ಶಿವಮೊಗ್ಗ : ಕೇಂದ್ರದಿಂದ ರೈತರಿಗೆ ವಿಶೇಷವಾಗಿ ಶಕ್ತಿತುಂಬುವ ಕಾರ್ಯ ಆಗಿದ್ದು, ಪಿಎಂ ಕಿಸಾನ್, ಫಸಲ್ ಭೀಮಾ ಯೋಜನೆಯ ಹಣವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪಿಎಂ ಕಿಸಾನ್ ಯೋಜನೆಯಡಿ ೧,೬೪,೯೧೩ ರೈತರಿಗೆ ೨೦ ಕಂತುಗಳಲ್ಲಿ ೫೪೦ ಕೋಟಿ ರೂ. ಜಮಾ ಆಗಿದೆ. ಫಸಲ್ ಭೀಮಾ ಯೋಜನೆಯಡಿ ಕೃಷಿಬೆಳೆಗೆ ೧,೯೩,೫೭೦ ರೈತರಿಗೆ ೨೩೫ ಕೋಟಿ ರೂ. ಹಣ ಜಮಾ ಆಗಿದೆ. ತೋಟಗಾರಿಕಾ ಮತ್ತು ಹವಾಮಾನ ಆಧರಿತ ಬೆಳೆಗಳಿಗೆ ಬೆಳೆವಿಮೆ ಯೋಜನೆಯಲ್ಲಿ ೨,೪೯,೮೩೭ ರೈತರಿಗೆ ೬೨೦ ಕೋಟಿ ಜಮಾ ಆಗಿದೆ ಎಂದರು.
ಅತಿವೃಷ್ಟಿ ಹಣ ಮತ್ತು ಬೆಳೆವಿಮೆ ಹಣ ಬಂದಿಲ್ಲ ಎಂದು ಕೆಲವು ರೈತರು ದೂರವಾಣಿ ಮೂಲಕ ನನ್ನನ್ನು ಸಂಪರ್ಕಿಸಿದ್ದರು. ಕೇಂದ್ರದ ಎನ್ಡಿಆರ್ನಿಂದ ಶೇ.೭೫ ರಿಂದ ೯೦ರಷ್ಟು ಹಾಗೂ ರಾಜ್ಯದ ಎಸ್ಜಿಆರ್ನಿಂದ ಶೇಕಡ ೧೦ ರಿಂದ ೨೦ ಅತಿವೃಷ್ಟಿ ಪರಿಹಾರ ಜಮಾ ಆಗಬೇಕಿದ್ದು ಒಂದು ವಾರದೊಳಗೆ ಜಮಾ ಆಗಲಿದೆ ಎಂದರು.

ಜಿಲ್ಲೆಯ ೯೩೬೬ ರೈತರಿಗೆ ೫,೫೮,೪೬,೦೦೦ ರೂ. ಜಮಾ ಆಗಿದ್ದು, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಭತ್ತ ಇನ್ನಿತರ ಕೃಷಿ ಬೆಳೆಗೆ ೨೦೨೩-೨೦೨೪ನೇ ಸಾಲಿನ ಬೆಳೆನಷ್ಟ ಪರಿಹಾರ, ೧೩.೫ ಕೋಟಿ ಈಗಾಗಲೇ ಮೂರು ತಿಂಗಳ ಕೆಳಗೆ ಜಮಾ ಆಗಿದೆ. ಈ ತಿಂಗಳ ಅಂತ್ಯದ ವೇಳೆಗೆ ೨೦೨೪-೨೫ನೇ ಸಾಲಿನ ಹವಾಮಾನಾಧಾರಿತ ಬೆಳೆನಷ್ಟ ೮೦ ರಿಂದ ೯೫ ಸಾವಿರ ರೈತರಿಗೆ ೧೮೦ ಕೋಟಿಯವರೆಗೆ ಪರಿಹಾರ ಬರುವ ನಿರೀಕ್ಷೆಯಿದ್ದು, ಈವರ್ಷ ೬೦ ಸಾವಿರ ರೈತರಿಗೆ ೧ ಲಕ್ಷ ಎಕರೆಗೆ ಅಡಿಕೆ ಬೆಳೆಹಾನಿ ಪರಿಹಾರ ಸಿಗಲಿದೆ. ಅಲ್ಲದೆ ೩ಸಾವಿರ ಎಕರೆಯಲ್ಲಿ ಬೆಳೆದ ಶುಂಠಿ, ಮಾವು ಪರಿಹಾರ ಕೂಡ ರೈತರ ಖಾತೆಗೆ ಜಮಾ ಆಗಲಿದೆ ಎಂದರು.
