ಶಿವಮೊಗ್ಗ : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ಮಹಿಳಾ ಭ್ರೂಣಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಬಿಜೆಪಿ ಜಿಲ್ಲಾ ಮಹಿಳಾ ಅಧ್ಯಕ್ಷರಾದ ಗಾಯತ್ರಿ ಮಲ್ಲಪ್ಪ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಳೆದ ೨ವರೆ ವರ್ಷದಲ್ಲಿ ೧೩೦೦ಕ್ಕೂ ಹೆಚ್ಚು ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆದಿದೆ. ಹುಬ್ಬಳ್ಳಿಯ ನೇಹಾ ಹಿರೇಮಠ್, ಬೆಂಗಳೂರು ಮತ್ತು ಮೈಸೂರುಗಳಲ್ಲಿ ಭೀಕರ ಅತ್ಯಾಚಾರ ಪ್ರಕರಣಗಳು ನಡೆದಾಗ, ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟಿಸಿತ್ತು. ಇದೇ ರೀತಿಯ ಅನೇಕ ಪ್ರಕರಣಗಳು ರಾಜ್ಯಾದ್ಯಂತ ನಡೆದಿದ್ದರೂ ಗೃಹಸಚಿವರು ನಿರ್ಲಕ್ಷ್ಯದಿಂದ ಉತ್ತರಿಸುತ್ತಾರೆ. ಸೂಕ್ತ ಕಾನೂನು ಕ್ರಮಕೈಗೊಳ್ಳುವಲ್ಲಿ ಸರ್ಕಾರ ಸೋತಿದೆ. ಸರ್ಕಾರದ ಕಮೀಷನ್ ಕಾಟಕ್ಕೆ ಏಳುಜನ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ೨೦ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಶಿಕ್ಷಕರು ಅಸಹಜ ಸಾವು ಕಂಡಿದ್ದಾರೆ. ಬಿಜೆಪಿ ಮಹಿಳಾ ಮೋರ್ಚಾದಿಂದ ಇಂದು ಇಡೀ ರಾಜ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಸರ್ಕಾರದ ಅಸಮರ್ಪಕ ಆಡಳಿತ ವೈಫಲ್ಯವನ್ನು ಖಂಡಿಸುತ್ತಿದ್ದೇವೆ ಎಂದರು.

ರಾಜ್ಯದಲ್ಲಿ ೭೫೦ಕ್ಕೂ ಹೆಚ್ಚು ಬಾಣಂತಿಯರು ಸೂಕ್ತ ಚಿಕಿತ್ಸೆ ಇಲ್ಲದೆ ಸಾವನ್ನಪ್ಪಿದ್ದಾರೆ. ೧೩೦೦ಕ್ಕೂ ಹೆಚ್ಚು ನವಜಾತ ಶಿಶುಗಳು ಮೃತಪಟ್ಟಿವೆ. ಪ್ರಿಯಾಂಕಖರ್ಗೆ ಆಪ್ತ ಡ್ರಗ್ಸ್ ಮಾಫಿಯಾದಲ್ಲಿ ಕೈಜೋಡಿಸಿದ್ದಾನೆ. ರಸ್ತೆ ಗುಂಡಿಗಳು ಮುಚ್ಚಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಹೊರ ರಾಜ್ಯಗಳ ಚಡ್ಡಿಗ್ಯಾಂಗ್ಗಳು ಬಂದು ದರೋಡೆಮಾಡಿ, ಭಯ ಹುಟ್ಟಿಸಿದ್ದರೂ ಕೂಡ ಅವರನ್ನು ಹಿಡಿಯುವ ಪ್ರಯತ್ನವಾಗಿಲ್ಲ. ಗಣಪತಿ ವಿಸರ್ಜನೆಗೆ ಸೂಕ್ತಭದ್ರತೆ ಒದಗಿಸದೇ ಹಲವೆಡೆ ಕೋಮುಗಲಭೆಗೆ ಕಾರಣವಾಗಿದೆ. ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.
