ಶಿವಮೊಗ್ಗ : ರಾಜ್ಯ ಸರ್ಕಾರಕ್ಕೆ ನೇರವಾಗಿ ಆರ್ಎಸ್ಎಸ್ ಹೆಸರು ಹೇಳಲು ತಾಕತ್ತಿಲ್ಲದೆ, ವಿವಿಧ ಸಂಘ ಸಂಸ್ಥೆಗಳ ಹೆಸರನ್ನು ಉಲ್ಲೇಖಿಸಿ ಆರ್ಎಸ್ಎಸ್ ಶಾಖೆಗಳಿಗೆ ನಿರ್ಭಂಧ ಹಾಕಲು ಮುಂದಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹರಿಹಾಯ್ದರು. ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದಿನ ಸಿಎಂ ಜಗದೀಶ್ ಶೆಟ್ಟರ್ ಆದೇಶ ಈಗ ಜಾರಿ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಶಾಲಾ ಆವರಣದಲ್ಲಿ ಕುರಿ, ಕೋಳಿ ಕೊಯ್ದು ಭೋಜನ ಕೂಟ ಏರ್ಪಡಿಸಿರುವುದು ಗಮನಕ್ಕೆ ಬಂದಿದ್ದರಿಂದಾಗಿ ಅದನ್ನು ನಿಯಂತ್ರಿಸಲು ಹಿಂದಿನ ಸರ್ಕಾರ ಆದೇಶ ಮಾಡಿತ್ತು ಎಂದರು.
ಸಂಘ ನೂರು ವರ್ಷ ಆಚರಿಸಿಕೊಳ್ಳುತ್ತಿರುವುದನ್ನು ಸಹಿಸದೆ ನಿರ್ಬಂಧ ಹಾಕಲು ಸರ್ಕಾರ ಮುಂದಾಗಿದೆ. ಆರ್ಎಸ್ಎಸ್ ಆಸ್ತಿಗಳ ಲೆಕ್ಕ ಪಡೆಯುವುದಾಗಿಯೂ ಹೇಳುತ್ತಿದ್ದಾರೆ. ಯಾರ ತಲೆ ಒಡೆದು ಸಂಘ ಆಸ್ತಿ ಮಾಡಿಲ್ಲ. ದಾನದ ರೂಪದಲ್ಲಿಯೋ ಅಥವಾ ಟ್ರಸ್ಟ್ ಮೂಲಕವೋ ಆಸ್ತಿ ಬಂದಿದೆ ಎಂದರು.

ಸಂಘದ ಚಟುವಟಿಕೆ ನಿರ್ಭಂಧ ಹಾಕಲು ಪ್ರಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ. ಎಐಸಿಸಿ ಅಧ್ಯಕ್ಷರ ಮಗನ ಪತ್ರಕ್ಕೆ ಕ್ರಮ ಕೈಗೊಳ್ಳದಿದ್ದರೆ ಕಳಂಕ ಬರಲಿದೆ ಎಂದು ಭಾವಿಸಿ ಸಿಎಂ ಸಿದ್ದರಾಮಯ್ಯನವರು ಒಂದು ಆದೇಶ ಮಾಡಿದ್ದಾರೆ. ಹರಿಪ್ರಸಾದ್ ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಅದಕ್ಕಾಗಿ ವರಿಷ್ಠರನ್ನು ಓಲೈಸಲು ಹೇಳಿಕೆ ನೀಡುತ್ತಿದ್ದಾರೆ ಎಂದರು.

ರಸ್ತೆ ಗುಂಡಿಗಳನ್ನು ಮುಚ್ಚಲಾಗದ ದುಸ್ಥಿತಿ ಸರ್ಕಾರದ್ದಾಗಿದ್ದು, ಅದನ್ನು ಮುಚ್ಚಿಕೊಳ್ಳಲು ಆರ್ಎಸ್ಎಸ್ ನಿರ್ಭಂಧಿಸಲು ಮುಂದಾಗಿದ್ದಾರೆ. ಡಿಜೆ ಹಳ್ಳಿ, ಕೆಜೆ ಹಳ್ಳಿಯಲ್ಲಿ ಗಲಭೆ ಮಾಡಿದವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಟಿಫಿನ್ ಕ್ಯಾರಿಯರ್ನಲ್ಲಿ ಬಾಂಬ್ ಸ್ಪೋಟಿಸಿದರೆ ಬ್ರದರ್ ಎನ್ನುವ ನಿಮಗೆ ರಾಷ್ಟ್ರೀಯತೆ ಯಾವುದು, ದೇಶದ್ರೋಹಿ ಚಟುವಟಿಕೆಯಾವುದು ಎಂಬುದು ಕಂಡು ಹಿಡಿಯಲು ಆಗುತ್ತಿಲ್ಲ ಎಂದರು.
ನೀರುಗಂಟಿ, ಆಶಾ ಕಾರ್ಯಕರ್ತರು ಸಂಬಳವಿಲ್ಲವೆಂದು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಗೃಹಲಕ್ಷ್ಮೀ ಹಣ ಬಂದಿಲ್ಲವೆಂದು ಡಿಸಿಎಂ ಮುಂದೆಯೇ ದೂರುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳ ವರ್ಗಾವಣೆಯಾಯಿತು ಈಗ ರಿನಿವಲ್ ಹೆಸರಿನಲ್ಲಿ ಹಣವಸೂಲಿ ಮಾಡಿ ಬಿಹಾರ ಚುನಾವಣೆಗೆ ಫಂಡ್ ಮಾಡಲಾಗುತ್ತಿದೆ ಎಂದು ಆರೋಪಿಸಿದರು.