ಶಿವಮೊಗ್ಗ,ಡಿ.1: ಅಧಿಕಾರಕ್ಕಾಗಿ ಕಾಂಗ್ರೆಸ್ ನಾಯಕರು ಏನಾದರೂ ಮಾಡಲಿ ಆದರೆ ಅಭಿವೃದ್ಧಿಯನ್ನು ಮಾಡದೇ ಇರುವುದು ಸರಿಯಲ್ಲ, ಕಾಂಗ್ರೆಸ್ ಪಕ್ಷದ ರಾಜಕಾರಣ ಸ್ವಾರ್ಥಕ್ಕೆ ಬಳಕೆಯಾಗುತ್ತಿದೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.

ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರಕ್ಕಾಗಿ ಗೊಂದಲಗಳು ಎದ್ದಿವೆ ನಿಜ. ಆದರೆ ಅದನ್ನು ಅವರು ನಿವಾರಿಸಿಕೊಳ್ಳುತ್ತಾರೆ. ಜನರ ಅಪೇಕ್ಷೆಯಂತೆ ಅಧಿಕಾರಕ್ಕೆ ಬಂದ ಅವರು, ರಾಜ್ಯದ ಜನತೆಗೆ ಅವಮಾನ ಮಾಡಿದ್ದಾರೆ. ಜನರ ನಿರೀಕ್ಷೆ ಹುಸಿಯಾಗಿವೆ. ಅಭಿವೃದ್ಧಿಗಳು ಕುಂಠಿತವಾಗಿದೆ. ಹಣಕಾಸು ಪರಿಸ್ಥಿತಿ ಉತ್ತಮವಾಗಿಲ್ಲ, ಭ್ರಷ್ಟಾಚಾರ ಕಂಡು ಬರುತ್ತಿದೆ. ಬಂಡವಾಳ ಹೂಡಿಕೆದಾರರು ರಾಜ್ಯಕ್ಕೆ ಬರುತ್ತಿಲ್ಲ ಈ ಬಗ್ಗೆ ಅವರು ಗಮನಹರಿಸಬೇಕಾಗಿದೆ ಎಂದರು.

ಬಿಜೆಪಿ ಪಕ್ಷದಲ್ಲಿ ಮಾತನಾಡುವ ಸ್ವಾತಂತ್ರ್ಯ ನಮಗೂ ಇದೆ. ಹಾಗಂತ ಪಕ್ಷದ ವಿರುದ್ಧ ಕೆಲಸ ಮಾಡುತ್ತಿಲ್ಲ. ನಮ್ಮದೂ ಒಂದು ಗುಂಪಿದೆ. ಆ ಗುಂಪಿನಲ್ಲಿ ನಮ್ಮ ಅಭಿಪ್ರಾಯವನ್ನು ಹೇಳುತ್ತೇವೆ ಅಷ್ಟೇ. ಇದು ಬಂಡಾಯವಲ್ಲ ಆಂತರಿಕ ಸ್ವಾತಂತ್ರ್ಯದಿಂದ ನಮ್ಮ ಅಭಿಪ್ರಾಯಗಳನ್ನು ಹೇಳಿದ್ದೇವೆ. ಯತ್ನಾಳ್ ಮಾತಿಗೆ ನಮ್ಮ ಸಹಮತವಿದೆ. ಆದರೆ ಅವರು ಪಕ್ಷ ಕಟ್ಟುವ ಬಗ್ಗೆ ನಮ್ಮ ಸಹಮತವಿಲ್ಲ ಯತ್ನಾಳ್ ಬಿಜೆಪಿಗೆ ಬಂದೇ ಬರುತ್ತಾರೆ. ಅವರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ ಎಂದರು.
ನಮ್ಮ ಗುಂಪು ಈಗಾಗಲೇ ರಾಜ್ಯದಲ್ಲಿ ನುಸುಳುಕೋರರ ಬಗ್ಗೆ, ಜನಗಣತಿಯ ವಿವಾದದ ಬಗ್ಗೆ, ಭ್ರಷ್ಟಾಚಾರ ಕುರಿತಂತೆ ಅಭಿವೃದ್ಧಿಯ ಹಿನ್ನಡೆ ಸೇರಿದಂತೆ ಹಲವು ವಿಷಯಗಳತ್ತ ಧ್ವನಿ ಎತ್ತಿದ್ದೇವೆ. ಬಿಜೆಪಿ ರಾಜ್ಯಾಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಪ್ರಕ್ರಿಯೆಗಳು ಈಗಾಗಲೇ ನಡೆಯುತ್ತಿವೆ. ಪಕ್ಷದ ಹಿತದೃಷ್ಟಿಯಿಂದ ಅಧ್ಯಕ್ಷರ ಬದಲಾವಣೆ ಅನಿವಾರ್ಯ ಎಂಬುದು ನಮ್ಮ ಅಭಿಪ್ರಾಯ ಎಂದರು.
ಕಾಂಗ್ರೆಸ್ ಪಕ್ಷವನ್ನು ಬೀಳಿಸುವ ಇರಾದೆ ನಮಗಿಲ್ಲ. ಆ ಮೂಲಕ ರಾಜಕೀಯ ಅಸ್ಥಿರತೆ ಉಂಟಾಗಬಾರದು. ಸರ್ಕಾರವನ್ನು ಬೀಳಿಸಲೂ ಬಾರದು. ಅವರ ಪಕ್ಷದ ತೀರ್ಮಾನಗಳು ಅವರಿಗೇ ಬಿಟ್ಟದ್ದು ಆದರೆ ಈ ಸಂದರ್ಭದಲ್ಲಿ ಸಂಪುಟ ಬದಲಾವಣೆ ಸೂಕ್ತವಾದದ್ದು ಎಂಬುದು ನಮ್ಮ ಅಭಿಪ್ರಾಯ. ಸೊರಬ ಸೇರಿದಂತೆ ರಾಜ್ಯದ ಎಲ್ಲಿಯೂ ಅಭಿವೃದ್ಧಿಯಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಅಭಿವೃದ್ಧಿಯತ್ತ ಗಮನವನ್ನೇ ಹರಿಸಿಲ್ಲ. ಅವರಿಗೆ ಅನುಭವನದ ಕೊರತೆಯಿದೆ ಎಂದರು.