
ನಾಟ್ಕ ಮಾಡ್ತಾ ಪಕ್ಕದಲ್ಲಿದ್ದೋರಿಗೆ ತುಳಿ ಯೋದೇ ಬೌದ್ದಿಕತೆಯಾ ..?
ನೆಗಿಟೀವ್ ಥಿಂಕಿಂಗ್
ವಾರದ ಅಂಕಣ- 62
ಗಜೇಂದ್ರಸ್ವಾಮಿ ಎಸ್.ಕೆ., ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)
ಈ ಜಗತ್ತು ಹೇಗಿದೆ ಎಂದರೆ ಸ್ವಯಂಘೋಷಿತ ಬುದ್ಧಿವಂತರಂತೆ ಆಳುವ ಕೆಲವೇ ಕೆಲವರ ವರ್ತನೆ ಹೇಗಿದೆ ಎಂದರೆ ಇನ್ನೊಬ್ಬರ ಫೇಸ್ ವ್ಯಾಲ್ಯೂ ವನ್ನು ಅಳತೆ ಮಾಡುವ ಮಟ್ಟಕ್ಕಿರುತ್ತದೆ. ಅವರ ಗುಣಮಟ್ಟ ಹಾಗೂ ನೈತಿಕ ಬುದ್ಧಿವಂತಿಕೆ, ಬೌದ್ಧಿಕಮಟ್ಟ ಅತ್ಯಂತ ನಿಕೃಷ್ಟವಾಗಿದ್ದರೂ ಸಹ ಅದನ್ನು ತೋರಿಸಿಕೊಳ್ಳದೆ ತಾವು ದೊಡ್ಡ ಪಂಡಿತರು ಎಂಬತಾಡುವ ಕೆಲವೇ ಕೆಲವರ ವರ್ತನೆ ನಿಜಕ್ಕೂ ಈ ಸಮಾಜದಲ್ಲಿ ಅತ್ಯಂತ ದುರಂತದ ವಿಷಯವೇ ಹೌದು. ಫೇಸ್ ವ್ಯಾಲ್ಯೂ ಅಂದರೇನು ಎಂಬುದೇ ಈ ವಾರದ ನೆಗೆಟಿವ್ ಥಿಂಕಿಂಗ್ ಅಂಕಣದ ವಿಷಯ.

ನಮ್ಮ ವ್ಯಕ್ತಿತ್ವವನ್ನು ಅಳತೆ ಮಾಡುವುದು ನಾವು ಬದುಕುವ ಹಾಗೂ ನಾವು ಸಮಾಜವನ್ನು ಹಂಚಿಕೊಳ್ಳುವ, ಸಮಾಜದೊಂದಿಗೆ ಬೆರೆಯುವ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ಕೆಲವರಿಗೆ ಹೊರಗೆ ಒಂದು ತರ ಇರುವ ಮನೋಭಾವನೆ ಇದ್ದರೆ, ಒಳಗೊಳಗೆ ಕಿರಿಕಿನ ಹಾಗೂ ತನ್ನ ಜೊತೆಗಿರುವವರು ಬೆಳೆಯಬಾರದು ಎಂಬ ದುರುದ್ದೇಶ ಬಂದಿರುವುದು ಈ ಸಮಾಜದಲ್ಲಿ ಬಹಳಷ್ಟು ಕಡೆ ಕಂಡುಬರುತ್ತದೆ.
ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಕುರಿತು ಮಾತನಾಡುವಾಗ ತನ್ನ ಒಳ ಮನದ ಮೋಸಗಳು, ವಂಚನೆಗಳು, ಅನ್ಯಾಯಗಳು, ಪಕ್ಕದಲ್ಲಿ ನಿಂತು ಬೆನ್ನಿಗೆ ಚೂರಿ ಹಾಕಿದ ಅನ್ಯಾಯಗಳು ನೆನಪಾಗುವುದಿಲ್ಲವೇ?

