ನೆಗಿಟೀವ್ ಥಿಂಕಿಂಗ್
ವಾರದ ಅಂಕಣ- 69

- ಗಜೇಂದ್ರಸ್ವಾಮಿ ಎಸ್. ಕೆ., ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)
ಈ ಮನುಷ್ಯ ಬಹುತೇಕ ಸ್ವಂತಿಕೆಯಲ್ಲಿ, ಸ್ವಾರ್ಥದಲ್ಲಿ ಬದುಕುತ್ತಿದ್ದಾನೆ. ಬಹಳಷ್ಟು ಜನರು ತಮ್ಮನ್ನು ತಾವು, ತಮ್ಮ ಕುಟುಂಬಕ್ಕೆ ಸೀಮಿತ ಮಾಡಿಕೊಂಡು ಬದುಕು ಸವೆಸುವುದನ್ನು ನೋಡಿದ್ದೇವೆ. ಆದರೆ ಪರಸ್ಪರ ಸಹಾಯ ಹಾಗೂ ನಮ್ಮ ನಡುವಿನ ನೆರವಿನ ಮನೋಭಾವ ಇನ್ನೂ ಕೆಲವರಲ್ಲಿ ಉಳಿದಿರುವುದು ನಮ್ಮ ಸಮಾಜ ಹಾಗೂ ಮನುಷ್ಯ ಸಂಕುಲ ಉಳಿಯಲು ಕಾರಣ ಎನ್ನುವ ಮಾತನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಈ ಹಿನ್ನೆಲೆಯಲ್ಲಿ ಕೆಲ ಸ್ವಾರ್ಥಿಗಳ ಮನೋಸ್ಥಿತಿಯನ್ನು ಸಹಾಯ ಮಾಡಲು ಅಥವಾ ಸ್ಪಂದಿಸಲು ಕ್ಷಣಮಾತ್ರದ ಕೆಲಸಕ್ಕೂ ಮುಂದಾಗದ ವ್ಯಕ್ತಿಗಳನ್ನು ಕುರಿತು ಹೇಳುವ ವಾಕ್ಯವೇ ಗೋಮಾತೆಯಂತಾದರೂ ನಮ್ಮಲ್ಲಿ ಕನಿಕರ ಹಾಗೂ ಪ್ರೀತಿಯ ಮನೋಭಾವ ಬೆಳೆಯಬೇಕು ಎಂಬುದೇ ಈ ವಾರದ ನೆಗೆಟಿವ್ ಥಿಂಕಿಂಗ್ ಅಂಕಣದ ವಿಷಯ.

ಮೊನ್ನೆ ದಿನ ಸಂಜೆ ಗೋದೂಳಿ ಸಮಯದಲ್ಲಿ ಮೇವಿನ ನಂತರ ಮನೆಗೆ ತನ್ನ ಗೆಳೆಯರ ಜೊತೆ ಬರುವಾಗ ಗೋ ಮಾತೆಯೊಂದಕ್ಕೆ ಹೆರಿಗೆ ನೋವು ಕಾಣಿಸಿಕೊಂಡಿದೆ, ಆ ಗೋ ಮಾತೆಗೆ ಸಂಜೆ ಕತ್ತಲಾಗುತ್ತಿದ್ದರೂ ಇದೇ ಗೋವುಗಳು ಜಾಗ ಮಾಡಿದ್ದು, ಕರು ಹಾಕಿದ ಮೇಲೆ ಆ ಗೋವುಗಳೆಲ್ಲಾ ಸುತ್ತ ನಿಂತ ಆ ಅವ್ವ ಹಾಗೂ ಕರುವಿನ ನೆರವಿಗೆ ಬಂದದ್ದೂ ವಿಶೇಷ, ಅವರ ಗೆಳೆಯರೆ, ಬಂಧುಬಳಗವೇ ಈ ನೆರವು ಮಾಡಿದ್ದಂತೂ ಸತ್ಯ.
ಇಂತಹದೊಂದು ಸನ್ನಿವೇಶ ನೋಡಿದ್ದು ವಿಶೇಷವೆನಿಸಿತು. ನಾವಲ್ಲಿ ಹೋಗಿ ಸಂತಸ ಪಟ್ಟು ಪೋಟೋ ಕ್ಲಿಕ್ಕಿಸಿದೆವು.
ಇನ್ನೂ ಹತ್ತಿರ ಹೋಗಿದ್ದರೆ, ಹೆಚ್ಚುಕಡಿಮೆ ಆದರೆ, ಗೋ ಮಾತೆಯರ ಗುಂಪೇ ನಮಗೆ ಓಡಿಸುತ್ತಿದ್ದವೇನೋ..?
ಗೋವುಗಳು ಸೇರಿದಂತೆ ಬಹುತೇಕ ಎಲ್ಲಾ ಪ್ರಾಣಿ ಪಕ್ಷಿಗಳಲ್ಲಿ ಇಂತಹ ನೆರವಿನ ಅಂಶ ಕಾಣಿಸಿಕೊಳ್ಳುತ್ತದೆ.

