ಶಿವಮೊಗ್ಗ,ನ.06:
ಪ್ರಸಕ್ತ ಶಿವಮೊಗ್ಗ ಹೊರವಲಯವಾಗಿರುವ ಸಂತೆ ಕಡೂರಿನ ನಿವಾಸಿ ವಿಜಯಕುಮಾರ್ (ದನಿ) ಅವರು ಕಳೆದ 35 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತರಾಗಿ ಸೇವೆ ಸಲ್ಲಿಸಿದರ ಫಲವೆಂಬಂತೆ ಮತ್ತೆ ಈ ಬಾರಿಯೂ ಹಾಪ್ ಕಾಮ್ಸ್ ಅಧ್ಯಕ್ಷರಾಗಲು ಅವಕಾಶ ಸಿಕ್ಕಿದೆ.
ಕಳೆದ ಬಾರಿಯೂ ಹಾಪ್ ಕಾಮ್ಸ್ ಅಧ್ಯಕ್ಷರಾಗಿದ್ದ ವಿಜಯಕುಮಾರ್ ಈ ಬಾರಿಯೂ ಮತ್ತೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ರೈತರ ಕಷ್ಟ ಸುಖಗಳಲ್ಲಿ ಭಾಗಿಯಾಗುವ ಮೂಲಕ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಅಷ್ಟೇ ಅಲ್ಲದೇ ಜಿಲ್ಲೆಯಲ್ಲಿ ಹಾಗೂ ರಾಜ್ಯದ ಹಲವು ಪ್ರಭಾವಿ ನಾಯಕರುಗಳ ಆತ್ಮೀಯರಾಗಿರುವ ವಿಜಯ್ ಕುಮಾರ್ ಸಾಕಷ್ಟು ಸಂಘ ಸಂಸ್ಥೆಗಳಲ್ಲಿ, ಸೊಸೈಟಿಗಳಲ್ಲಿ ಕೆಲಸ ಮಾಡಿದ್ದಾರೆ.
ಅವರ ಪತ್ನಿ ವೇದಾ ವಿಜಯಕುಮಾರ್ ಅವರನ್ನು ಜಿಲ್ಲಾ ಪಂಚಾಯತ್ ಕಣಕ್ಕಿಳಿಸಲು ನಿರ್ಧರಿಸಿದಾಗ ಕಾಂಗ್ರೆಸ್ ಪಕ್ಷದ ಟಿಕೆಟ್ ದೊರಕದಿದ್ದ ಸಂದರ್ಭದಲ್ಲಿ ಅನ್ಯ ಪಕ್ಷಗಳು ಅವರಿಗೆ ಟಿಕೆಟ್ ನೀಡುವ ಭರವಸೆ ಕೊಟ್ಟಿದ್ದವು. ಆದರೆ ಅದನ್ನು ಲೆಕ್ಕಿಸದೆ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಿಸಿ ಗೆಲ್ಲಿಸಿದ ವಿಶೇಷ ಕೀರ್ತಿ ವಿಜಯಕುಮಾರ್ ಹಾಗೂ ಅವರ ಗೆಳೆಯರ ಬಳಗಕ್ಕೆ ಸಲ್ಲುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ. ನಂತರದ ಬೆಳವಣಿಗೆಯಲ್ಲಿ ವೇದಾ ವಿಜಯಕುಮಾರ್ ಅವರು ಕಾಂಗ್ರೆಸ್ ಪಕ್ಷ ಸೇರಿದ್ದಲ್ಲದೇ, ಮುಂದಿನ ಐದೂ ವರುಷ ಜಿ.ಪಂ. ಉಪಾಧ್ಯಕ್ಷರಾಗಿದ್ದರು.

ವಿಜಯಕುಮಾರ್ ಅವರು 1990ರಲ್ಲಿ ಅಂದು ದೂರವೆನಿಸುತ್ತಿದ್ದ ಹಳ್ಳಿ ಪ್ರದೇಶದ ಸಂತೆಕಡೂರಿನಲ್ಲಿ ಇದ್ದು ಯುವ ಕಾಂಗ್ರೆಸ್ ಗೆ ಸೇರ್ಪಡೆ ಹೊಂದಿ 11 ವರ್ಷಗಳ ಕಾಲ ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು. ನಂತರ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದು ಅವರು ಈಗಾಗಲೇ ಎಪಿಎಂಸಿ, ಕೆಪಿಟಿಸಿಎಲ್ ನಿರ್ದೇಶಕರಾಗಿದ್ದರು.
ಈ ಬಾರಿ ಮೂರನೇ ಅವಧಿಯಲ್ಲಿ ಮತ್ತೆ ಹಾಪ್ ಕಾಮ್ಸ್ ಅಧ್ಯಕ್ಷರಾಗಿದ್ದು, ಹಿಂದೆ ನಗರಪಾಲಿಕೆಯ ಗುತ್ತಿಗೆದಾರರ ಸಂಘದ ಅಧ್ಯಕ್ಷರೂ ಆಗಿದ್ದರು. ಹಾಲಿ ಜಿಲ್ಲಾ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರಾಗಿರುವ ವಿಜಯ್ ಕುಮಾರ್ ಪಿಎಲ್ಡಿ ಬ್ಯಾಂಕ್ ನಲ್ಲಿ ಮೂರು ಬಾರಿ ಉಪಾಧ್ಯಕ್ಷರಾಗಿ, ಒಂದು ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಸಾಧನೆ ಹಾದಿಯಲ್ಲಿ ಒಂದಿಷ್ಟು ಹೊಸ ಹೆಜ್ಜೆ ಇಡುವ ವಿಜಯಕುಮಾರ್ ರಿಗೆ ಮತ್ತೆ ಹಾಪ್ ಕಾಮ್ಸ್ ಅಧ್ಯಕ್ಷರಾಗಿದ್ದು, ಅವರು ರೈತರ ಹಾಗೂ ತರಕಾರಿ ಇತರೆ ಬೆಳೆಗಾರರ ಅನುಕೂಲತೆಗೆ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಲಿ ಎಂಬುದು ಎಲ್ಲರ ಆಶಯ.