ನಾನೊಬ್ಬನೇ ಮಹಾತ್ಮ ಎಂದು ಉಳಿದವರೆಲ್ಲ ತನ್ನ ಕೆಳಗಿನವರೆಂದು ಅಂದುಕೊಳ್ಳುವ ಕೆಲವೇ ಕೆಲವು ದುರಾತ್ಮ ಮನಸುಗಳು ಇಂದಿನ ಸಮಾಜದ ಸ್ವಸ್ಥ ಮನಸ್ಸುಗಳನ್ನು ನಿಜಕ್ಕೂ ಕುದಿಯುವಂತೆ ಮಾಡುತ್ತಿರುವುದು ದುರಂತವೇ ಹೌದು.
ಸಂಪನ್ನನಿಗೆ ಸಿಟ್ಟು ಬರಬಾರದು ಎಂಬ ಗಾದೆಯನ್ನು ಕೇಳಿದ್ದೀರಲ್ಲವೇ? ಯಾಕೆ ಸಿಟ್ಟು ಬರುತ್ತದೆ ಎಂದರೆ ಇಂತಹ ಕೆಲವೇ ಕೆಲವು ಸ್ವಯಂಘೋಷಿತ ನಾಟಕ ಮಾಡುವವರ ಪಕ್ಕದಲ್ಲಿ ನಿಂತು ಇನ್ನೊಬ್ಬರನ್ನು ತುಳಿಯುತ್ತಾ ತನ್ನ ಸಾಮ್ರಾಜ್ಯವನ್ನು ಕಟ್ಟಿಕೊಂಡೆ ಎಂದು ಇಲ್ಲದ ಸಾಮ್ರಾಜ್ಯಕ್ಕೆ ತಾನೇ ರಾಜ ಎಂಬತಾಡುವ ಮನೋಸ್ಥಿತಿ ಎಂದರೆ ತಪ್ಪಾಗಲಿಕ್ಕಿಲ್ಲ ಅಲ್ಲವೇ?

ಬೌದ್ಧಿಕ ಗುಣಮಟ್ಟವನ್ನು ಪ್ರಶ್ನಿಸುವ ಹಕ್ಕು ಯಾರಿಗಿದೆ? ಬೌದ್ಧಿಕ ದಾರಿದ್ರ್ಯತನ ಎಂದು ಯಾರ್ಯಾರಿಗೋ ಮಾತನಾಡುವ ಕೆಲ ಮನುಷ್ಯರಿಗೆ ನಾಲ್ಕು ಕನ್ನಡದ ಕ್ಲಿಷ್ಟ ಪದಗಳನ್ನು ಕಂಠಪಾಠ ಮಾಡಿಕೊಂಡ ನೆನಪಿರುತ್ತದೆ ಅಷ್ಟೇ.
ಹೇಳಿದರೆ ವೇದಾಂತ ಹೇಳುತ್ತೇನೆ ಎಂದು ಹೇಳುವುದನ್ನು ಕೇಳಬೇಕೆಂಬ ಆರ್ಡರ್ ನೊಂದಿಗೆ ಕೈಕಟ್ಟಿಕೊಂಡು ಕುಳಿತುಕೊಳ್ಳುವ ವ್ಯಕ್ತಿಗಳು ಪಾಪ ಈಗಲೂ ಅನೇಕರಿದ್ದಾರೆ. ಅದೇ ಅವರಿಗೆ ತೊಂದರೆ ಎಂದು ತಿಳಿಯುವಷ್ಟರಲ್ಲಿ ಮಾತಾನಾಡುವವ ಮೆರೆದಾಡಿರುತ್ತಾನಷ್ಟೆ.








ಈ ಸ್ವಯಂ ಘೋಷಿತ ಬುದ್ಧಿವಂತರು ಫೇಸ್ ವ್ಯಾಲ್ಯೂ ಯೋಚಿಸುವುದು ಮೂರಾಬಟ್ಟೆ ಆಗುವುದು ಖಚಿತವಲ್ಲವೇ?
ತಮ್ಮ ತಮ್ಮ ಅವಶ್ಯಕತೆಗಳಿಗೆ ಹೇಗೆ ಬದುಕಬೇಕು ಹಾಗೆ ಬದುಕನ್ನು ಕಟ್ಟಿಕೊಂಡು ಅವರಷ್ಟಕ್ಕೆ ಅವರಿದ್ದರೂ ಸಹ ಅವರ ಮಧ್ಯೆ ಕಡ್ಡಿ ಆಡಿಸುತ್ತಾ ಹಾಗೆ ಹೀಗೆ ಎಂದು ಎದುರಿಗೆ ಹೇಳುತ್ತಾ, ಒಳಗೊಳಗೆ ಕುದಿ ಮನಸು ಹೊಂದಿರುವ ವ್ಯಕ್ತಿಯಿಂದ ಈ ಸಮಾಜಕ್ಕೆ ಸಿಗುವ ನ್ಯಾಯವಾದರೂ ಎಲ್ಲಿ?

