
ನೆಗಿಟೀವ್ ಥಿಂಕಿಂಗ್
ವಾರದ ಅಂಕಣ- 61
ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ,
(ಮೂಲ- ಅರಹತೊಳಲು, ಭದ್ರಾವತಿ)
ಈ ಜಗತ್ತಿನಲ್ಲಿ ನೀವು ಬಹಳ ಶುದ್ಧ, ಸಂಪನ್ನ, ಅತಿಯಾದ ಒಳ್ಳೆಯ ವ್ಯಕ್ತಿ ಆಗಬೇಡಿ. ನಿಮ್ಮ ಮಗ್ಗುಲಲ್ಲೇ ನಿಮ್ಮನ್ನು ತುಳಿಯುವ, ನಿಮ್ಮನ್ನು ವಂಚಿಸುವ ಕಿರಾತಕ ದುಶ್ಮನ್ ಗಳಿದ್ದಾರೆ ಎಚ್ಚರ..!. ಇದು ಈ ಜಗದ ನೈಜ ಚಿತ್ರಣ ಎಂಬುದು ಎಲ್ಲರಿಗೂ ಗೊತ್ತಿದೆ, ಆದರೂ ಬಹಳಷ್ಟು ಜನ ಅಮಾಯಕರಾಗಿ ಕೆಲವೇ ಕೆಲವು ಕಿರಾತಕ ಮನಸುಗಳಿಗೆ ನಮಸ್ತೆ ಹೊಡೆದು ಒಳ್ಳೆಯವರಾಗಲು ಒಳ್ಳೆಯತನ ತೋರಿ ವಂಚನೆಗೊಳಗಾಗುವ ಚಿತ್ರಣವೇ ಈ ವಾರದ ನೆಗೆಟಿವ್ ಥಿಂಕಿಂಗ್ ಅಂಕಣದ ವಿಷಯ.
ನಾವು ಸಾಕಷ್ಟು ಅಪರಾಧ ಪ್ರಕರಣಗಳನ್ನು, ವಂಚನೆಯ ವಿಷಯಗಳನ್ನು ಕೇಳಿದ್ದೇವೆ, ನೋಡಿದ್ದೇವೆ ಅನುಭವಿಸಿದ್ದೇವೆ ಅದನ್ನು ಅನುಭವಿಸಿ, ವ್ಯಥೆಪಟ್ಟಿದ್ದೇವೆ ಅಲ್ಲವೇ?
ಆದರೂ ನಾವು ಒಳ್ಳೆಯವರಾಗಲು ಬರೀ ಒಳ್ಳೆಯವರಲ್ಲ, ಅತಿಯಾದ ಒಳ್ಳೆಯವರಾಗಲು ಕಂಕಣಬದ್ಧರಾಗಿ ವಂಚನೆಗೊಳಗಾಗುವ ನೂರಾರು ನಿದರ್ಶನಗಳನ್ನು ಕಣ್ಣಾರೆ ಕಂಡ ಚಿತ್ರಣ ನಮ್ಮ ಮುಂದಿದೆ ಅಲ್ಲವೇ?

ನಮ್ಮೊಂದಿಗೆ ಜೊತೆಜೊತೆಗೆ ಹೆಜ್ಜೆ ಹಾಕುವ ನಾಟಕದ ಕೆಲ ವಿಕೃತ ಮನಸ್ಸುಗಳು, ನಮ್ಮ ನಡುವೆ ಇನ್ನಿಲ್ಲದನ್ನು ಹಾಕಿ, ಬದುಕನ್ನು ಅದರಲ್ಲಿ ಒಳ್ಳೆಯತನದ ಬದುಕನ್ನು ಮಾರಿಬಿಡುತ್ತಾರೆ ಎಂಬುದನ್ನು ಬಹಳಷ್ಟು ಜನ ಒಪ್ಪಿಕೊಳ್ಳುತ್ತಾರೆ.
