ಶಿವಮೊಗ್ಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾಗಿರುವ ಶ್ರೀ ಸಂತೋಷ್ ಎಂ ಎಸ್ ರವರು ಶಿವಮೊಗ್ಗ ನಗರದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗೆ ಅನಿರೀಕ್ಷಿತ ಭೇಟಿ ನೀಡಿ ಇಲ್ಲಿಯವರೆಗೂ ಶಿವಮೊಗ್ಗ ಜಿಲ್ಲೆಯಲ್ಲಿ ಈ ಚಲಾನ್ ಮೂಲಕ ವಿಧಿಸಲಾದ ದಂಡದ ಪಾವತಿಯಲ್ಲಿನ ಪ್ರಗತಿಯನ್ನು ಪರಿಶೀಲಿಸಿದರು. ಕರ್ನಾಟಕ ಸರ್ಕಾರದ ಅಧಿಸೂಚನೆಯಂತೆ ದಿನಾಂಕ ದಿನಾಂಕ 12.12.2025 ರವರೆಗೆ ಈ ಚಲನ್ ಮೂಲಕ ಪಾವತಿಗಾಗಿ ಬಾಕಿ ಇರುವ ದಂಡದ ಮೊತ್ತದಲ್ಲಿ 50% ಕಡಿತಗೊಳಿಸಿ ಕಡಿಮೆ ಮೊತ್ತದ ದಂಡ ಪಾವತಿ ಮಾಡಿದಲ್ಲಿ ಅಂತಹ ಪ್ರಕರಣವನ್ನು ವಿಲೇ ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಈ ಸವಲತ್ತನ್ನು ಯಾವ ರೀತಿ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಬಗ್ಗೆ ಪರಿಶೀಲಿಸಲಾಯಿತು

.
ಬೆಟ್ಟಿ ಸಮಯದಲ್ಲಿ ಹಾಜರಿದ್ದ ಸಂಚಾರಿ ಪೊಲೀಸ್ ಠಾಣಾಧಿಕಾರಿಗಳು ನೀಡಿದ ವಿವರದಂತೆ ಇಲ್ಲಿಯವರೆಗೂ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 2,00,508 ಪ್ರಕರಣಗಳು ದಾಖಲಾಗಿದ್ದು ಅದರ ದಂಡದ ಒಟ್ಟು ಮೊತ್ತ ರೂ. 16,33,91,250/- ಆಗಿದ್ದು ಅವುಗಳ ಪೈಕಿ ಒಟ್ಟು 1,527 ಈ ಚಲನ್ ಪ್ರಕರಣಗಳು ಮುಕ್ತಾಯಗೊಂಡಿದ್ದು ಒಟ್ಟು ರೂ. 6,14,750/- ರಷ್ಟು ಹಣ ಪಾವತಿ ಮಾಡಲಾಗಿದೆ.

ದಿನಾಂಕ 13.12.2025 ರಂದು ಅಂದರೆ ಇದೇ ತಿಂಗಳ ಎರಡನೇ ಶನಿವಾರದಂದು ರಾಷ್ಟ್ರೀಯ ಲೋಕ ಅದಾಲತ್ ಶಿವಮೊಗ್ಗ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಆಯೋಜಿಸಲಾಗಿದ್ದು ಅದರ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಈ ಚಲನ್ ಮೂಲಕ ವಿಧಿಸಲಾದ ದಂಡದ ಮೊತ್ತದಲ್ಲಿ 50% ಕಡಿಮೆ ಮಾಡಿ ದಂಡದ ಮೊತ್ತವನ್ನು ಪಾವತಿ ಮಾಡುವಂತೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿರುವ ಯೋಜನೆಯು ಇನ್ನು ಕೇವಲ 10 ದಿನ ಜಾರಿಯಲ್ಲಿ ಇರುವ ಕಾರಣ ಅತಿ ಹೆಚ್ಚು ಪ್ರಕರಣಗಳಲ್ಲಿ ಕಡಿಮೆ ಮೊತ್ತದ ದಂಡ ಪಾವತಿ ಮಾಡಿ ಸಾರ್ವಜನಿಕರು ಅವಕಾಶದ ಸದ್ಬಳಕೆ ಮಾಡಿಕೊಳ್ಳಬೇಕೆಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಶಿವಮೊಗ್ಗದಿಂದ ಹೊರಡಿಸಲಾದ ಪತ್ರಿಕಾ ಪ್ರಕಟಣೆಯಲ್ಲಿ ಸದಸ್ಯ ಕಾರ್ಯದರ್ಶಿಗಳು ಕೋರಿಕೊಂಡಿದ್ದಾರೆ.
ಸಾರ್ವಜನಿಕರು ದಂಡದ ಮೊತ್ತದಲ್ಲಿ 50% ಕಡಿಮೆ ಮೊತ್ತದ ಹಣವನ್ನು ಶಿವಮೊಗ್ಗ ನಗರದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಹಾಗೂ ಪೂರ್ವ ಸಂಚಾರಿ ಪೊಲೀಸ್ ಠಾಣೆ ಮತ್ತು ಭದ್ರಾವತಿ ನಗರದ ಸಂಚಾರಿ ಪೊಲೀಸ್ ಠಾಣೆ ಅಲ್ಲದೆ ರಸ್ತೆಯ ವೃತ್ತದಲ್ಲಿ ಇರುವಂತಹ ಸಂಚಾರಿ ಪೊಲೀಸ್ ಅಧಿಕಾರಿ ಆಗಿರುವಂತಹ ಸಹಾಯಕ ಪೊಲೀಸ್ ನಿರೀಕ್ಷಕರ ಬಳಿ ಇರುವ ಈ ವಿ ಎಂ ಯಂತ್ರಗಳ ಮೂಲಕ ಸಾರ್ವಜನಿಕರು ದಂಡದ ಮೊತ್ತವನ್ನು ಪಾವತಿ ಮಾಡಲು ಅನುಕೂಲ ಮಾಡಲಾಗಿದ್ದು ಈ ಅವಕಾಶದ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ಕೋರಿದ್ದಾರೆ.