ಶಿವಮೊಗ್ಗ : ಪ್ರಸ್ತಾವಿತ ಬಹುಕೋಟಿ ಅಂದಾಜಿನ ಪರಿಸರ ಮಾರಕ ಶರಾವತಿ ಪಂಪ್ಡ್ ಸ್ಟೊರೆಜ್ ಯೋಜನೆಯನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾದ್ಯವಿಲ್ಲ. ಸದರಿ ಯೋಜನೆಯನ್ನು ತಕ್ಷಣ ಹಿಂಪಡೆಯದಿದ್ದರೆ ಶಿವಮೊಗ್ಗ ಮತ್ತು ಉತ್ತರ ಕನ್ನಡದ ಜನರು ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಪರಿಸರ ಹೋರಾಟಗಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಳಿ, ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್)ದ ಅಧಿಕಾರಿಗಳು ಇತ್ತೀಚೆಗೆ ಶಿವಮೊಗ್ಗ, ಸಾಗರ, ಹೊನ್ನಾವರ, ಕಾರವಾರ ಮೊದಲಾದೆಡೆ ಪತ್ರಿಕಾ ಸಂವಾದ ನಡೆಸಿ ಪಂಪ್ಡ್ ಸ್ಟೋರೆಜ್ ಯೋಜನೆಯಿಂದ ಪರಿಸರಕ್ಕಾಗಲೀ, ಸಾರ್ವಜನಿಕರಿಗಾಗಲೀ, ವನ್ಯಜೀವಿಗಳಿಗಾಗಲೀ ಯಾವುದೇ ಹಾನಿ ಆಗುವುದಿಲ್ಲ ಎಂದು

ಪುಂಖಾನುಪುಂಖವಾಗಿ ಸುಳ್ಳು ಹೇಳಿ ಸಾರ್ವಜನಿಕರ ದಿಕ್ಕು ತಪ್ಪಿಸಿದ್ದಾರೆ. ೧೯೭೨ ವನ್ಯಜೀವಿ ಕಾಯ್ದೆಯ ಕಲಂ ೨೯ರ ಪ್ರಕಾರ ದೇಶದ ಯಾವುದೇ ವನ್ಯ ಜೀವಿ ಧಾಮದ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯ ಹಮ್ಮಿಕೊಳ್ಳಬಾರದೆಂದಿದೆ. ಆದರೆ ಅಳಿವಿನಂಚಿನಲ್ಲಿರುವ ಸಿಂಗಳೀಕ ಇರುವ ಅಭಯಾರಣ್ಯದ ಮಧ್ಯದಲ್ಲಿಯೇ ಪ್ರಸ್ತಾವಿತ ಯೋಜನೆಗೆ ೫೪ ಹೆಕ್ಟೇರ್ ಕಾಡು ಕಡಿಯಲೇಬೇಕಾದ ವಿಷಯವನ್ನು ಅಧಿಕಾರಿಗಳು ಮರೆಮಾಚಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಲಿ ನಡೆಯುತ್ತಿರುವ ಮಾನವ-ಪ್ರಾಣಿ ಸಂಘರ್ಷಕ್ಕೆ ಅರಣ್ಯ ಇಲಾಖೆಯ ಧೋರಣೆಯೇ ಕಾರಣವಾಗಿದೆ. ಅರಣ್ಯೇತರ ಉದ್ಧೇಶಗಳಿಗೆ ಅರಣ್ಯ ಪ್ರದೇಶವನ್ನು ಬಳಸಲು ಅನುಮತಿ ಕೋರಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ವಿನಂತಿಸಿದೆ. ಯಾವುದೇ ಕೃಷಿ ಭೂಮಿಯನ್ನೂ ಯೋಜನೆಗೆ ಬಳಸಿಕೊಳ್ಳುವುದಿಲ್ಲ ಎಂದು ಹೇಳಿರುವ ಅಧಿಕಾರಿಗಳು ಹೊನ್ನಾವರ ಭಾಗದಲ್ಲಿ ತಹಶೀಲ್ದಾರರ ಮೂಲಕ ೪೬ ಜನರಿಗೆ ನೋಟಿಸ್ ನೀಡಿದೆ. ಭೂಮಿಯಡಿ ೧೦ ಮೀಟರ್ ವ್ಯಾಸದ ಸುರಂಗವನ್ನು ನಿರ್ಮಿಸಲಾಗುವುದು. ಅದಕ್ಕೆ ೧೮,೦೦೦ ಟನ್ ಸ್ಫೋಟಕವನ್ನು ಬಳಸಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ ಮಾಧ್ಯಮ ಸಂವಾದದಲ್ಲಿ ಇದನ್ನು ಕೇವಲ ೧೦೦೮ ಟನ್ ಬಳಸಲಾಗುವುದು ಎಂದು ಅಧಿಕಾರಿಗಳು ಸುಳ್ಳು ಹೇಳಿದ್ದಾರೆ. ಇದರಿಂದ ಉಂಟಾಗುವ ೧೨ ದಶಲಕ್ಷ ಟನ್ ವಿಷಕಾರಿ ಪದಾರ್ಥವನ್ನು ನದಿಯ ಪಕ್ಕ

