ಶಿವಮೊಗ್ಗ,ನ.14: ನಾಲ್ಕು ಮನೆಗಳ ಸದಸ್ಯ ಆಯನೂರು ಮಂಜುನಾಥ್ ಅವರು ತಮ್ಮ ಹುಟ್ಟುಹಬ್ಬವನ್ನು ಹೊಸಮನೆಯ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಗೆ 25 ಸಾವಿರ ದೇಣಿಗೆ ಕೊಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಅವರು ಇಂದು ಬೆಳಿಗ್ಗೆ ತಮ್ಮ ಅಭಿಮಾನ ಬಳಗದವರು ಆಯೋಜಿಸಿದ್ದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಗುಲಾಬಿ ಹೂ ಹಾಗೂ ಸಿಹಿ ನೀಡಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಮಕ್ಕಳೆ ಈ ದೇಶದ ಪ್ರಜೆಗಳು, ಅವರ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಸಮಾಜದ ಗುರಿಯಾಗಿರಬೇಕು. ಭಾರತದ ಮೊದಲ ಪ್ರಧಾನಿ ನೆಹರೂ ಅವರು ತಮ್ಮ ಹುಟ್ಟುಹಬ್ಬವನ್ನು ಮಕ್ಕಳಿಗಾಗಿ ಬಿಟ್ಟುಕೊಟ್ಟಿದ್ದಾರೆ. ಆಗಾಗಿ ನ.14ರಂದು ಮಕ್ಕಳ ದಿನಾಚರಣೆಯನ್ನು ನಾವು ಆಚರಿಸುತ್ತಾ ಬಂದಿದ್ದೇವೆ. ನ.14 ನನ್ನ ಹುಟ್ಟಿದ ದಿನವೂ ಆಗಿರುವುದರಿಂದ ನನಗದು ಸಂತಸ ತಂದಿದೆ ಎಂದರು.

ಹುಟ್ಟಿದ ಹಬ್ಬ ಎಂದರೆ ಕೇವಲ ಆಚರಣೆಯಾಗಬಾರದು. ಪ್ರತಿ ಹುಟ್ಟಿದ ಹಬ್ಬದ ದಿನವೂ ನನ್ನನ್ನು ನಾನು ಪ್ರಶ್ನೆ ಮಾಡಿಕೊಳ್ಳುತ್ತೇನೆ. ಇದು ನಮ್ಮ ಕರ್ತವ್ಯವನ್ನು ನೆನಪಿಸುವ ದಿನವೂ ಆಗಿದೆ. ಕಳೆದ ವರ್ಷಗಳಲ್ಲಿ ನಾನೇನು ಸಾಧನೆ ಮಾಡಿದ್ದೇನೆ. ಅಥವಾ ತಪ್ಪೇನು ಮಾಡಿದ್ದೇನೆ. ಅದನ್ನು ತಿದ್ದಿಕೊಳ್ಳುವ ಬಗೆ ಹೇಗೆ ಎಂಬುವುದನ್ನು ನೆನಪಿಸುವ ದಿನವೇ ಈ ಹುಟ್ಟುಹಬ್ಬವಾಗಿದೆ ಎಂದರು.

ಸಾಮಾನ್ಯವಾಗಿ ನಾನು ಎಂದು ಹುಟ್ಟುಹಬ್ಬವನ್ನು ಆಚರಿಸಿಕೊಂಡವನಲ್ಲ. ಆದರೆ ಈ ವರ್ಷ ಗೆಳೆಯರ ಮತ್ತು ಅಭಿಮಾನಿಗಳ ಒತ್ತಾಯದ ಮೇರೆಗೆ ಹುಟ್ಟುಹಬ್ಬವನ್ನು ಅರ್ಥಗರ್ಭಿತವಾಗಿ ಆಚರಿಸಿಕೊಳ್ಳಬೇಕು ಎನ್ನುವ ಹಿನ್ನಲೆಯಲ್ಲಿ ನನಗೆ ನಾನು ಸಂಕಲ್ಪ ಮಾಡಿಕೊಂಡಿದ್ದೇನೆ. ಬಡವರ ಮತ್ತು ಕಾರ್ಮಿಕರ, ಶೋಷಿತರ ಪರವಾದ ನನ್ನ ಚಿಂತನೆಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳುತ್ತೇನೆ ಎಂದರು.
ಶಾಲೆಯ ಮುಖ್ಯೋಪಾಧ್ಯಾಯ ರವಿಕುಮಾರ್ ಅವರು, ಮಾಜಿ ಸಂಸದ ಆಯನೂರು ಮಂಜುನಾಥ್ರವರಿಗೆ ಹುಟ್ಟುಹಬ್ಬದ ಶುಭಾಷಯ ಹೇಳಿದರಲ್ಲದೆ, ತಮ್ಮ ಶಾಲೆಗೆ ದೇಣಿಗೆ ನೀಡಿದ್ದಕ್ಕೆ ಕೃತಜ್ಞತೆ ಅರ್ಪಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶಿ.ಜು.ಪಾಶ, ಜಿ.ಪದ್ಮನಾಭ್, ಹಿರಣ್ಣಯ್ಯ, ಶಾಮ್ಸುಂದರ್ ಎನ್.ಕೆ., ಪಿ.ಟಿ.ಮಂಜಪ್ಪ, ಲಕ್ಷ್ಮಣಪ್ಪ, ಲೋಕೇಶ್, ವೈ.ಹೆಚ್.ನಾಗರಾಜ್, ಧೀರರಾಜ್ ಹೊನ್ನಾವಿಲೆ, ತಿಮ್ಲಾಪುರ ಲೋಕೇಶ್, ಸಂತೋಷ್ ಆಯನೂರು ಸೇರಿದಂತೆ ಹಲವರಿದ್ದರು.