ಮಹಿಳೆಯರ ಹೋರಾಟಕ್ಕೆ ಬೆಲೆ ಇಲ್ಲದಂತಾಗಿದೆ. ಅತಿವೃಷ್ಟಿ ಅನಾವೃಷ್ಟಿ ಪರಿಹಾರ ರೈತರಿಗೆ ವಿತರಿಸಿಲ್ಲ. ಯಾವುದೇ ರೈತರಿಗೆ ಅವನ ಖಾತೆಗೆ ಹಣ ಬಂದಿಲ್ಲ. ಕಾಡುಪ್ರಾಣಿಗಳಿಂದ ಬಲಿಯಾದ ಅಮಾಯಕರಿಗೆ ಪರಿಹಾರ ದೊರೆತಿಲ್ಲ. ಕೆಲವರಿಗಷ್ಟೇ ದೊರೆತ್ತಿದ್ದು, ಉಳಿದ ಸಂತ್ರಸ್ಥರು ಪರಿಹಾರಕ್ಕಾಗಿ ಸಂಕಷ್ಟಪಡುತ್ತಿದ್ದಾರೆ. ಜಾತಿಗಣತಿಯಲ್ಲೂ ಕೂಡ ಸಮರ್ಪಕವಾಗಿ ತರಬೇತಿ ನೀಡದೆ ಗಣತಿದಾರರು ಮನೆಯ ಮುಂದೆ ಗಂಟೆಗಟ್ಟಲೆ ಪರದಾಡುವಂತಹ ಪರಿಸ್ಥಿತಿಯನ್ನು ತಂದೊಡ್ಡಿ, ಸಾರ್ವಜನಿಕರಲ್ಲೂ ಕೂಡ ಗಣತಿ ಗೊಂದಲ ಸೃಷ್ಠಿಮಾಡಿ ಕೇಳಬಾರದ ಪ್ರಶ್ನೆಗಳನ್ನೆಲ್ಲಾ ಕೇಳಿ, ಸಂಶಯಕ್ಕೆ ಎಡೆಮಾಡಿಕೊಟ್ಟಿತ್ತು. ಸರ್ಕಾರ ಎಲ್ಲಾ ವಿಚಾರಗಳಲ್ಲೂ ಸಂಪೂರ್ಣ ವೈಫಲ್ಯವಾಗಿದ್ದು, ಬಿಟ್ಟಿ ಭಾಗ್ಯಗಳ ಆಮಿಷ್ಯದಿಂದ ಅಧಿಕಾರಕ್ಕೆ ಬಂದಿದೆ. ಅನೇಕ ಮಹಿಳೆಯರು ನಮಗೆ ಈ ಭಾಗ್ಯಗಳು ಬೇಡ. ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿ ಎಂದು ಹೇಳುತ್ತಿದ್ದಾರೆ. ಭ್ರೂಣಹತ್ಯೆಗಳನ್ನು ತಡೆಯುವಲ್ಲಿ ಮತ್ತು ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ಮಹಿಳಾ ಆಯೋಗ ಕೂಡ ವಿಫಲವಾಗಿದ್ದು, ಆಯೋಗದ ಅಧ್ಯಕ್ಷರು ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಸರ್ಕಾರ ಯಾವುದೇ ನಿರ್ಲಕ್ಷ್ಯ ತೋರದ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆದು ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜ್ಯೋತಿರಘು, ಮಂಗಳಾ ನಾಗೇಂದ್ರ, ನಗರ ಮಹಿಳಾ ಮೋರ್ಚಾದ ಅಧ್ಯಕ್ಷೆ ರಶ್ಮಿಶ್ರೀನಿವಾಸ್, ಪ್ರಮುಖರಾದ ಶಿವರಾಜು, ಚಂದ್ರಶೇಖರ್, ಕೆ.ವಿ. ಅಣ್ಣಪ್ಪ, ವಿನ್ಸೆಂಟ್ ರೋಡ್ರಿಗಸ್ ಇದ್ದರು.