ಶೇಖರಿಸಲಾಗುತ್ತದೆ. ಕ್ರಮೇಣ ಇದು ನದಿ ಮೂಲಕ ಸಮುದ್ರವನ್ನು ಸೇರುತ್ತದೆ. ಇದರಿಂದ ಉಂಟಾಗುವ ಮಾನವ ಹಾಗೂ ಪರಿಸರ ಹಾನಿಯ ಬಗ್ಗೆ ಅಧಿಕಾರಿಗಳು ಚಕಾರ ಶಬ್ಧ ಹೇಳಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ವಿದ್ಯುತ್ ಪ್ರಸರಣಕ್ಕೆ ಖಚಿತವಾಗಿ ಎಷ್ಟು ಅಗಲದ ಜಾಗ ಬೇಕು ಎಂಬುದಕ್ಕೆ ಮಾಹಿತಿಹಕ್ಕು ಮೂಲಕ ಕೇಳಿದರೂ ಸರಿಯಾದ ಉತ್ತರ ಸಿಗಲಿಲ್ಲ. ಅಧಿಕಾರಿಗಳು ಯೋಜನೆಯ ಬಗ್ಗೆ ಸುಳ್ಳು ಹೇಳುವುದರ ಮೂಲಕ ಹೋರಾಟಗಾರರ ಅವಹೇಳನ ಮಾಡಿದ್ದಾರೆ ಎಂದು ದೂರಿದರು.
ಧಾರಾವಾಡದ ಐಐಟಿ ಸಂಸ್ಥೆಯ ಪರಿಸರ ಸಲಹಾ ಮಂಡಳಿ ಸದಸ್ಯ ಡಾ.ಎಲ್.ಕೆ. ಶ್ರೀಪತಿ ಮಾತನಾಡಿ, ಕೆಪಿಸಿಎಲ್ ಅಧಿಕಾರಿಗಳು ಪತ್ರಿಕಾ ಸಂವಾದದಲ್ಲಿ, ಪಂಪ್ಡ್ ಸ್ಟೋರೇಜ್ ಯೋಜನೆಯ ವ್ಯಾಪ್ತಿಯಲ್ಲಿ ಕಾಡು ಕಡಿಯುವ ಸ್ಥಳದಲ್ಲಿ ವನ್ಯಜೀವಿಗಳ ಸಂಚಾರಕ್ಕೆ ಟ್ರೀ-ಕೆನೋಪಿ ನಿರ್ಮಿಸುವುದಾಗಿ ಹೇಳಿದ್ದಾರೆ. ಆದರೆ ಯಾವ ಪ್ರಾಣಿಗಳು ಈ ಟ್ರೀ-ಕೆನೋಪಿಯಲ್ಲಿ ಸಂಚರಿಸುತ್ತವೆ ಎಂಬುದನ್ನು ಇಲಾಖೆಯವರು ಅಧ್ಯಯನ ನಡೆಸಿದ್ದಾರಾ ? ಎಂದು ಪ್ರಶ್ನಿಸಿದರಲ್ಲದೆ ಜಗತ್ತಿನ ಯಾವ ಸ್ಥಳಗಳಲ್ಲಿಯೂ ಇಂತಹ ಕೆನೋಪಿ ಇಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಿರುವ ವಿದ್ಯುತ್ ಪ್ರಸರಣ ಮಾರ್ಗದಲ್ಲಿಯೇ ಪಂಪ್ಡ್ ಸ್ಟೋರೇಜ್ ವಿದ್ಯುತ್ತನ್ನು ಕೊಂಡೊಯ್ಯಲಾಗುವುದು ಎಂಬು ಇನ್ನೊಂದು ಸುಳ್ಳನ್ನು ಅಧಿಕಾರಿಗಳು ಹೇಳಿದ್ದಾರೆ. ವಾಸ್ತವವಾಗಿ ಈಗಿರುವ ಮಾರ್ಗದಲ್ಲಿಯೇ ಹೆಚ್ಚುವರಿ ವಿದ್ಯುತ್ತನ್ನು ಸಾಗಿಸಬೇಕೆಂದರೆ ಸುರಕ್ಷತಾ ದೃಷ್ಟಿಯಿಂದ ಸಾಗಾಣಿಕೆ ಕಾರಿಡಾರನ್ನು ವಿಸ್ತರಿಸಲೇಬೇಕು ಎಂಬುದನ್ನು ಅಧಿಕಾರಿಗಳು ಮುಚ್ಚಿಟ್ಟಿದ್ದಾರೆ. ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಭೂಕುಸಿತವೇ ಆಗಿಲ್ಲ ಎಂಬ ಮತ್ತೊಂದು ಸುಳ್ಳನ್ನು ಅಧಿಕಾರಿಗಳು ಹೇಳಿದ್ದಾರೆ. ಬ್ಯಾಟರಿ ಸ್ಟೋರೇಜ್ ಬಗ್ಗೆಯೂ ಅಧಿಕಾರಿಗಳು ಸುಳ್ಳುಹೇಳಿ ಜನರ ದಿಕ್ಕನ್ನು ಬದಲಿಸಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಗರಂ ಆದರು.