ಅಂತವರಿಂದ ಆಗುವ ಒಳ್ಳೆಯದಾದರೂ ಯಾವುದು? ಒಳಗೊಂದು ಮನಸ್ಸು ಹಾಗೂ ಹೊರಗೊಂದು ಬಗೆಯ ಅಭಿಪ್ರಾಯ ಎಂಬಂತಾಡುವ ನಯವಂಚಕ ಮನಸ್ಸುಗಳಿಗೆ ಕಡಿವಾಣ ಬೀಳಬೇಕಿರುವುದು ಅತ್ಯಗತ್ಯವಲ್ಲವೇ?
ಅವರ ಅಭಿಪ್ರಾಯಕ್ಕೆ ವಿರುದ್ಧವಾಗಿ ವರ್ತಿಸಿದಾಗ ಬೌದ್ಧಿಕ ದಾರಿದ್ರ್ಯತನ ಎಂದು ದೊಡ್ಡ ವೇದಾಂತಿಯಂತಾಡುವರ ನಯ ವಂಚಕ ಮನಸ್ಸುಗಳು ಈ ಸಮಾಜದ ಒಂದು ಕಪ್ಪು ಚುಕ್ಕೆಯೇ ಹೌದು.
ಒಳ್ಳೆಯದು ಬಂದರೆ ನನಗೆ ಬರಬೇಕು, ಕೆಟ್ಟದ್ದಾದರೆ ಪಕ್ಕದವನಿಗೆ ಆಗಬೇಕು ಎಂದು ಯೋಚಿಸುವ ನಿಕೃಷ್ಟ ಮನಸ್ಸುಗಳಿಗೆ ಪಾಠ ಕಲಿಸುವವರಾರು? ಹೇಳಿದರೂ ಕೇಳದಂತೆ ಥೂ ಎಂದು ಪ್ಯಾಂಟಿಗೆ ಹತ್ತಿದ್ದ ಕೊಳೆಯನ್ನು ಕೊಡವಿಕೊಳ್ಳಬೇಕಷ್ಟೆ. ಏಕೆಂದರೆ ಬಹಳಷ್ಟು ಜನರಿಗೆ ಈ ಸಮಾಜದ ಗಲೀಜಿನ ಜೊತೆ ಕೊಳಕಿನ ಜೊತೆ ವ್ಯಾಜ್ಯವಾಡುವ ಮನಸಿರುವುದಿಲ್ಲ ಅಲ್ಲವೇ?

ಸ್ವಯಂಘೋಷಿತ ಬುದ್ಧಿವಂತ ಹಾಗೂ ಸ್ವಯಂಘೋಷಿತ ರಾಜ, ಇಲ್ಲವೇ ಮಂತ್ರಿ ಎಂಬತಾಡುವ ವ್ಯಕ್ತಿಯಿಂದ ದೂರವಿರುವ ಮನೋಭಾವ ಒಳ್ಳೆಯದಲ್ಲವೇ? ಪಕ್ಕದಲ್ಲಿ ನೂರಾರು ಜನರಿದ್ದಾರೆ ಎಂದು ಬೀಗುವವರು ಆ ಜನರಲ್ಲಿ ಎಷ್ಟು ಜನರ ಮನಸು ನಿಮ್ಮೊಂದಿಗೆ ಇದೆ ಎಂದು ಯೋಚಿಸಿ. ಮುಗ್ಧತೆಯನ್ನು ಬಳಸಿಕೊಂಡು ಸಾಮ್ರಾಜ್ಯ ಕಟ್ಟಿ ಕೊಂಡರೆ ಆ ಮುಗ್ಧತೆ ಒಂದಲ್ಲ ಒಂದು ದಿವಸ ತಿರುಗಿಬೀಳುತ್ತೆ. ಅದಕ್ಕೆ ಹೇಳುವುದು ಕನ್ನಡದ ಒಂದಿಷ್ಟು ಕಠಿಣ ಪದಗಳು ಕೇವಲ ಕಲಿಕೆಗೆ ಸೀಮಿತವಾಗಲಿ, ಅದು ಬದುಕಿಗೆ ಅಳವಡಿಕೆ ಆಗದಿರಲಿ. ತಾನು ಸರಿಯಾಗಿದ್ದು ಇನ್ನೊಬ್ಬರ ಸರಿ ತಪ್ಪುಗಳ ಬಗ್ಗೆ ಹೇಳುವುದು ಒಳ್ಳೆಯದಲ್ಲವೇ? ಅಂತಹ ಬುದ್ಧಿ ಇನ್ನು ಮೇಲಾದರೂ ನಮ್ಮ ಸಮಾಜದಲ್ಲಿ ಇರುವಂತಹ ಕೆಲವೇ ಕೆಲವರಿಗೆ ಬರಲಿ ಎಂಬುದು ಆಶಯವಲ್ಲವೇ?