ಶಿವಮೊಗ್ಗ: ಸಾಮಾಜಿಕ ಸ್ವಾಸ್ಥ್ಯದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ದ್ವೇಷ ಭಾಷಣ ತಡೆ ಮಸೂದೆ ಸ್ವಾಗತಾರ್ಹವಾಗಿದ್ದು, ಬಿಜೆಪಿಯವರನ್ನು ಬಿಟ್ಟರೆ ರಾಜ್ಯದ ಎಲ್ಲಾ ಜನರು ಇದನ್ನು ಮೌನವಾಗಿ ಒಪ್ಪಿಕೊಂಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಾಜದಲ್ಲಿ ದ್ವೇಷ ಬಿತ್ತುವ, ಉದ್ರೇಕಗೊಳಿಸುವ ಭಾಷಣಗಳೇ ಇಂದು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶಾಂತಿ, ಸಹನೆ ಕಾಪಾಡುವ ಹಿನ್ನೆಲೆಯಲ್ಲಿ ಈ ಕಾಯ್ದೆಯನ್ನು ಜಾರಿಗೆ ತಂದಿದೆ. ಆದರೆ, ಬಿಜೆಪಿಯವರಿಗೆ ಮಾತ್ರ ಇದರಿಂದ ದೊಡ್ಡ ಆತಂಕವಾಗಿದೆ. ಅದರಲ್ಲೂ ಕೆಲವು ಬಿಜೆಪಿ ನಾಯಕರುಗಳಿಗೆ ಇದು ನುಂಗಲಾರದ ತುತ್ತಾಗಿದೆ ಎಂದು ಟೀಕಿಸಿದರು.
ಬಿಜೆಪಿಯವರಿಗೆ ದ್ವೇಷ ಭಾಷಣ ಮಾಡುವುದೇ ನಮ್ಮ ಹಕ್ಕು ಎಂದು ಭಾವಿಸಿಕೊಂಡಿದ್ದರು. ನಮ್ಮ ಮೂಲಭೂತ ಹಕ್ಕಿಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಈ ಕಾಯ್ದೆಯನ್ನು ಅವರು ವಿರೋಧಿಸುತ್ತಿದ್ದಾರೆ. ಇದು ಖಂಡನಾರ್ಹವಾದುದು. ಮಾತನಾಡುವುದು ಹೇಗೆ ಮೂಲಭೂತ ಹಕ್ಕೋ ಹಾಗೆಯೇ ಮಾತನಾಡದೇ ಇರುವುದೂ ಸಹ ಒಂದು ಹಕ್ಕಾಗಿದೆ. ಈಗ ಬಿಜೆಪಿಯವರಿಗೆ ನಾವು ದ್ವೇಷ ಭಾಷಣ ಮಾಡುವ ಹಾಗಿಲ್ಲವಲ್ಲ ಎಂಬ ಆತಂಕ ಶುರುವಾಗಿದ್ದು, ತಳಮಳಗೊಳ್ಳುತ್ತಿದ್ದಾರೆ ಎಂದರು.

ಬಿಜೆಪಿಯವರಿಗೆ ಅದರಲ್ಲೂ ಕೆಲವು ಬಿಜೆಪಿ ನಾಯಕರಿಗೆ ಭಾಷೆಯ ಬೌದ್ಧಿಕ ಬಡತನವಿದೆ. ಪದಗಳ ಮೇಲೆ ಹಿಡಿತವೇ ಇಲ್ಲ. ಈಗ ಅವರು ಯಾರಾದರೂ ಕನ್ನಡ ಶಿಕ್ಷಕರ ಹತ್ತಿರ ನಾವು ಪದ ಉಪಯೋಗಿಸಬೇಕು ಎಂಬುದನ್ನು ಕಲಿಯಬೇಕಾಗಿದೆ. ಹರಕು ಬಾಯಿಗಳಿಗೆ ಹೊಲಿಗೆ ಹಾಕಬೇಕು ಎಂದು ಹಿಂದೊಮ್ಮೆ ನಾನು ಹೇಳಿದ್ದೆ. ಲಂಗು ಲಗಾಮು ಇಲ್ಲದೇ ಮಾತನಾಡುವವರಿಗೆ ಈಗ ಬೀಗ ಬಿದ್ದಿದೆ. ಸಿದ್ಧರಾಮಯ್ಯನವರ ರುಂಡ ಚೆಂಡಾಡುವೆ, ನಮ್ಮ ಕೈಗೆ ಕತ್ತಿ ಕೊಡಿ, ರಕ್ತದಲ್ಲಿ ಓಕುಳಿ ಆಡುತ್ತೇವೆ ಎಂದೆಲ್ಲಾ ಅರಚುವ ಕೂಗಾಡುವ ಬಾಯಿಗಳಿಗೆ ಈಗ ಈ ಕಾಯ್ದೆಯಿಂದ ಬೀಗ ಬಿದ್ದಂತಾಗಿದೆ ಎಂದರು.