ಇತ್ತೀಚಿನ ದಿನಮಾನಗಳಲ್ಲಿ ನಮ್ಮ ನಡುವಿನ ರಕ್ಷಣಾ ವ್ಯವಸ್ಥೆಯಲ್ಲಿ ಅಪರಾಧ ಚಟುವಟಿಕೆಗಳು, ಈ ಸಾಮಾಜಿಕ ಜಾಲತಾಣಗಳ ಹಾಗೂ ಆಧುನಿಕ ತಂತ್ರಜ್ಞಾನದ ಮೊಬೈಲ್ ಗಳಿಂದ ನಡೆಯುತ್ತಿರುವುದು ಸರ್ವೇಸಾಮಾನ್ಯವಾಗಿದೆ. ನಮ್ಮ ಮುಗ್ಧತೆ ಅಥವಾ ಒಳ್ಳೆಯತನವು ಗೊತ್ತಿಲ್ಲ, ಆದರೆ ವಂಚನೆಗೆ ಒಳಗಾಗುವ ಮೋಸ ಹೋಗುವ ಪ್ರಕರಣಗಳು ಎಷ್ಟೇ ತಿಳುವಳಿಕೆ ಇದ್ದರೂ ನಿತ್ಯ ಕಂಡುಬರುತ್ತಿರುವುದು ನಮ್ಮ ನಡುವಿನ ದುರಂತವಲ್ಲವೇ?








ದೊಡ್ಡ ದೊಡ್ಡ ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸುವುದು ಅನಗತ್ಯ ಎನಿಸುತ್ತದೆ. ನಾವು ನಮ್ಮನ್ನು ಒಮ್ಮೆ ಗಮನಿಸೋಣ, ಗಮನಿಸಿಕೊಳ್ಳೋಣ. ನಮ್ಮ ನಡುವೆ ಇರುವವರನ್ನು ಒಮ್ಮೆ ಸಮಗ್ರವಾಗಿ ಅವಲೋಕಿಸೋಣ, ಅಲ್ಲಿ ಯಾವುದಾದರೂ ಒಂದು ಅಥವಾ ಎರಡು ವಿಕ್ಷಿಪ್ತ ಮನಸ್ಸಿನ ವ್ಯಕ್ತಿ ಗೆಳೆಯನಾಗಿರಲೇಬೇಕು, ಇದನ್ನು ಹೌದು ಎನ್ನಲೇಬೇಕು. ಹಾಗಾಗಿ ನಾವು ಅಂದರೆ ಈ ಸಮಾಜದ ಬಹಳಷ್ಟು ವಂಚನೆಗೊಳಗಾಗುವ ಜನ ಅರ್ಥ ಮಾಡಿಕೊಳ್ಳಬೇಕಿರುವುದು ಅತ್ಯಂತಮುಖ್ಯ. ಇಲ್ಲಿ ಬಾರಿ ಒಳ್ಳೆಯ ವ್ಯಕ್ತಿಯಾಗದಿರಲು ಪ್ರಯತ್ನಿಸಬೇಕಿದೆ ಅಲ್ಲವೇ?
ಇತ್ತೀಚೆಗೆ ಉತ್ತರ ಕರ್ನಾಟಕದಲ್ಲಿ ನಡೆದ ಘಟನೆಯೊಂದನ್ನು ನಿಮಗೆ ಹೇಳುವುದು ಇಲ್ಲಿ ಅನಿವಾರ್ಯ ವೆನಿಸುತ್ತದೆ.
ಏಕೆಂದರೆ ಆ ಘಟನೆಯ ಒಳಗೆ ವಂಚನೆಗೊಳಗಾದ ವ್ಯಕ್ತಿಯ ಚಿತ್ರಣವನ್ನು ಗಮನಿಸಿ, ಆತ ಸುಸಂಸ್ಕೃತ ನಾಗರಿಕ ಶಿಕ್ಷಕ ವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದ ಡಿಇಡಿ, ಟಿಸಿಎಚ್ ಪೂರ್ವದಲ್ಲಿನ ಶಿಕ್ಷಣಪಡೆದು ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ನಂತರ ಪುಟ್ಟದೊಂದು