ಶಿವಮೊಗ್ಗ : ಕಾಂಗ್ರೆಸ್ ಸರ್ಕಾರದಲ್ಲಿ ಸೆರೆಮನೆಗಳು ಅರಮನೆಯಂತ್ತಾಗಿವೆ. ಸರ್ಕಾರ ಜೈಲು ಸುಧಾರಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಗೃಹಮಂತ್ರಿ ಅರಗಜ್ಞಾನೇಂದ್ರ ಆರೋಪಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜೈಲುಗಳೇಂದರೆ ಅಪರಾಧಿಗಳ ವಿಶ್ರಾಂತಿ ತಾಣಗಳಾಗಿವೆ. ಅಷ್ಟೇ ಅಲ್ಲ ಉಗ್ರರಿಗೆ ಆಶ್ರಯಕೊಡುವ ಶ್ರೀಮಂತ ಮನೆಗಳಂತ್ತಾಗಿವೆ. ಇದಕ್ಕೆ ಉದಾಹರಣೆ ಎಂದರೆ ಪರಪ್ಪನ ಆಗ್ರಹಾರದಲ್ಲಿ ನಡೆದ ಘಟನೆ. ಇಲ್ಲಿ ನಟೋರಸ್ ಖೈದಿಗಳು ಪಾರ್ಟಿ ಮಾಡುತ್ತಾರೆ. ಕುಡಿಯುತ್ತಾರೆ, ಕುಣಿದು ಕುಪ್ಪಳಿಸುತ್ತಾರೆ. ಅದರ ವಿಡಿಯೋ ದೃಶ್ಯಗಳು ಈಗ ಎಲ್ಲ ಕಡೆ ಬಹಿರಂಗ ಆಗಿವೆ. ಆದರೂ ಕೂಡ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಗೃಹಮಂತ್ರಿಗಳು ನನ್ನ ಗಮನಕ್ಕೆ ಬಂದಿಲ್ಲ ಎಂಬ ಆರಕೆ ಉತ್ತರ ಕೊಡುತ್ತಾರೆ ಎಂದು ದೂರಿದರು.

ಜೈಲುಗಳು ಅಪರಾಧಿಗಳ ಮನಪರಿವರ್ತನೆಗೆ ಮುಂದಾಗಬೇಕು. ಆದರೆ ಇಲ್ಲಿ ಆರೋಪಿಗಳಿಗೆ ಯಾವ ಭಯವು ಇಲ್ಲ, ಏನೂ ಬೇಕಾದರೂ ಮಾಡಬಹುದು ಎಂಬ ಭಾವನೆ ಬೆಳೆದುಬಿಟ್ಟಿದೆ. ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ ಉಮೇಶ್ರೆಡ್ಡಿಯಂತಹ ಕುಖ್ಯಾತ ರೌಡಿಯ ಬ್ಯಾರಕ್ನಲ್ಲಿ ಕಲರ್ ಟಿವಿ ಎಂದರೆ ಏನೂ ಅರ್ಥ. ಎಲ್ಲಿಗೆ ಬಂದಿದೆ ನಮ್ಮ ಜೈಲಿನ ಸ್ಥಿತಿಗಳು. ಗೃಹ ಇಲಾಖೆ ಸಂಪೂರ್ಣ ನಿಷ್ಕ್ರೀಯವಾಗಿದೆ ಎಂದರು.
ಮೊಬೈಲ್ಗಳು ಸರಾಗವಾಗಿ ಖೈದಿಗಳ ಕೈಗೆ ಸಿಗುತ್ತವೆ. ಟಿವಿಯಂತ್ತಾಹ ದೊಡ್ಡ ವಸ್ತುಗಳೇ ಜೈಲಿನೊಳಗೆ ಸಾಗಿಸಲಾಗುತ್ತಿದೆ ಎಂದರೆ ಅರ್ಥ ಮಾಡಿಕೊಳ್ಳಬೇಕು. ಇನ್ನೂ ಗಾಂಜಾ, ಹೆಂಡ, ಇವೆಲ್ಲವೂ ಅಲ್ಲಿನ ಅಧಿಕಾರಿಗಳ ಮೂಲಕವೇ ಕೈದಿಗಳಿಗೆ ನೇರವಾಗಿ ಹೋಗುತ್ತವೆ. ಖೈದಿಗಳು ತಿದ್ದು ಉಂಡು, ಕುಣಿದು ಆರಾಮವಾಗಿ ಇರುತ್ತಾರೆ ಎಂದರೆ ಈ ಸರ್ಕಾರಕ್ಕೆ ನಾಚಿಕೆಯಾಗಬೇಕು. ಸುಪ್ರೀಂ ಕೋರ್ಟ್ ಕೂಡ ಈ ಬಗ್ಗೆ ಛೀಮಾರಿಯಾಕಿದೆ. ಆದರೂ ಕೂಡ ಸರ್ಕಾರಕ್ಕೆ ಬುದ್ದಿ ಬಂದಿಲ್ಲ ಎಂದರು.

