾಗದಲ್ಲಿ ಮಾತ್ರ ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. - ಬ್ಯಾಂಕ್, ಎಟಿಎಂ ತೆರೆದಿರುತ್ತದೆ.
- ಅಗತ್ಯ ವೈದ್ಯಕೀಯ ಸೇವೆಗಳು ದಿನದ 24 ಗಂಟೆಗಳು ಕಾರ್ಯನಿರ್ವಹಿಸಲಿವೆ.
*ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ.
*ನೀವು ಆರೋಗ್ಯವಾಗಿರಿ – ಸಮಾಜವನ್ನು ಆರೋಗ್ಯವಾಗಿಡಿ. - ನಿಯಮ ಪಾಲನೆ ಮಾಡಿ – ದಂಡ ಪಾವತಿಯಿಂದ ದೂರವಿರಿ.