ಅಜಯ್ಕುಮಾರ್ ಶರ್ಮಾ ಮಾತನಾಡಿ, ಯೋಜನಾ ಪ್ರದೇಶದಲ್ಲಿ ಇತಿಹಾಸ ಪ್ರಸಿದ್ಧ ಚನ್ನಭೈರಾದೇವಿಯ ರಾಜಧಾನಿ ಪ್ರದೇಶವಿದೆ. ಅನೇಕ ಸ್ಮಾರಕಗಳು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ(ಎಎಸ್ಐ)ದ ಸಂರಕ್ಷಿತ ಸ್ಮಾರಕಗಳ ಪಟ್ಟಿಯಲ್ಲಿವೆ. ಈ ಸಂರಕ್ಷಿತ ಪ್ರದೇಶದೊಳಗೆ ಕೆಪಿಸಿಎಲ್ ಅಧಿಕಾರಿಗಳು ಯೋಜನೆಯ ಅನುಷ್ಠಾನಕ್ಕೆ ಗುರುತು ಮಾಡಿದರೂ ಎಎಸ್ಐ ಅಧಿಕಾರಿಗಳು ಅದನ್ನು ತಡೆಯದೇ ನಿದ್ದೆ ಹೊಡೆಯುತ್ತಿದ್ದಾರೆ ಎಂದು ಕುಟುಕಿದರು.
ಪರಿಸರವಾದಿಗಳೇನು ಇಂಜಿನಿಯರಾ?॒
ಪರಿಸರದ ಬಗ್ಗೆ ಅವರಿಗೇನು ಗೊತ್ತು ? ರಾಜ್ಯಕ್ಕೆ ಬೆಳಕು ನೀಡುವ ಬಗ್ಗೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿದೆ. ಇದನ್ನು ಸ್ಥಗಿತಗೊಳಿಸುವ ಅಥವಾ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸಾಗರ ಶಾಸಕ ಗೋಪಾಲಕೃಷ್ಣಬೇಳೂರು ಹೋರಾಟಗಾರರ ಬಗ್ಗೆ ನಿಕೃಷ್ಟವಾಗಿ ಮಾತನಾಡಿದ್ದಾರೆ. ಇಂದಿನ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿರುವ ಪರಿಸರ ಹೋರಾಟಗಾರ ಡಾ|| ಎಲ್.ಕೆ. ಶ್ರೀಪತಿ, ಅಜಯ್ಕುಮಾರ್ ಶರ್ಮಾ ಇಬ್ಬರೂ ಇಂಜಿನಿಯರೇ ಆಗಿದ್ದಾರೆ. ಪರಿಸರದ ಬಗ್ಗೆ ಆಳವಾದ ಅಧ್ಯಯನವನ್ನು ಮಾಡಿದ್ದಾರೆ. ಪರಿಸರ ಹೋರಾಟಗಾರರನ್ನು ಲಘುವಾಗಿ ಪರಿಗಣಿಸಬಾರದು ಎಂದು ಅಖಿಲೇಶ್ ಚಿಪಳಿ ಶಾಸಕ ಬೇಳೂರು ಅವರಿಗೆ ತಿರುಗೇಟು ನೀಡಿದರು.