ಶಿವಮೊಗ್ಗ: ನಗರದ ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಾರಿಗೆ ವ್ಯವಸ್ಥೆಯ ಹಿತದೃಷ್ಟಿಯಿಂದ, ಹಳೆಯ ತುಂಗಾ ಸೇತುವೆಯ ಜಾಗದಲ್ಲಿ ಹೊಸ ಸೇತುವೆಯನ್ನು ನಿರ್ಮಿಸುವುದು ಅತ್ಯಂತ ತುರ್ತು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನಿನ್ನೆ ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಲೋಕೋಪಯೋಗಿ ಹಾಗೂ ಒಳನಾಡು ಜಲ ಸಾರಿಗೆ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ ಅವರೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ಶೀಘ್ರ ಅನುದಾನ ಬಿಡುಗಡೆಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಮನವಿ ಸಲ್ಲಿಸಿದರು.

ಹಳೆಯ ಸೇತುವೆಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಕಳೆದ ಜೂನ್ (೨೦೨೫) ತಿಂಗಳಿನಲ್ಲಿಯೇ ಬೆಂಗಳೂರಿನಲ್ಲಿ ಮಾನ್ಯ ಸಚಿವರನ್ನು ಭೇಟಿಯಾಗಿ ಪ್ರಾಥಮಿಕ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಸಚಿವರು, ನಿನ್ನೆ ಶಿವಮೊಗ್ಗಕ್ಕೆ ಆಗಮಿಸಿದ ಸಂದರ್ಭದಲ್ಲಿ ಖುದ್ದಾಗಿ ಸೇತುವೆಯ ಸ್ಥಿತಿಗತಿಯನ್ನು ವೀಕ್ಷಿಸಿದರು.
ಲೋಕೋಪಯೋಗಿ ಇಲಾಖೆ ಸಿದ್ಧಪಡಿಸಿರುವ ವರದಿಯಂತೆ, ಈ ನೂತನ ಸೇತುವೆ ನಿರ್ಮಾಣಕ್ಕೆ ಅಂದಾಜು ರೂ. ೪೦ ಕೋಟಿ ವೆಚ್ಚ ತಗುಲಲಿದ್ದು, ಸಂಪೂರ್ಣ ಪ್ಲಾನ್ ಮತ್ತು ಅಂದಾಜು ಪಟ್ಟಿಯನ್ನು ಸಚಿವರಿಗೆ ಹಸ್ತಾಂತರಿಸಲಾಯಿತು. ಸೇತುವೆಯು ನಗರದ ಆಯಕಟ್ಟಿನ ಭಾಗಗಳನ್ನು ಸಂಪರ್ಕಿಸುವುದರಿಂದ, ಯಾವುದೇ ವಿಳಂಬವಿಲ್ಲದೆ ತಾಂತ್ರಿಕ ಅನುಮೋದನೆ ಮತ್ತು ಆರ್ಥಿಕ ನೆರವು ನೀಡುವಂತೆ ಮತ್ತೊಮ್ಮೆ ಒತ್ತಾಯಿಸಲಾಯಿತು.
“ಹಳೆಯ ಸೇತುವೆ ಶಿಥಿಲಗೊಂಡಿರುವುದರಿಂದ ಸಾರ್ವಜನಿಕರಿಗೆ ಮಳೆಗಾಲದಲ್ಲಿ ಆತಂಕ ಎದುರಾಗಿದೆ. ನಗರದ ಸರ್ವತೋಮುಖ ಅಭಿವೃದ್ಧಿಗೆ ಆಧುನಿಕ ಮೂಲಸೌಕರ್ಯಗಳು ಅವಶ್ಯಕವಾಗಿದ್ದು, ಸಚಿವರು ಈ ಯೋಜನೆಗೆ ಪೂರಕವಾಗಿ ಸ್ಪಂದಿಸಿದ್ದಾರೆ. ಶೀಘ್ರದಲ್ಲೇ ಅನುದಾನ ಬಿಡುಗಡೆಯಾಗಿ ಕಾಮಗಾರಿ ಆರಂಭವಾಗುವ ವಿಶ್ವಾಸವಿದೆ ಎಂದು ಶಾಸಕರು ತಿಳಿಸಿದ್ದಾರೆ.

ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ವಿಧಾನ ಪರಿ?ತ್ ಸದಸ್ಯರಾದ ಡಾ. ಧನಂಜಯ್ ಸರ್ಜಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಜ್ಞಾನೇಶ್ವರ್, ನಾಗರಾಜ್, ನಗರಾಧ್ಯಕ್ಷರಾದ ಮೋಹನ್ ರೆಡ್ಡಿ, ಪ್ರಧಾನ ಕಾರ್ಯದರ್ಶಿಗಳಾದ ದೀನ್ ದಯಾಳ್, ಮಾಜಿ ಮಹಾನಗರ ಪಾಲಿಕೆಯ ಸದಸ್ಯರಾದ ಪ್ರಭಾಕರ್ ಪಿ, ಪ್ರಮುಖರಾದ ಲಕ್ಷ್ಮಣ, ಶ್ರೀನಾಗ್ ಸೇರಿದಂತೆ ಜನಪ್ರತಿನಿಧಿಗಳು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮತ್ತು ಇಲಾಖೆಯ ತಾಂತ್ರಿಕ ತಂಡದ ಸದಸ್ಯರು ಉಪಸ್ಥಿತರಿದ್ದರು.