ಆದರೆ, ಕೋಗಿಲೆಯೊಂದು ತದ್ವಿರುದ್ದ. ಕೋಗಿಲೆ ಮೊಟ್ಟೆ ಎಂದರೆ ಸಾಮಾನ್ಯವಾಗಿ ಬೇರೆ ಪಕ್ಷಿಗಳ ಗೂಡಿನಲ್ಲಿ ಕೋಗಿಲೆ ಇಡುವ ಮೊಟ್ಟೆ ಮತ್ತು ಅದರ ಪರಾವಲಂಬಿ ನಡವಳಿಕೆ.
ಕೋಗಿಲೆ ತನ್ನ ಮೊಟ್ಟೆಯನ್ನು ಕಾಗೆ, ಮ್ಯಾಗ್ಪಿ, ಅಥವಾ ವಾರ್ಬ್ಲರ್ ಗೂಡಿನಲ್ಲಿಟ್ಟು ಹೋಗುತ್ತದೆ. ಆತಿಥೇಯ ಪಕ್ಷಿ ತನ್ನ ಮೊಟ್ಟೆಗಳ ಜೊತೆ ಕೋಗಿಲೆ ಮರಿಗಳಿಗೂ ಕಾವು ಕೊಟ್ಟು ಸಾಕುತ್ತದೆ. ಕೋಗಿಲೆ ಮೊಟ್ಟೆಗಳು ಆತಿಥೇಯ ಮೊಟ್ಟೆಗಳಂತೆ ಕಾಣುವಂತೆ ಬಣ್ಣ ಮತ್ತು ಗಾತ್ರದಲ್ಲಿ ಹೊಂದಿಕೆಯಾಗುತ್ತವೆ. ನಂತರ ಹೊರಬರುತ್ತವೆ. ಉಳಿದೆಲ್ಲಾ ಪ್ರಾಣಿ ಪಕ್ಷಿಗಳು ತಮ್ಮ ಮರಿಗಳನ್ನ ತಮ್ಮ ಬಳಗದೊಂದಿಗೆ ಸಾಕುತ್ತವೆ. ಅದೂ ಸಹ ತನ್ನ ಬಂಧುಬಳಗದ ಜೊತೆಗೂಡಿ ಎಂಬುದು ವಿಶೇಷ. ಮತ್ತೊಂದು ವಿಷಯವೆಂದರೆ, ಯಾವುದೇ ಪ್ರಾಣಿ, ಪಕ್ಷಿ ಪರಿಚಯ ಇರಲಿ, ಇಲ್ಲದಿರಲಿ ಪರಸ್ಪರ ಸಹಕರಿಸುತ್ತವೆ. ಅದು ನಮ್ಮ ಮನುಜಗುಣಗಳಲ್ಲಿ ಮರೆಯಾಗುತ್ತಿರುವುದು ದುರಂತದ ಸಂಗತಿಯಲ್ವೇ?

ಮಾನವೀಯತೆ, ಮನುಜ ಮನಸು.. ಹೀಗೆ ಪರಸ್ಪರ ಅನುಕಂಪ, ಪ್ರೀತಿಯ ನುಡಿಗಳನ್ನಾಡುವವರು, ಕೇವಲ ಮಾತಿನಲ್ಲಿ ಹಾಗೇ ನಡೆದುಕೊಂಡರೇಗೆ? ಬಸವ, ಬುದ್ದನ ಉಪದೇಶದ ನಾಕು ಸಾಲು ಓದಿ ಹೇಳುವ ಕೆಲವರು ಮನದೊಳಗೆ ಕಲ್ಮಷ ತುಂಬಿಕೊಂಡು ನಾಟಕವಾಡೋದನ್ನ ನೋಡಿದ್ದೇವಲ್ಲವೇ? ಒಳಗೊಂದು ದುಷ್ಟತನ ಇಟ್ಟುಕೊಂಡು ಹೊರಗೆ ಸವ್ಯಸಾಚಿಯಂತಾಡಿದರೆ ಹೇಗೆ ತಾನೇ ಪ್ರಾಣಿಗಳಿಗೆ, ಗೋವುಗಳಿಗೆ ಸಮಾನವಾಗುತ್ತೇವೆ…?!