ಶಿವಮೊಗ್ಗ : ನಗರದ ಮೆಗ್ಗಾನ್ ಆವರದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರು ಅನುಭವಿಸುತ್ತಿರುವ ಯಾತನೆಯನ್ನು ಕಂಡು ಆಸ್ಪತ್ರೆ ಆಡಳಿತದ ವಿರುದ್ಧ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ|| ನಾಗಲಕ್ಷ್ಮೀ ಚೌದರಿ ಗರಂ ಆದ ಘಟನೆ ಜರುಗಿತು.

ಅವರು ಇಂದು ಶಿವಮೊಗ್ಗ ಭೇಟಿಯ ಸಂದರ್ಭದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದಾಗ ಬೆಳಿಗ್ಗೆ ೯ಗಂಟೆಯಿಂದಲೇ ೭ ತಿಂಗಳು, ೮ ತಿಂಗಳು, ೯ ತಿಂಗಳು ಗರ್ಭಿಣಿಯರು ಮತ್ತು ಬಾಣಂತಿಯರು ಸರತಿ ಸಾಲಿನಲ್ಲಿ ನಿಂತ್ತಿದ್ದನ್ನು ನೋಡಿ ಅಧ್ಯಕ್ಷರು ಅವಾಕ್ಕಾದರು.
ಈ ಆಸ್ಪತ್ರೆಯಲ್ಲಿ ಕೇವಲ ಒಂದೇ ಒಂದು ಕೌಂಟರ್ ಇದ್ದು ನೂರಾರು ಮಹಿಳೆಯರು ಇಲ್ಲಿ ಬಂದು ನಿಂತಿರುವುದು ದೊಡ್ಡ ದುರಂತವಾಗಿದೆ ಇದು ತಮಗೆ ತೀವ್ರ ಅಸಮಾಧಾನ ತಂದಿದೆ. ಈ ಕುರಿತು ಆಯೋಗದ ಆಯುಕ್ತರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಗುಡುಗಿದ ಅವರು, ನಾಳೆಯೇ ಪರಿಶೀಲನಾ ಸಭೆಯಲ್ಲಿ ಈ ಕುರಿತು ಪ್ರಸ್ತಾಪ ಮಾಡುವುದಾಗಿ ಅತ್ಯಂತ ಖಾರವಾಗಿಯೇ ಪ್ರತಿಕ್ರಿಯಿಸಿದರು. ನಾಳೆ ಒಳಗಾಗಿಯೇ ಇಲ್ಲಿ ಕನಿಷ್ಠ ೩ರಿಂದ ೧೦ ಕೌಂಟರ್ ತೆರೆಯಬೇಕು. ಹಾಗೂ ಒಳರೋಗಿಗಳಿಗೆ ಆಸ್ಪತ್ರೆಯ ಸಿಬ್ಬಂದಿಗಳು ಸರಿಯಾಗಿ ಚಿಕಿತ್ಸೆ ನೀಡಬೇಕು ಎಂದು ತಾಕೀತು ಮಾಡಿದರು.