ಬಿಜೆಪಿಯವರಿಗೆ ಮಾತ್ರ ಈ ಕಾಯ್ದೆಯಿಂದ ಏಕೆ ತಳಮಳವೋ ಗೊತ್ತಿಲ್ಲ. ಆದರೆ, ಈ ಕಾಯ್ದೆ ಎಲ್ಲರಿಗೂ ಅನ್ವಯಿಸುತ್ತದೆ. ದ್ವೇಷ ಭಾಷಣ ಮಾಡುವ ಕಾಂಗ್ರೆಸ್, ದಳ, ಬಿಜೆಪಿ ಸೇರಿದಂತೆ ರಾಜಕೀಯ ನಾಯಕರು, ಯಾವುದೇ ಧರ್ಮದವರು ಮತ್ತೊಂದು ಧರ್ಮದ ವಿರುದ್ಧ ದ್ವೇಷ ಕಾರಿದರೆ ಅವರಿಗೂ ಕೂಡ ಈ ಕಾಯ್ದೆ ಅನ್ವಯವಾಗುತ್ತದೆ. ಹಾಗಾಗಿ ಈ ಕಾಯ್ದೆ ಸಾರ್ವತ್ರಿಕವಾದುದು. ಇದನ್ನು ವಿರೋಧಿಸುವ ಬಿಜೆಪಿಯವರಿಗೆ ಏಕೆ ಸಂಕಟವೋ ಗೊತ್ತಿಲ್ಲ. ಇನ್ನಾದರೂ ಧರ್ಮ ನಿಂದನೆ, ಜಾತಿ ನಿಂದನೆ ಮಾತನಾಡುವವರು ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದರು.

ಶಿವಮೊಗ್ಗಕ್ಕೆ ಬಂದರೆ ಈ ಕಾಯ್ದೆಯಿಂದ ಕೆ.ಎಸ್. ಈಶ್ವರಪ್ಪ, ಎಸ್.ಎನ್. ಚನ್ನಬಸಪ್ಪ, ಆರಗ ಜ್ಞಾನೇಂದ್ರ ಅಂತಹವರಿಗೆ ಇದು ಬಹಳ ಕಷ್ಟವಾಗುತ್ತದೆ. ಈ ಕಾಯ್ದೆಯನ್ನು ಸಹಿಸುವ ಸಹಿಷ್ಣುತೆ ಕೂಡ ಅವರಿಗಿಲ್ಲ. ಆರಗ ಜ್ಞಾನೇಂದ್ರ ಅಂತಹವರು ಪೊಲೀಸ್ ಇಲಾಖೆಯನ್ನೇ ನಾಯಿ ಎಂದು ಕರೆದವರು. ಈಗ ಈ ಕಾಯ್ದೆಯಿಂದ ಅವರಿಗೆ ತಳಮಳ ಉಂಟಾಗಿದೆ. ಇದರ ವಿರುದ್ಧ ಪ್ರತಿಭಟನೆ ಮಾಡಲು ಹೊರಟಿದ್ದಾರೆ. ಇದು ಖಂಡನೀಯ ಎಂದರು.
ಪೊಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಕೊಡುಗೆಯನ್ನೇ ನೀಡಿದೆ. ವಾರ್ಷಿಕವಾಗಿ ೧೩ ತಿಂಗಳ ವೇತನ ಘೋಷಣೆ ಮಾಡಿದೆ. ಅಂದರೆ ಒಂದು ತಿಂಗಳು ಹೆಚ್ಚುವರಿ ಸಂಬಳ ಅವರಿಗೆ ಸಿಗುತ್ತದೆ. ಇದು ಸ್ವಾಗತಾರ್ಹ. ಪೊಲೀಸರು ಹಬ್ಬ ಹರಿದಿನಗಳಲ್ಲಿ ತಮ್ಮ ಸಂತೋಷಗಳನ್ನು ಬಿಟ್ಟು ಸಮಾಜದ ಶಾಂತಿಗಾಗಿ ದುಡಿಯುತ್ತಾರೆ. ಸುಮಾರು ೧೪ ಗಂಟೆ ಅವರು ಕೆಲಸ ಮಾಡುತ್ತಾರೆ. ಸರ್ಕಾರದ ಈ ನಿರ್ಧಾರದಿಂದ ಅವರಿಗೆ ಸಮಾಧಾನವಾಗಿದೆ. ಗೃ ಸಚಿವರಿಗೆ ಅಭಿನಂದನೆ ಎಂದರು.
ಇಷ್ಟಾದರೂ ಪೊಲೀಸ್ ಇಲಾಖೆಗೆ ಮತ್ತಷ್ಟು ಸುಧಾರಣೆ ಬೇಕಾಗಿದೆ. ಅವರ ಸೇವಾ ಹಿರಿತನದ ಉಲ್ಲಂಘನೆಯಾಗುತ್ತಿದೆ. ಔರಾದ್ಕರ್ ವರದಿಯಲ್ಲಿ ತಾರತಮ್ಯವಿದೆ. ಅದರನ್ನು ಸರಿಪಡಿಸಬೇಕು. ಪೊಲೀಸರಿಗೆ ನೀಡುವ ರಿಸ್ಕ್ ಅಲಯನ್ಸ್ ಎಲ್ಲರಿಗೂ ಸಮಾನವಾಗಿ ಸಿಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪೊಲೀಸರಿಗೆ ಮತ್ತಷ್ಟು ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.
ಶಿವಮೊಗ್ಗದಲ್ಲಿ ಗಾಂಜಾ ಹೆಚ್ಚಳವಾಗುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಶಿವಮೊಗ್ಗದಲ್ಲಿ ಮಾತ್ರವಲ್ಲ, ಬಹಳ ಕಡೆ ಗಾಂಜಾ ಇದೆ. ಪೊಲೀಸರೂ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ಸುಳ್ಳಲ್ಲ. ಬಹಳ ವರ್ಷಗಳಿಂದ ಬೀಡುಬಿಟ್ಟಿರುವ ಕೆಲವು ಪೊಲೀಸರನ್ನು ಕೇಳಿದರೆ ಎಲ್ಲಿ ಗಾಂಜಾ ಇರುತ್ತದೆ ಎಂದು ಅವರೇ ತೋರಿಸುತ್ತಾರೆ. ಗಾಂಜಾ ವಿಷಯದಲ್ಲಿ ಕೆಲವು ಪೊಲೀಸರು ಕೂಡ ಸುಖವಾಗಿ ಜೀವನ ಮಾಡುತ್ತಿದ್ದಾರೆ. ಪೊಲೀಸರನ್ನು ಪ್ರೀತಿಸುವ ನಾವ ಇಂತಹ ವಿಷಯಗಳಲ್ಲಿ ಅವರ ವಿರುದ್ಧವೂ ಮಾತನಾಡುತ್ತೇವೆ. ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಎಸ್ಪಿಯವರು ಅವರ ಇಲಾಖೆಯಿಂದಲೇ ಗಾಂಜಾದ ವಿವರಗಳನ್ನು ತಿಳಿಯಬಹುದಾಗಿದೆ. ಅವರು ಸಮರ್ಥವಾಗಿ ಕೆಲಸ ನಿರ್ವಹಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಾಗರಾಜ್,ಶಿವಣ್ಣ, ಪ್ರಮುಖರಾದ ಯು. ಶಿವಾನಂದ್, ಸುವರ್ಣಾ ನಾಗರಾಜ್, ಹಿರಣ್ಣಯ್ಯ,