ಜೈಲಿನ ಸುತ್ತಮುತ್ತ ಮೊಬೈಲ್ಗಳು ಕೆಲಸ ಮಾಡದಂತ್ತೆ ಜಾಮರ್ ಅಳವಡಿಸಲು ನಾನು ಗೃಹಮಂತ್ರಿಯಾಗಿದ್ದಾಗ ತೀರ್ಮಾನಿಸಿದ್ದೆ, ಜೈಲು ಸುಧಾರಣೆಗೆ ಹಲವು ಖಾಯ್ದೆಗಳನ್ನು ಕೂಡ ರೂಪಿಸಿದ್ದೆವು. ಜೈಲಿನಲ್ಲಿ ದೇಶದ್ರೋಹಿಗಳು ಇದ್ದಾರೆ. ಅತ್ಯಾಚಾರಿಗಳು ಇದ್ದಾರೆ, ಇವರಿಗೆಲ್ಲ ರಾಜಾತಿಥ್ಯ ದೊರೆಯುತ್ತದೆ ಎಂದರೆ ಸರ್ಕಾರ ಕಣ್ಣು ಮುಚ್ಚಿ ಕುಳಿತುಕೊಳ್ಳಬಾರದು. ಇದಕ್ಕೆ ಸಹಕಾರ ನೀಡಿದ ಜೈಲು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನೀವು ಗೃಹಮಂತ್ರಿಯಾಗಿದ್ದಾಗಲೂ ಜೈಲಿನಲ್ಲಿ ಈ ರೀತಿಯ ಘಟನೆಗಳು ನಡೆದಿದ್ದವಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ನಮ್ಮ ಸರ್ಕಾರ ಇದ್ದಾಗಲೂ ಕೂಡ ಕೆಲವು ಘಟನೆಗಳು ನಡೆದಿವೆ. ಇಲ್ಲ ಎನ್ನುವುದಿಲ್ಲ. ಆದರೆ ನಾವು ಇಂತಹ ಘಟನೆಗಳು ಆದಾಗ ಎಚ್ಚೆತ್ತುಕೊಂಡು ಅದನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದೆವು. ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿದ್ದೆವು. ಇಂತಹ ಘಟನೆಗಳು ನಡೆಯದಂತ್ತೆ ಕ್ರಮ ತೆಗೆದುಕೊಂಡಿದ್ದೆವು. ಆದರೆ ಈ ಸರ್ಕಾರ ಈ ಕೆಲಸ ಮಾಡುತ್ತಿಲ್ಲ. ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.
ವಾಟ್ಸಾಪ್ ಡಿಪಿಯಲ್ಲಿ ವೀರಸಾವರ್ಕರ್ ಅವರ ಪೋಟೋ ಹಾಕಿಕೊಂಡಿದ್ದಕ್ಕೆ ವ್ಯಕ್ತಿಯೊಬ್ಬ ಜೀವ ಬೆದರಿಕೆ ಹಾಕಿರುವುದು ಅತ್ಯಂತ ಖಂಡನೀಯ. ಪೊಲೀಸರು ಜೀವ ಬೆದರಿಕೆ ಹಾಕಿದ ವ್ಯಕ್ತಿಯನ್ನು ಪತ್ತೆ ಹಚ್ಚಬೇಕು. ಸುಮೊಟೋ ಕೇಸ್ನ್ನು ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಚನ್ನಬಸಪ್ಪ, ಡಾ.ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಮಾಲತೇಶ್, ಕೆ.ವಿ.ಅಣ್ಣಪ್ಪ ಇದ್ದರು.