ಆಸ್ತಿ ಮಾಡಿಕೊಂಡು ಬದುಕುತ್ತಿದ್ದರು. ಬಂದ ಪಿಂಚಣಿಯನ್ನು ಕೂಡಿಟ್ಟು ಅದರ ಬಡ್ಡಿ ಹಣದಲ್ಲಿ ಹಾಗೂ ನಿವೃತ್ತಿ ವೇತನದಲ್ಲಿ ಬದುಕು ಸಾಧಿಸುತ್ತಿದ್ದರು. ಆ ಸಂದರ್ಭದಲ್ಲಿ ಸುಮಾರು ಮತ್ತು 30 ವರ್ಷ ವಯಸ್ಸಿನ ಮಹಿಳೆ ಒಬ್ಬಳು ಇವರಿಗೆ ಫೋನ್ ಮಾಡಿ, ವಿಳಾಸ ಪಡೆದು ಮನೆಗೆ ಬಂದು ನಿಮಗೆ ಒಂದು ಲಕ್ಷಕ್ಕೆ ಒಂದೇ ವರ್ಷದಲ್ಲಿ ಎರಡು ಲಕ್ಷ ಹಣ ಕೊಡುವುದಾಗಿ ವಂಚಿಸಿದಳು. ಆ ವಂಚನೆ ಅರಿವಾಗದ ನಿವೃತ್ತ ಶಿಕ್ಷಕ ಮೊದಲು ಒಂದು ಲಕ್ಷವನ್ನು ಕೊಟ್ಟುಬಿಟ್ಟರು. ಮುಂದಿನ ವರ್ಷ ಮುಗಿಯುವದರೊಳಗೆ ಎರಡು ಲಕ್ಷ ತೆಗೆದುಕೊಂಡು ಬಂದ ಆ ಮಹಿಳೆ ಈ ನಿವೃತ್ತ ಶಿಕ್ಷಕರಿಗೆ ನಂಬಿಕೆಯ ವ್ಯಕ್ತಿತ್ವವನ್ನು ತೋರಿಸಿದಂತೆ ನಾಟಕ ಮಾಡಿದಳು.

ಮನುಜ ಸಹಜ ಗುಣವೆಂಬಂತೆ ಆಸೆಯಿಂದ ಆ ನಿವೃತ್ತ ಶಿಕ್ಷಕ ತನ್ನಲ್ಲಿದ್ದ ಎಲ್ಲಾ ಹಣವನ್ನು ಅಂದರೆ ಒಟ್ಟು ಏಳುವರೆ ಲಕ್ಷ ಮತ್ತು ಆಗಬಂದ ಎರಡು ಲಕ್ಷ ಹಣವನ್ನು ಆಕೆಗೆ ಒಪ್ಪಿಸಿದರು. ಆರು ತಿಂಗಳ ತನಕ ಫೋನ್ ಮಾಡಿದಾಗ ಮಾತನಾಡುತ್ತಿದ್ದ, ಆ ಮಹಿಳೆ ನಂತರ ತಿರುಗಿಯೂ ನೋಡಲಿಲ್ಲ ಒಮ್ಮೆಲೇ ಕಂಗಾಲಾದ ನಿವೃತ್ತ ಶಿಕ್ಷಕ ಅನಿವಾರ್ಯವಾಗಿ ಪೊಲೀಸರ ಮೊರೆ ಹೋದರು. ಆಕೆಯ ಫೋನ್ ನಂಬರ್ ಬಿಟ್ಟರೆ ಯಾವ ವಿವರ ಅಥವಾ ಆಕೆಯ ಫೋಟೋ ಸಹ ಇಲ್ಲದೆ ಇದ್ದದ್ದರಿಂದ ಆಕೆಯನ್ನು ಪತ್ತೆ ಹಚ್ಚುವುದು ಕಷ್ಟವಾಯಿತು. ಈಗ ಆ ನಿವೃತ್ತ ಶಿಕ್ಷಕ ದಿನದ ತುತ್ತಿಗಾಗಿ ಕೂಲಿ ಮಾಡುವುದು ಅನಿವಾರ್ಯವಾಗಿದೆ. ಅದಕ್ಕೆ ಹೇಳುವುದು ಆಸೆ ಎಂಬ ಬಿಸಿಲ ಕುದುರೆಗೆ ಏಕೆ ಏರುವೆ. ಅತಿಯಾದ ಆಸೆ ಒಳ್ಳೆಯದಲ್ಲ ಎಂಬುದು ಒಂದು ಕಡೆಯ ವಾದವಾದರೆ ನಮ್ಮ ನಡುವಿನ ನಂಬಿಕೆ ಎಲ್ಲೂ ಯಾರ ಬಳಿಯೂ ಶಾಶ್ವತತೆ ಕಂಡುಕೊಳ್ಳದಿರಲಿ.