ಈಗಾಗಲೇ ಮೆಕ್ಕೆಜೋಳ ಬೆಳೆ ಬಂದಿದ್ದು, ಮಾರುಕಟ್ಟೆಯಲ್ಲಿ ಕ್ವಿಂಟಾಲ್ಗೆ ೧೮೦೦ ದರ ಇದ್ದು ಕೇಂದ್ರ ಸರ್ಕಾರ ಕನಿಷ್ಟ ಬೆಂಬಲ ಬೆಲೆಯನ್ನು ಜೂನ್ ಮೊದಲ ವಾರದಲ್ಲೇ ಘೋಷಣೆ ಮಾಡಿದೆ. ಕಳೆದಬಾರಿ ೨೪೦೦ ಬೆಂಬಲ ಬೆಲೆ ಮೆಕ್ಕೆಜೋಳಕ್ಕೆ ಘೋಷಣೆಯಾಗಿತ್ತು. ಆದರೂ ರಾಜ್ಯ ಸರ್ಕಾರ ಈಬಾರಿ ಇನ್ನೂ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಮಾಡಿಲ್ಲ. ಆದಷ್ಟು ಬೇಗ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು. ಜಿಲ್ಲೆಯ ಸೊರಬ, ಶಿಕಾರಿಪುರ, ಶಿವಮೊಗ್ಗ ಗ್ರಾಮಾಂತರದಲ್ಲಿ ಆದಷ್ಟುಬೇಗ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಮುಸುಕಿನಜೋಳ ಖರೀದಿ ಕೇಂದ್ರ ತೆರೆಯಲಿಲ್ಲ. ಭತ್ತದ ಖರೀದಿ ಕೇಂದ್ರ ತೆರೆದಿದ್ದು ೧ ಚೀಲದಲ್ಲಿ ೫೦ ಕೆ.ಜಿ. ಮಾತ್ರ ಇರಬೇಕೆಂಬ ಷರತ್ತು ಹಾಕಿದ್ದಾರೆ. ಖಾಲಿ ಚೀಲಕ್ಕೆ ಕೇವಲ ೩ ರೂ. ನೀಡುತ್ತಿದ್ದು, ಚೀಲದ ಬೆಲೆ ೩೦ ರೂ. ಇದ್ದು, ಅದರಲ್ಲೂ ರೈತರಿಗೆ ನಷ್ಟವಾಗುತ್ತಿದೆ. ಖಾಲಿ ಚೀಲಕ್ಕೆ ಬೆಲೆ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿದರು.
