ಬೆಂಗಳೂರು/ ಮಂಗಳೂರು, ನವೆಂಬರ್ 28, 2025: ಬಾಲ್ಯದ ಕ್ಯಾನ್ಸರ್ ಪತ್ತೆ, ಗುಣಪಡಿಸುವಿಕೆ ಮತ್ತು ಜಾಗೃತಿಗಾಗಿ ಕೆಲಸ ಮಾಡುತ್ತಿರುವ ಕ್ಯಾನ್ಕಿಡ್ಸ್ -ಕಿಡ್ಸ್ಕ್ಯಾನ್ ಎನ್ಜಿಒ ಮಕ್ಕಳಲ್ಲಿನ ಕ್ಯಾನ್ಸರ್ ಪಿಡುಗು ಕುರಿತು ಜಾಗೃತಿಗಾಗಿ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ PHOSSCON 2025ಕ್ಕೆ ಇಂದು ಚಾಲನೆ ನೀಡಿತು. ನವೆಂಬರ್ 28–29 ರಂದು ಮಣಿಪಾಲದ ಕೆಎಂಸಿ ಆವರಣದಲ್ಲಿ ಈ ಸಮ್ಮೇಳನ ನಡೆಯಲಿದೆ. ಮಕ್ಕಳ ಕ್ಯಾನ್ಸರ್ ತಜ್ಞರು, ದಾದಿಯರು, ಮಾನಸಿಕ ಸಾಮಾಜಿಕ ಬೆಂಬಲ ತಂಡಗಳು, ರಾಷ್ಟ್ರೀಯ ಮತ್ತು ಜಾಗತಿಕ ಎನ್ಜಿಒಗಳು, ಆರೈಕೆದಾರರು, ಸಂಶೋಧಕರು, ಸಿಎಸ್ಆರ್ ನಾಯಕರು ಮತ್ತು ಹಿರಿಯ ಕ್ಯಾನ್ಕಿಡ್ಸ್ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗಿಯಾಗಿದ್ದಾರೆ.

‘ಬಾಲ್ಯದ ಕ್ಯಾನ್ಸರ್ ಜಯಿಸಲು ಚಿಕಿತ್ಸೆ ಮತ್ತು ಆರೈಕೆಯನ್ನು ಒಟ್ಟಾಗಿಸುವುದು, ಆ ಬಗ್ಗೆ ಮಕ್ಕಳು ಮತ್ತು ಪಾಲಕರಲ್ಲಿ ಜಾಗೃತಿ ಮೂಡಿಸಿ, ಧೈರ್ಯ ತುಂಬುವುದು ಈ ಸಮ್ಮೇಳನದ ಉದ್ದೇಶ. ಮಕ್ಕಳ ಆಂಕೊಲಾಜಿ ಕ್ಷೇತ್ರದಲ್ಲಿ ಬೆಳವಣಿಗೆಗಳು, ತಾಂತ್ರಿಕ ಪ್ರಗತಿ, ಲಭ್ಯವಿರುವ ಅತ್ಯಾಧುನಿಕ ಚಿಕಿತ್ಸೆಗಳ ಮಾಹಿತಿ, ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಬೆಂಬಲ ಮತ್ತು ಮಾನಸಿಕ ಆರೈಕೆಗೆ ಅಗತ್ಯ ಕ್ರಮಗಳು, ಕ್ಯಾನ್ಸರ್ ಬಳಿಕ ಜೀವನಮಟ್ಟ ಸುಧಾರಣೆ ಮುಂತಾದವುಗಳು ಕುರಿತು ಇಲ್ಲಿ ತಜ್ಞರು ಮಾಹಿತಿ ನೀಡುತ್ತಾರೆ’ ಎಂದು ಕ್ಯಾನ್ಕಿಡ್ಸ್ನ ಸ್ಥಾಪಕ ಅಧ್ಯಕ್ಷೆ ಪೂನಂ ಬಗೈ ಹೇಳಿದರು.

ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಡಾ. ಶ್ರೀಪಾದ್ ಬನಾವಳಿ, ಸರ್ ಗಂಗಾ ರಾಮ್ ಆಸ್ಪತ್ರೆ, ನವದೆಹಲಿಯ ಡಾ. ಮಾನಸ್ ಕಲ್ರಾ ಸೇರಿದಂತೆ ಅನೇಕ ತಜ್ಞರು ಸಮ್ಮೇಳನದಲ್ಲಿ ಭಾಗಿಯಾಗಿ ಸಲಹೆ, ಮಾರ್ಗದರ್ಶನ ನೀಡಿದರು.
ಕ್ಯಾನ್ಸರ್ ಪೀಡಿತರ ಮಕ್ಕಳ ಪಾಲಕರು ಸಮ್ಮೇಳನದಲ್ಲಿ ಭಾಗವಹಿಸಿ ವೈದ್ಯಕೀಯ ಸಲಹೆ, ಮಾರ್ಗದರ್ಶನ ಪಡೆಯಬಹುದಾಗಿದೆ. ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವುದೇ ಇದರ ಮೂಲ ಉದ್ದೇಶವಾಗಿದ್ದು ಪ್ರವೇಶ ಉಚಿತವಾಗಿರುತ್ತದೆ.