ಆಸ್ಪತ್ರೆಯಲ್ಲಿನ ಕುಡಿಯುವ ನೀರು, ಬಿಸಿನೀರು, ಮೊದಲಾದ ಎಲ್ಲಾ ವ್ಯವಸ್ಥೆಗಳನ್ನು ಪರಿಶೀಲಿಸಿದ್ದೇನೆ. ಎಲ್ಲವೂ ಸರಿಯಾಗಿದೆ. ೧೦೦೦ ಹೆರಿಗೆ ಆದರೆ ಅದರಲ್ಲಿ ಸುಮಾರು ೬೫೦ ನಾರ್ಮಲ್ ಹೆರಿಗೆ ಆಗುತ್ತದೆ. ಉಳಿದ ೩೫೦ ಗರ್ಭೀಣಿಯರು ಸೀಜೇರಿಯನ್ಗೆ ಹೋಗುತ್ತಾರೆ ಎಂದ ಅವರು, ಐಸಿಯು, ಓಟಿಗಳಲ್ಲಿ ಸ್ಟೆಬಿಲೈಜ್ಡ್ ಪ್ರೋಟೋಕಾಲ್ಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಿದ್ದರ ಬಗ್ಗೆ ಅಧಿಕಾರಿಗಳಿಂದ ವರದಿ ಕೇಳಿದ್ದೇನೆ. ಆಸ್ಪತ್ರೆ ವಿರುದ್ಧ ದೂರುಗಳು ಬಂದರೆ, ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ಧಾಕ್ಷಿಣ್ಯವಾಗಿ ಆಯುಕ್ತರಿಗೆ ವರದಿ ಮಾಡಲಾಗುವುದು ಎಂದು ಎಚ್ಚರಿಸಿದರು. ಕೆಲವು ಪ್ರಕರಣಗಳಲ್ಲಿ ಸ್ಟೇಷನ್ನಿನಲ್ಲಿ ನೋಂದಣಿಯಾಗುತ್ತಿಲ್ಲ. ಆದರೆ ಅವರೆಲ್ಲಾ ಆಸ್ಪತ್ರೆಗೆ ಬಂದು ಹೆರಿಗೆ ಮಾಡಿಸಿಕೊಳ್ಳುತ್ತಾರೆ ಎಂದ ಅವರು, ಅನೈತಿಕ ಸಂಬಂಧದಿಂದಾಗಿ ಗರ್ಭಿಣಿಯಾಗುವ ಮಹಿಳೆಯರು ಕಾನೂನಿನ ಅರಿವನ್ನು ಪಡೆದುಕೊಳ್ಳಬೇಕು. ಮಹಿಳೆಯರು ಸರ್ಕಾರದ ಸುಕನ್ಯ ಸಮೃದ್ಧಿ ಯೋಜನೆ ಲಾಭ ಪಡೆಯಬೇಕು ಎಂದು ಸಲಹೆ ನೀಡಿದರು.
ಆಸ್ಪತ್ರೆಯಲ್ಲಿದ್ದ ಕೆಲ ರೋಗಿಗಳು ತಮಗಾಗುತ್ತಿರುವ ಅನ್ಯಾಯ, ವಿಳಂಬ, ಲಂಚಕೋರತನದ ಬಗ್ಗೆ ಅಧ್ಯಕ್ಷರಲ್ಲಿ ತಮ್ಮ ಅಳಲು ತೋಡಿಕೊಂಡು ಆಸ್ಪತ್ರೆಯಲ್ಲಿ ತಮಗೆ ಹೊರಗಿನಿಂದ ಔಷಧಿ ತರುವಂತೆ ಚೀಟಿ ಬರೆದುಕೊಡುತ್ತಾರೆ. ೧೦೦ ರೂ. ೮೦೦ ರೂ.ಗಳ ವರೆಗೆ ಖುಷಿ ಕೊಡಬೇಕೆಂದು ಒತ್ತಾಯಿಸುತ್ತಾರೆ. ಹೆರಿಗೆಯಲ್ಲಿ ಗಂಡು ಮಗ ಜನಿಸಿದರೆ ೨೫೦೦ ರೂ., ಹೆಣ್ಣು ಮಗು ಜನಿಸಿದರೆ ೧೫೦೦ ರೂ. ಲಂಚ ಕೇಳುತ್ತಾರೆ. ನಾವು ಬಡವರು ಎಂದರೂ ಬಿಡುವುದಿಲ್ಲ. ಖಾಸಗಿ ಆಸ್ಪತ್ರೆಯಲ್ಲಾದರೆ ತೆಪ್ಪಗೆ ಕೇಳಿದಷ್ಟು ಹಣವನ್ನು ಕಟ್ಟುತ್ತೀರಿ ಇಲ್ಲಿ ಚೌಕಾಸಿ ಮಾಡುತ್ತೀರಿ ಎಂದು ಬಾಯಿಗೆ ಬಂದಂತೆ ಬಯ್ಯುತ್ತಾರೆ ಎಂದು ದೂರಿದ ರೋಗಿಗಳು ಗರ್ಭಿಣಿ ಮತ್ತು ಬಾಣಂತಿಯರಿಗೆ ಪ್ರತ್ಯೇಕ ಕೌಂಟರ್ ಮಾಡುವಂತೆ ಆಯೋಗದ ಅಧ್ಯಕ್ಷರನ್ನು ಆಗ್ರಹಿಸಿದರು.