ಏಕೆಂದರೆ ಯಾರನ್ನೂ ನಂಬದ ಜಗದಲ್ಲಿ ನಾವು ಇದ್ದೇವೆ ಎಂಬುದು. ನಮ್ಮ ಮನದಲ್ಲಿ ನಂಬಿಕೆ ಮೋಸ ಮಾಡುವ ವಂಚನೆಯ ದಾರಿಯಾಗಬಹುದು. ಇದ್ದ ಪುಟ್ಟ ಆದಾಯದಲ್ಲಿ ಸುಂದರ ಬದುಕು ಕಟ್ಟಿಕೊಂಡಿದ್ದ ಆ ವ್ಯಕ್ತಿಯ ಕಥನ ಇಲ್ಲಿ ಅರ್ಥಪೂರ್ಣ ಹಾಗೂ ನಮ್ಮ ಒಳ್ಳೆಯತನವನ್ನು ಪ್ರಶ್ನಿಸುವಂಥಾಗಲಿ ಯಾವುದೂ ಅತಿ ಆಗದಿರಲಿ ಅಲ್ಲವೇ?
ಜಾಸ್ತಿ ಚಿರಪರಿಚಿತರಾಗೋದು ಬ್ಯಾಡ ಕಣ್ರೀ…!
ಸಮಾಜದ ಬಗ್ಗಲಲ್ಲಿ ನಾವು ಅತಿ ಹೆಚ್ಚು ಪರಿಚಿತರಾಗೋದು ಒಳ್ಳೆಯದಲ್ಲ ಕಣ್ರೀ. ನಮಗೆ ಅದೇ ಕೆಲವೊಮ್ಮೆ ಮಾರಕವಾಗಿ ಬಿಡುತ್ತದೆ. ಸಹಾಯ ಮಾಡುತ್ತೇವೆ ಎಂಬ ಕಾರಣಕ್ಕೆ ನಮ್ಮನ್ನು ಬಳಸಿಕೊಂಡು ನಮ್ಮ ಸಹಾಯವನ್ನು ಪಡೆದು ಸ್ಮರಿಸುವವರ ಸಂಖ್ಯೆ ಇದ್ದರೂ ಸಹ ಅದನ್ನೇ ಲಾಭ ಮಾಡಿಕೊಂಡು ಎತ್ತುವಳಿ ದಂಧೆಗೆ ಇಳಿಯುವ ಕಿರಾತಕ ಮನಸುಗಳು ಕೇವಲ ಪುರುಷರಿಗೆ ಮಾತ್ರ ಸೀಮಿತವಾಗಿಲ್ಲ ಮಹಿಳೆಯರೂ ಸಹ ಅಂತಹದ್ದೇ ನಾಟಕ ಮಾಡುತ್ತಾರೆ ಎಂಬುದನ್ನು ಕಣ್ಣಾರೆ ಕಂಡಿದ್ದೇವಲ್ಲವೇ?



ಯಾವತ್ತೂ ಏನೋ ಮಾಡಿದ ಚಿಕ್ಕ ಸಹಾಯವನ್ನು ಊರಲ್ಲಿ ಹಲಗೆ ಹೊಡೆದು ಹೇಳುವ ಎಷ್ಟೋ ಜನರ ನಡುವೆ ಬಲಗೈ ವಿಷಯ ಎಡಗೈಗೆ ಗೊತ್ತಿಲ್ಲದಂತೆ ಬದುಕುವ ಅದರ ಹಾದಿಯಲ್ಲಿ ಸಹಾಯ ಮಾಡುವ ಅದೆಷ್ಟೋ ಜನರು ನಮ್ಮ ನಡುವೆ ಇದ್ದಾರೆ. ಅವರ ವ್ಯಕ್ತಿತ್ವ ದಿಂದ ಅವರು ಚಿರ ಪರಿಚಿತರಾಗಿರುತ್ತಾರೆ.
ಆದರೆ ಸಹಾಯ ಪಡೆದವರಲ್ಲಿ ಇರುವ ಕೆಲ ಕಿರಾತಕ ಮನಸುಗಳು, ವಿಕೃತ ವ್ಯಕ್ತಿತ್ವಗಳು ಕೊನೆಯ ಹಂತದಲ್ಲಿ ಬ್ಲಾಕ್ ಮೇಲ್ ಗೆ ಇಳಿಯುವುದನ್ನು ಕಣ್ಣಾರೆ ಕಂಡಿದ್ದೇವೆ, ನೋಡಿದ್ದೇವೆ ಅಲ್ಲವೇ?
ಹಾಗಾಗಿ ಹೆಚ್ಚು ಚಿರಪರಿಚಿತರಾಗುವುದು ಒಳ್ಳೆಯದಲ್ಲ ಕಣ್ರೀ ಏನಂತೀರಿ?