ಶಿವಮೊಗ್ಗ : ಸಾಲ ವಸೂಲಾತಿಗೆ ರೈತನ ಮನೆಗೆ ನುಗ್ಗಿ ಬಲವಂತದಿಂದ ಎರಡು ಹಸು ಹಾಗೂ ಒಂದು ಎತ್ತನ್ನು ವಶಕ್ಕೆ ಪಡೆದ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ನಗರದ ಆಯ್ ಫೈನಾನ್ಸ್ನವರು ಸಿದ್ಲಿಪುರದ ಭರತ್ ಎಂಬ ರೈತನಿಗೆ ಮೂರು ಹಸುಗಳ ಖರೀದಿಗೆ ಎರಡು ಲಕ್ಷ ರೂ.ಗಳ ಸಾಲ ನೀಡಿದ್ದರು. ಅವರು ನಿರಂತರವಾಗಿ ಸಾಲವನ್ನು ಮರುಪಾವತಿಸುತ್ತಾ ಬಂದಿದ್ದು, ಒಂದೂವರೆ ಲಕ್ಷ ರೂ.ಗಳನ್ನು ಮರುಪಾವತಿ ಮಾಡಿದ್ದು, ೯,೩೦೦ ರೂ.ಗಳ ಒಂದು ಕಂತು ಬಾಕಿ ಇದ್ದು ಈ ಕಾರಣದಿಂದ ಫೈನಾನ್ಸ್ ಸಿಬ್ಬಂದಿಗಳು ಗೂಂಡಾಗಳೊಂದಿಗೆ ಆಗಮಿಸಿ ಬಲವಂತವಾಗಿ

ಕೊಟ್ಟಿಗೆಯಲ್ಲಿದ್ದ ಎರಡು ಹಸು ಮತ್ತು ಒಂದು ಎತ್ತನ್ನು ತೆಗೆದುಕೊಂಡು ಹೋಗಿ ಬೆಳಿಗ್ಗೆಯಿಂದಲೇ ಫೈನಾನ್ಸ್ ಕಛೇರಿಯ ಬಳಿ ಆ ಮೂಕ ಪ್ರಾಣಿಗಳಿಗೆ ಮೇವನ್ನು ನೀಡದೇ ಕೂಡಿ ಹಾಕಿದ್ದರು. ಈ ವಿಷಯ ತಿಳಿದ ರಾಜ್ಯ ರೈತಸಂಘದ ಜಿಲ್ಲಾ ಘಟಕ ಸ್ಥಳಕ್ಕೆ ತೆರಳಿ ಫೈನಾನ್ಸ್ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಫೈನಾನ್ಸ್ನವರು ಬಾಗಿಲು ಹಾಕಿ ತೆರಳಿದ್ದು, ಹಸುವನ್ನು ರೈತರ ಮನೆಗೆ ಮತ್ತೆ ವಾಪಾಸ್ಸು ನೀಡುವವರೆಗೆ ಫೈನಾನ್ಸ್ ಬಾಗಿಲು ತೆಗೆಯಲು ಬಿಡುವುದಿಲ್ಲ ಎಂದು ರೈತರು ಪಟ್ಟುಹಿಡಿದು ಕೂತಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಮಧ್ಯಪ್ರವೇಶಿಸಿ, ಅದೇ ಆಟೋದಲ್ಲಿ ಹಸುಗಳನ್ನು ಮರಳಿ ರೈತರ ಮನೆಗೆ ಕಳುಹಿಸಿದ್ದು, ಸಧ್ಯಕ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂದರ್ಭದಲ್ಲಿ ರೈತಸಂಘದ ಪ್ರಮುಖರಾದ ಹಿಟ್ಟೂರು ರಾಜು, ಚಂದ್ರಯ್ಯ, ರಾಘವೇಂದ್ರ, ಶೇಖರಪ್ಪ, ಪುರದಾಳು ನಾಗರಾಜ್, ಭಾಗ್ಯ ರಾಘವೇಂದ್ರ ಮೊದಲಾದವರಿದ್ದರು.