ರೈತರ ಖಾತೆಗೆ ನೇರವಾಗಿ ಪರಿಹಾರದ ಹಣ ಮತ್ತು ಬೆಳೆವಿಮೆ ಹಣ ಜಮಾ ಆಗಲಿದೆ ಎಂದ ಅವರು, ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಪ್ರತಿಭಟನೆ ಮತ್ತು ನಿನ್ನೆ ನಡೆದ ದುರ್ಘಟನೆಗೆ ಸರ್ಕಾರವೇ ಹೊಣೆ ಹೋರಬೇಕಾಗಿದೆ. ಬೇರೆ ರಾಜ್ಯಗಳಲ್ಲಿ ಇಲ್ಲದ ಕೇಂದ್ರದ ಖರೀದಿ ನಿಗಧಿತ ದರದ ಸಮಸ್ಯೆ ನಮ್ಮಲ್ಲಿ ಏಕೆ ಎಂಬುದು ತಿಳಿಯುತ್ತಿಲ್ಲ. ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ಕಬ್ಬು ಬೆಳೆಗಾರರ ಆಕ್ರೋಶಕ್ಕೆ ಕಾರಣ ಎಂದರು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿದಂತೆ ಉತ್ತರಿಸಿದ ಅವರು, ರಾಜ್ಯ ಸರ್ಕಾರದ ಯಾವುದೇ ಪ್ರಸ್ತಾವನೆಯನ್ನು ಸ್ಥಳೀಯ ಜನರ ವಿರೋಧವಿದ್ದರೆ ಅದನ್ನು ರಾಜ್ಯ ಸರ್ಕಾರವೇ ಪರಿಗಣಿಸಬೇಕು. ಕೇಂದ್ರ ಸರ್ಕಾರ ನಿಯಮಾನುಸಾರವೇ ಅನುಮತಿ ನೀಡುತ್ತದೆ. ಪಂಪ್ಡ್ ಸ್ಟೋರೇಜ್ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾದ ಕಾರಣ ಈಗಾಗಲೇ ಕೇಂದ್ರ ಸರ್ಕಾರ ಮರುಪರಿಶೀಲನೆಗೆ ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದು, ಯೋಜನೆಯ ಪ್ರಸ್ತಾವವನ್ನು ತಡೆನೀಡಲಾಗಿದೆ ಇದರ ಪರಿಣಾಮವನ್ನು ಈಗಾಗಲೇ ಗಮನಕ್ಕೆ ತರಲಾಗಿದೆ ಎಂದರು.
ಸಾಗರದಲ್ಲಿ ಹೈವೆಗೆ ಸಂಬಂಧಿಸಿದಂತೆ ಈಗಾಗಲೇ ಟೆಂಡರ್ ಆಗಿ ೨ವರ್ಷ ಆಗಿದೆ. ಭೂಸ್ವಾಧೀನ ಪ್ರಕ್ರಿಯೆ ನಿಧಾನವಾಗುತ್ತಿದೆ. ಕೊಡಚಾದ್ರಿ ಮತ್ತು ಕೊಲ್ಲೂರು ನಡುವಿನ ಕೇಬಲ್ ಕಾರ್ ಯೋಜನೆಗೆ ಕೂಡ ಭೂಸ್ವಾಧೀನ ಪ್ರಕ್ರಿಯೆಯಿಂದ ಸ್ವಲ್ಪ ವಿಳಂಬವಾಗಿದೆ. ಹೆದ್ದಾರಿಗೆ ಸಂಬಂಧಿಸಿದಂತೆ ಎರಡು ಸೇತುವೆಗಳಿಗೂ ಕೂಡ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ವಿಳಂಬವಾಗಿದ್ದರಿಂದ ಯೋಜನೆ ಕುಂಟುತ್ತಾ ಸಾಗಿದ್ದು, ಈ ಸಂಬಂಧ ಈಗಾಗಲೇ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಫೆಬ್ರವರಿ ಅಂತ್ಯದವೇಳೆಗೆ ಎಲ್ಲವೂ ಬಗೆಹರಿಯಲಿದೆ ಎಂದರು.

ಕೋಟೆಗಂಗೂರು ರೈಲ್ವೆಕೋಚ್ ಫ್ಯಾಕ್ಟರಿ ಕಾಮಗಾರಿ ಶೇ.೬೦ರಷ್ಟು ಪೂರ್ಣವಾಗಿದ್ದು, ೨ ಟ್ರ್ಯಾಕ್ಗಳ ಕಾರ್ಯ ಮುಗಿದಿದೆ. ಇನ್ನೂ ನಾಲ್ಕು ಟ್ರ್ಯಾಕ್ ಅಳವಡಿಸಲು ಬಾಕಿಯಿದ್ದು, ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಗಾಯತ್ರಿದೇವಿ ಮಲ್ಲಪ್ಪ, ಪ್ರಮುಖರಾದ ಶಿವರಾಜ್, ಮಾಲತೇಶ್, ಸಿದ್ಲಿಂಗಪ್ಪ, ಕುಮಾರನಾಯ್ಕ, ಗಣೇಶ್ ಬಿಳಿಕಿ, ಬಳ್ಳೆಕೆರೆ ಸಂತೋಷ್, ರಾಜೇಶ್ ಕಾಮತ್, ಅಣ್ಣಪ್ಪ, ಚಂದ್ರಶೇಖರ್ ಇದ್ದರು.