ಶಿವಮೊಗ್ಗ : ಕೆಂಪುಕೋಟೆಯಲ್ಲಿ ನಡೆದ ಉಗ್ರರ ಬಾಂಬ್ ಸ್ಫೋಟ ಘಟನೆ ಖಂಡಿಸಿ ಗೃಹಸಚಿವ ಅಮೀತ್ ಷಾರವರ ರಾಜೀನಾಮೆಗೆ ಒತ್ತಾಯಿಸಿ, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಇಂದು ಗೋಪಿವೃತ್ತದಲ್ಲಿ ಪ್ರತಿಭಟನೆ ನಡೆಸಿ ನಂತರ ಅಮಿತ್ ಷಾಗೆ ಬಳೆಗಳನ್ನು ಅಂಚೆ ಕಚೇರಿ ಮೂಲಕ ಕಳುಹಿಸಿದರು.
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಉಗ್ರರ ದಾಳಿಯಾಗುತ್ತಿದೆ. ಕಾಶ್ಮೀರದ ಕಹಿ ಘಟನೆ ಮರೆಯುವ ಮುನ್ನವೇ ದೇಶದ ರಾಜಧಾನಿ, ಶಕ್ತಿಕೇಂದ್ರ ನವದೆಹಲಿಯ ಕೆಂಪು ಕೋಟೆಯ ಕೂಗಳತೆಯ ದೂರದಲ್ಲಿ ಉಗ್ರರು ಬಾಂಬ್ ಸ್ಫೋಟಿಸಿ ಅಮಾಯಕ ನಾಗರೀಕರು ಪ್ರಾಣ ಕಳೆದುಕೊಂಡಿದ್ದಾರೆ.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್. ರಮೇಶ್ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಪದೇ ಪದೇ ದೇಶದ ಮೇಲೆ ಉಗ್ರರ ದಾಳಿಯಾಗುತ್ತಿದೆ. 2019ರ ಫೆಬ್ರವರಿ 14ರಂದು ಅತ್ಯಂತ ಬಿಗಿಭದ್ರತೆ ಇರುವ ಪ್ರದೇಶಕ್ಕೆ 800 ಕೆ.ಜಿ.ಗೂ ಅಧಿಕ ತೂಕದ ಗ್ರಾನೇಟ್ಗಳನ್ನು ತಂದು ಸೈನಿಕರ ವಾಹನ ಗುರಿಯಾಗಿಸಿ ದಾಳಿ ಮಾಡಲಾಗಿತ್ತು. 22, ಏಪ್ರಿಲ್ 2025ರಂದು ಕಾಶ್ಮೀರದ ಪಹಲ್ಗಾಮ್ನಲ್ಲಿ ಉದ್ಯಾನವನದಲ್ಲಿದ್ದ ನಾಗರೀಕರನ್ನು ಗುರಿಯಾಗಿಸಿಕೊಂಡಿದ್ದ ಉಗ್ರರು ಗುಂಡಿನ ಸುರಿಮಳೆಗೈದು 26 ಅಮಾಯಕ ನಾಗರೀಕರನ್ನು ಹತ್ಯೆಗೈದಿದ್ದರು ಎಂದರು.

ಜವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದಂದಿನಿಂದಲೂ ಇಂತಹ ದಾಳಿಗಳು ಚುನಾವಣಾ ಸಂದರ್ಭದಲ್ಲೇ ನಡೆಯುತ್ತಿವೆ. 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪುಲ್ವಾಮಾ ದಾಳಿ ನಡೆದಿತ್ತು. ನಂತರ ಮಣಿಪುರದಲ್ಲಿ, ಇದೀಗ ಬಿಹಾರ ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ಈ ದಾಳಿ ನಡೆದಿದೆ. ಬಿಹಾರ ಚುನಾವಣೆಯಲ್ಲಿ ಎನ್.ಡಿ.ಎ.ಗೆ ಮುಖಭಂಗವಾಗುವುದು ಖಚಿತ ಎಂದು ಸಮೀಕ್ಷೆಗಳು ಹೇಳಿದ ಬೆನ್ನಲ್ಲೇ ನಿನ್ನೆಯ ದಾಳಿ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದರು.
ರಾಷ್ಟ್ರಪತಿಗಳು ಅಸಮರ್ಥ ಕೇಂದ್ರ ಗೃಹಸಚಿವ ಅಮಿತ್ ಶಾರವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ನಿನ್ನೆಯ ದಾಳಿಯ ತನಿಖೆಯನ್ನು ಪಾರದರ್ಶಕವಾಗಿ ನಡೆಸಬೇಕು. ದೇಶದ ಮತ್ತು ನಾಗರೀಕರ ಸುರಕ್ಷತೆಗಾಗಿ ಉಗ್ರರು ದೇಶದೊಳಗೆ ಪ್ರವೇಶಿಸದಂತೆ ರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸಲು ಕೇಂದ್ರ ಸರ್ಕಾರಕ್ಕೆ ಕಟ್ಟುನಿಟ್ಟಿನ ಆದೇಶ ನೀಡಬೇಕೆಂದು ಈ ಮೂಲಕ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಯುವ ನಾಯಕರಾದ ರಂಗೇಗೌಡರು, ಗಿರೀಶ್, ಮಧುಸೂದನ್, ಯುವ ಕಾಂಗ್ರೆಸ್ ನ ಶಿವಮೊಗ್ಗ ನಗರ ಅಧ್ಯಕ್ಷ ಚರಣ್ ಜಿ. ಶೆಟ್ಟಿ, ಗಿರೀಶ್, ಮಹಮ್ಮದ್ ಗೌಸ್, ಅಬ್ದುಲ್, ಆಕಾಶ್, ಅನಿಲ್, ಗೌತಮ್, ರವಿ, ಲಿಂಗರಾಜು, ಥೌಪಿಕ್ ನೂರಾರು ಯುವಕರು ಇದ್ದರು.